ಸುಳ್ಯ:ಸುದೀರ್ಘ ಐದು ವರ್ಷದ ಬಳಿಕ ಕೊಲ್ಲಮೊಗ್ರದ ಬಿಎಸ್ಎನ್ಎಲ್ ನೆಟ್ವರ್ಕ್ ಸಮಸ್ಯೆಗೆ ಪರಿಹಾರ ಸಿಕ್ಕಿದೆ. ಕೊಲ್ಲಮೊಗ್ರದಲ್ಲಿ ದ.ಕ.ಜಿಲ್ಲಾ ಕಾರ್ಯನಿರತ ಪತ್ರಕರ್ತರ ಸಂಘದ ನೇತೃತ್ವದಲ್ಲಿ ಪತ್ರಕರ್ತರ ಗ್ರಾಮ ವಾಸ್ತವ್ಯ ಕಾರ್ಯಕ್ರಮದ ಬಳಿಕ ಕೊಲ್ಲಮೊಗ್ರ ಗ್ರಾಮದ ಜನರ ಬಹುದೊಡ್ಡ ಸಮಸ್ಯೆಗೆ ಪರಿಹಾರ ಸಿಕ್ಕಿದೆ. ಟವರ್ಗೆ ಹೊಸ ಬ್ಯಾಟರಿ ಅಳವಡಿಸುವ ಮೂಲಕ
ನೆಟ್ ವರ್ಕ್ ಸಮಸ್ಯೆಗೆ ಮುಕ್ತಿ ಸಿಕ್ಕಿದೆ.ಗ್ರಾಮ ವಾಸ್ತವ್ಯ ಸಂದರ್ಭದಲ್ಲಿ ನೆಟ್ವರ್ಕ್ ಸಮಸ್ಯೆಯ ಬಗ್ಗೆ ಸಾರ್ವಜನಿಕರು ದೂರಿದ್ದರು. ಬಳಿಕ ಮಂಗಳೂರಿನಲ್ಲಿ ನಡೆದ ದಿಶಾ ಸಮಿತಿ ಸಭೆಯಲ್ಲಿ ಕೊಲ್ಲಮೊಗ್ರದ ನೆಟ್ವರ್ಕ್ ಸಮಸ್ಯೆ ಚರ್ಚೆಯಾಗಿ ಸಂಸದ ನಳಿನ್ಕುಮಾರ್ ಕಟೀಲ್ ಹಾಗೂ ಜಿಲ್ಲಾಧಿಕಾರಿ ಮುಲ್ಲೈ ಮುಗಿಲನ್ ಅವರು ಟವರ್ಗೆ ಹೊಸ ಬ್ಯಾಟರಿ ಅಳವಡಿಸಲು ಬಿಎಸ್ಎನ್ಎಲ್ ಅಧಿಕಾರಿಗಳಿಗೆ ಸೂಚನೆ ನೀಡಿದ್ದರು. ಈ ಹಿನ್ನಲೆಯಲ್ಲಿ ಹೊಸ ಬ್ಯಾಟರಿ ಅಳವಡಿಕೆ ಮಾಡಲಾಗಿದೆ.ಬಿಎಸ್ಎನ್ಎಲ್ ಟವರ್ನ ಬ್ಯಾಟರಿ ಸಮಸ್ಯೆಯಿಂದ
ವಿದ್ಯುತ್ ಕಡಿತಗೊಂಡ ಕೂಡಲೇ ನೆಟ್ವರ್ಕ್ ಕಡಿತಗೊಳ್ಳುತ್ತಿತ್ತು. ಇದರಿಂದ ಜನರು ಪರದಾಡುವ ಸ್ಥಿತಿ ಇತ್ತು. ಇದರ ಪರಿಹಾರಕ್ಕಾಗಿ ಜನರು ಕಳೆದ 5 ವರ್ಷದಿಂದ ಪ್ರಯತ್ನ ನಡೆಸುತ್ತಿದ್ದರು. ಕೊಲ್ಲಮೊಗ್ರ ಪೇಟೆಯ ಸಮೀಪವೇ ಇರುವ ಬಿಎಸ್ಎನ್ಎಲ್ ಟವರ್ನ ಬ್ಯಾಟರಿ ಸಮಸ್ಯೆಯಿಂದ
ಬ್ಯಾಂಕ್, ಗ್ರಾಮ ಪಂಚಾಯತ್, ಸಹಕಾರ ಸಂಘ, ಅಂಚೆ ಇಲಾಖೆ, ಸೇರಿದಂತೆ ಎಲ್ಲೆಡೆ ಸಮಸ್ಯೆ ಎದುರಾಗಿತ್ತು.
ಸಾರ್ವಜನಿಕರಿಗೂ ಸಮಸ್ಯೆ ತಂದೊಡ್ಡಿತ್ತು. ಇದೀಗ ನೆಟ್ವರ್ಕ್ ಸಮಸ್ಯೆಗೆ ಪರಿಹಾರ ಸಿಕ್ಕಿದೆ.














