ಮಂಗಳೂರು:ಪತ್ರಕರ್ತರು ಗ್ರಾಮ ವಾಸ್ತವ್ಯ ಮಾಡಿದ ಸುಳ್ಯ ತಾಲೂಕಿನ ಕೊಲ್ಲಮೊಗ್ರ, ಹರಿಹರ ಗ್ರಾಮಗಳ ನೆಟ್ವರ್ಕ್ ಸಮಸ್ಯೆ ದ.ಕ. ಜಿಲ್ಲಾ ಅಭಿವೃದ್ಧಿ ಸಮನ್ವಯ ಮತ್ತು ಉಸ್ತುವಾರಿ (ದಿಶಾ) ಸಮಿತಿ ಸಭೆಯಲ್ಲಿಯೂ ಪ್ರತಿಧ್ವನಿಸಿತು. ಗ್ರಾಮ ವಾಸ್ತವ್ಯ ಸಂದರ್ಭ ನಡೆದ ಅಹವಾಲು ಸ್ವೀಕಾರ ಸಂದರ್ಭದಲ್ಲಿ ನೆಟ್ ವರ್ಕ್ ಸಮಸ್ಯೆಗಳ ಬಗ್ಗೆ ಸಾರ್ಜನಿಕರು ದೂರಿದ್ದರು. ಬಿಎಸ್ ಎನ್ ಎಲ್ ನೆಟ್ವರ್ಕ್ ಸಮಸ್ಯೆಯ ಬಗ್ಗೆ ಗ್ರಾಮಸ್ಥರು ಜಿಲ್ಲಾಧಿಕಾರಿಗಳ ಗಮನಕ್ಕೆ ತಂದಿದ್ದರು. ಈ ಬಗ್ಗೆ ದಕ್ಷಿಣ ಕನ್ನಡ ಜಿಲ್ಲಾ
ಕಾರ್ಯನಿರತ ಪತ್ರಕರ್ತರ ಸಂಘದ ವತಿಯಿಂದ ಸಮಸ್ಯೆ ನಿವಾರಣೆಗೆ ಸಂಸದರಿಗೆ ಮನವಿ ಮಾಡಲಾಗಿತ್ತು.ಸಂಸದ ನಳಿನ್ ಕುಮಾರ್ ಕಟೀಲು ಅವರ ಅಧ್ಯಕ್ಷತೆಯಲ್ಲಿ ಬುಧವಾರ ದ.ಕ. ಜಿಲ್ಲಾ ಪಂಚಾಯತ್ನ ನೇತ್ರಾವತಿ ಸಭಾಂಗಣದಲ್ಲಿ ನಡೆದ ದಿಶಾ ಸಭೆಯಲ್ಲಿ ಗ್ರಾಮೀಣ ಭಾಗದ ನೆಟ್ವರ್ಕ್ ಸಮಸ್ಯೆ ಚರ್ಚೆಗೆ ಗ್ರಾಸವಾಯಿತು.
ಗ್ರಾಮಗಳಲ್ಲಿ ನೆಟ್ವರ್ಕ್ ಸಮಸ್ಯೆ ನಿವಾರಣೆಗೆ ಬಿಎಸ್ಸೆನ್ನೆಲ್ಗೆ ಸಂಸದ ನಳಿನ್ಕುಮಾರ್ ಕಟೀಲ್ ಹಾಗೂ ಜಿಲ್ಲಾಧಿಕಾರಿ ಮುಲ್ಲೈ ಮುಗಿಲನ್
ಸೂಚನೆ ನೀಡಿದರು. ಗ್ರಾಮಗಳಲ್ಲಿ ವಿದ್ಯುತ್ ನಿಲುಗಡೆಯಾಗುವ ಸಂದರ್ಭ ಬಿಎಸ್ಎನ್ಎಲ್ ಟವರ್ಗಳಲ್ಲಿ ನೆಟ್ವರ್ಕ್ ಸಮಸ್ಯೆ ಉಂಟಾಗು ತ್ತಿದೆ. ಕೊಲ್ಲಮೊಗ್ರ ಗ್ರಾಮದಲ್ಲಿಯೂ ಈ ಸಮಸ್ಯೆ ಇದೆ. ಸೂಕ್ತ ಕ್ರಮ ವಹಿಸಿ ಎಂದು ಜಿಲ್ಲಾಧಿಕಾರಿ ಮುಲ್ಲೈ ಮುಗಿಲನ್ ಅಧಿಕಾರಿಗಳಿಗೆ ತಿಳಿಸಿದರು. ದ.ಕ. ಟೆಲಿಕಾಂ ಜಿಲ್ಲೆಗೆ 196 ಹೊಸ ಬ್ಯಾಟರಿಗಳು ಬಂದಿದ್ದು, ಈಗಾಗಲೇ ಕುಗ್ರಾಮಗಳ ಟವರ್ಗಳಿಗೆ ಅಳವಡಿಸಲಾಗಿದೆ ಎಂದು ಅಧಿಕಾರಿಗಳು ತಿಳಿಸಿದರು. ಕೊಲ್ಲಮೊಗ್ರು ಟವರ್ನ ಬ್ಯಾಟರಿಯನ್ನು ಬದಲಾಯಿಸುವಂತೆ ಸಂಸದರು ಈ ಸಂದರ್ಭ ಸೂಚನೆ ನೀಡಿದರು.
ಜಲಜೀವನ್ ಮಿಷನ್ ಕಾಮಗಾರಿಯ ವಿಳಂಬ, ಅಪೂರ್ಣವಾಗಿರುವ ಬಹುಗ್ರಾಮ ಕುಡಿಯುವ ನೀರಿನ ಯೋಜನೆಗಳ ಬಗ್ಗೆ ಚರ್ಚೆ ನಡೆಯಿತು.
ಈಗಾಗಲೇ ನೀರಿನ ಸಮಸ್ಯೆ ಕಾಣಿಸಿಕೊಂಡಿರುವುದರಿಂದ ಇದು ಇನ್ನಷ್ಟು ಕಾಡುವ ಸಾಧ್ಯತೆ ಇದೆ. ಹಾಗಾಗಿ ಬಹುಗ್ರಾಮ ಕುಡಿಯುವ ನೀರಿನ ಯೋಜನೆಗಳನ್ನು, ಜಲಜೀವನ್ ಮಿಶನ್ನಡಿ ನೀರು ಪೂರೈಕೆಯನ್ನು ತುರ್ತುಗೊಳಿಸ ಬೇಕು ಎಂದು ಸಂಸದ ನಳಿನ್ ಕುಮಾರ್ ಅಧಿಕಾರಿಗಳಿಗೆ ಸೂಚಿಸಿದರು.
ಸುಬ್ರಹ್ಮಣ್ಯದಿಂದ ಪುತ್ತೂರುವರೆಗಿನ ರೈಲು ಮಾರ್ಗದ ವಿದ್ಯುದ್ದೀಕರಣ ಕಾಮಗಾರಿ ಮುಗಿಯುತ್ತಾ ಬಂದಿದೆ. ವಯರಿಂಗ್ ನಡೆಯುತ್ತಿದೆ. ಸುಬ್ರಹ್ಮಣ್ಯ ನಿಲ್ದಾಣದಲ್ಲಿ ಮೂಲ ಸೌಕರ್ಯಗಳ ಕಾಮಗಾರಿ ಪ್ರಗತಿಯಲ್ಲಿದೆ ಎಂದು ರೈಲ್ವೇ ಅಧಿಕಾರಿಗಳು ಸಭೆಯಲ್ಲಿ ಮಾಹಿತಿ ನೀಡಿದರು.
ಪ್ರಧಾನಮಂತ್ರಿ ವಿಶ್ವಕರ್ಮ ಯೋಜನೆಯಲ್ಲಿ ಈಗಾಗಲೇ 14,455 ಫಲಾನುಭವಿಗಳು ನೋಂದಾಯಿಸಿಕೊಂಡಿದ್ದಾರೆ. ಕಳೆದ ಕೆಲವು ದಿನಗಳಿಂದ ಸರ್ವರ್ ಸಮಸ್ಯೆ ಯಿಂದಾಗಿ ದಾಖಲಾತಿಯಲ್ಲಿ ವಿಳಂಬವಾಗಿದೆ. ಫಲಾನುಭವಿಗಳ ಹೆಸರನ್ನು ನೋಂದಾಯಿಸಲು ವಿವಿಧ ಸ್ಥಳಗಳಲ್ಲಿ ಶಿಬಿರಗಳನ್ನು ನಡೆಸಲಾಗುತ್ತದೆ ಎಂದು ಅಧಿಕಾರಿಗಳು ಮಾಹಿತಿ ನೀಡಿದರು. ಮಂಗಳೂರು ತಾಲೂಕಿನ ಗಂಜಿಮಠದಲ್ಲಿ ನಿರ್ಮಾಣವಾಗುತ್ತಿರುವ ಪ್ಲಾಸ್ಟಿಕ್ ಪಾರ್ಕ್ನ ಕಟ್ಟಡ ಕಾಮಗಾರಿ ಆರು ತಿಂಗಳಲ್ಲಿ ಮುಕ್ತಾಯವಾಗಲಿದೆ ಎಂದು ಅಧಿಕಾರಿಗಳು ತಿಳಿಸಿದರು.









