ಮಡಿಕೇರಿ: ಕಳೆದೊಂದು ವಾರದಿಂದ ಸುಂಟಿಕೊಪ್ಪ ಕೆದಕಲ್ ಭಾಗದಲ್ಲಿ ಆತಂಕ ಮೂಡಿಸಿದ್ದ ಕಾಡಾನೆಯನ್ನು ಅರಣ್ಯ ಇಲಾಖೆ ಸಿಬ್ಬಂದಿ ಬುಧವಾರ ಸೆರೆ ಹಿಡಿದರು.18–20 ವರ್ಷದ ಗಂಡಾನೆಯ ದಾಳಿಗೆ ಸಿಲುಕಿ ಈಚೆಗೆ ಅರಣ್ಯ ಇಲಾಖೆ ಸಿಬ್ಬಂದಿ ಮೃತಪಟ್ಟಿದ್ದರು. ಹಲವು ವಾಹನಗಳನ್ನು
ಧ್ವಂಸಗೊಳಿಸಿದ್ದ ಈ ಆನೆ ತೋಟಗಳಲ್ಲಿನ ಬೆಳೆಗಳನ್ನು ನಾಶಪಡಿಸಿತ್ತು. ವಾಹನ ಸವಾರರ ಮೇಲೆ ಎರಗಿ ಅವರನ್ನು ಗಾಯಗೊಳಿಸುತ್ತಿತ್ತು. ಇದರಿಂದ ಕೆದಕಲ್ ವ್ಯಾಪ್ತಿಯಲ್ಲಿ ಜನರು ಓಡಾಡುವುದಕ್ಕೆ ಭಯಪಡುವ ವಾತಾವರಣ ಸೃಷ್ಟಿಯಾಗಿತ್ತು.
ದುಬಾರೆ ಆನೆ ಶಿಬಿರದ ಹರ್ಷ, ಪ್ರಶಾಂತ, ಅಜಯ್, ಲಕ್ಷ್ಮಣ, ವಿಕ್ರಮ ಎಂಬ 5 ಸಾಕಾನೆಗಳ ನೆರವಿನಿಂದ ಸುಮಾರು 100 ಮಂದಿ ಅರಣ್ಯ ಇಲಾಖೆಯ ಸಿಬ್ಬಂದಿ ಹರಸಾಹಸಪಟ್ಟು ಆನೆಯನ್ನು ಸೆರೆ ಹಿಡಿದರು ಎಂದು ಅರಣ್ಯ ಇಲಾಖೆ ಅಧಿಕಾರಿಗಳು ತಿಳಿಸಿದ್ದಾರೆ.