ಸುಳ್ಯ: ಮಂಡೆಕೋಲು ಗ್ರಾಮದ ಕೊಡೆಂಚಿಕಾರ್ ನಲ್ಲಿರುವ ಶ್ರೀ ಕೊರಗ ತನಿಯ ದೈವಸ್ಥಾನದಲ್ಲಿ 22 ನೇ ವರ್ಷದ ಕೊರಗ ತನಿಯ ಮತ್ತು ಗುಳಿಗ ದೈವಗಳ ನೇಮೋತ್ಸವವು. ಜರಗಿತು. ಗಣಪತಿ ಹೋಮ, ನಾಗಪೂಜೆ, ಶನಿ ಪೂಜೆ, ಹೂವಿನಪೂಜೆ ಜರಗಿತು. ಕಲಶ ಸ್ನಾನದ ನಂತರ ಸ್ಥಳೀಯ ಭಜನಾ ತಂಡಗಳಿಂದ ಭಜನಾ ಕಾರ್ಯಕ್ರಮ ನಡೆಯಿತು. ಮಧ್ಯಾಹ್ನ ಮಹಾಪೂಜೆ, ಪ್ರಸಾದ ವಿತರಣೆ, ಅನ್ನ ಸಂತರ್ಪಣೆಯು ನಡೆಯಿತು.
ಸಂಜೆ
ಶ್ರೀ ಗುಳಿಗ ದೈವದ ಕೋಲ ನಡೆದು ಪ್ರಸಾದ ವಿತರಣೆಯಾಯಿತು. ರಾತ್ರಿ ಮಹಾಪೂಜೆಯ ಬಳಿಕ ಭಂಡಾರ ತೆಗೆದು ಕೊರಗಜ್ಜ ದೈವದ ಕೋಲ ನಡೆಯಿತು. ಈ ಬಾರಿ ಭಕ್ತರ ಹರಿಕೆಯ ಕೋಲವೂ ಸೇರಿ, ಏಕಕಾಲದಲ್ಲಿ ಏಳು ಕೊರಗಜ್ಜ ದೈವದ ನರ್ತನ ಸೇವೆ ಅತ್ಯಂತ ವಿಜೃಂಭಣೆಯಿಂದ ಜರಗಿತು. ರಾತ್ರಿ ಅನ್ನಸಂತರ್ಪಣೆಯ ಬಳಿಕ ಶ್ರೀ ಕೊರಗ ತನಿಯ ದೈವಕ್ಕೆ ಅಪಾರ ಸಂಖ್ಯೆಯಲ್ಲಿ ಭಕ್ತರು ಹೂಮಾಲೆ ಅರ್ಪಿಸಿದರು. ಇಡೀ ರಾತ್ರಿ ದೈವಗಳ ನರ್ತನ ಸೇವೆ ಕೋಲ ನಡೆದು ಮರುದಿನ ಬೆಳಿಗ್ಗೆ ಪ್ರಸಾದ ವಿತರಣೆ, ಹರಕೆಯ ತುಲಾಭಾರ ಸೇವೆಯು ನಡೆಯಿತು. ಸಹಸ್ರಾರು ಸಂಖ್ಯೆಯಲ್ಲಿ ಭಕ್ತರು ಭಾಗವಹಿಸಿ ದೈವದ ನರ್ತನ ಸೇವೆಯನ್ನು ಕಣ್ತುಂಬಿಕೊಂಡರು.
ಕ್ಷೇತ್ರದ ಆಡಳ್ತೆದಾರ ಕೃಷ್ಣಪ್ಪ ಕೊಡೆಂಚಿಕಾರ್ ಹಾಗೂ ಊರವರು, ಸಮಿತಿ ಸದಸ್ಯರು ಮತ್ತು ವಿವಿಧ ಸಂಘ ಸಂಸ್ಥೆಗಳ ಸದಸ್ಯರ ನೆರವಿನೊಂದಿಗೆ ನೇಮೋತ್ಸವವು ವಿಜೃಂಭಣೆಯಿಂದ ಜರಗಿತು.