ನವದೆಹಲಿ: 13 ವರ್ಷಗಳ ಬಳಿಕ ರಣಜಿ ಕ್ರಿಕೆಟ್ಗೆ ಮರಳಿದ ಭಾರತದ ಸ್ಟಾರ್ ಬ್ಯಾಟರ್ ವಿರಾಟ್ ಕೊಹ್ಲಿ ಕೇವಲ 6 ರನ್ ಗಳಿಸಿ ನಿರಾಸೆ ಮೂಡಿಸಿದರು. 15 ಎಸೆತಗಳನ್ನಷ್ಟೇ ಎದುರಿಸಿದರು. ಇದು ಅರುಣ್ ಜೇಟ್ಲಿ ಮೈದಾನದಲ್ಲಿ ನೆರೆದಿದ್ದ ಸಾವಿರಾರು ಅಭಿಮಾನಿಗಳಿಗೆ ನಿರಾಸೆ ತರಿಸಿತು. ರೈಲ್ವೆಸ್ ವಿರುದ್ಧದ ಪಂದ್ಯದಲ್ಲಿ
ನಾಲ್ಕನೇ ಕ್ರಮಾಂಕದಲ್ಲಿ ಬ್ಯಾಟಿಂಗ್ಗೆ ಆಗಮಿಸಿದ ವಿರಾಟ್ ಕೊಹ್ಲಿಗೆ ನೆರೆದಿದ್ದ ಪ್ರೇಕ್ಷಕರಿಂದ ಅಭೂತಪೂರ್ವ ಸ್ವಾಗತ ಲಭಿಸಿತು. ರೈಲ್ವೆಸ್ನ ಪೇಸರ್ ಹಿಮಾಂಶು ಸಂಗ್ವಾನ್ ಎಸೆದ 28ನೇ ಓವರ್ನಲ್ಲಿ ಬೌಂಡರಿ ಬಾರಿಸಿದ ವಿರಾಟ್, ಉತ್ತಮ ಇನಿಂಗ್ಸ್ ಕಟ್ಟುವ ಭರವಸೆ ಮೂಡಿಸಿದರು.
ಇತ್ತೀಚೆಗೆ ಅಂತ್ಯಗೊಂಡ ಆಸ್ಟ್ರೇಲಿಯಾ ವಿರುದ್ಧದ ಟೆಸ್ಟ್ ಸರಣಿಯಲ್ಲಿ ವಿರಾಟ್ ಸೇರಿ ಹಲವು ಆಟಗಾರರು ವೈಫಲ್ಯ ಅನುಭವಿಸಿದ್ದರು. ಇದಾದ ಬಳಿಕ ದೇಶಿ ಪಂದ್ಯಗಳನ್ನು ಆಡುವುದನ್ನು ಬಿಸಿಸಿಐ ಕಡ್ಡಾಯಗೊಳಿಸಿತ್ತು.
ಹೀಗಾಗಿ ಕೊಹ್ಲಿ ದೆಹಲಿ ಪರ ರಣಜಿಗೆ ಆಡಿದ್ದರು. ಪಂದ್ಯಕ್ಕೂ ಮುನ್ನ ಭಾರತ ಕ್ರಿಕೆಟ್ ತಂಡದ ಮಾಜಿ ಕೋಚ್ ಸಂಜಯ್ ಬಾಂಗಾರ್ ಅವರಿಂದ ತರಬೇತಿ ಪಡೆದಿದ್ದರು.