ಚೆನ್ನೈ: ಕೋಲ್ಕತ್ತಾ ನೈಟ್ ರೈಡರ್ಸ್ ಐಪಿಎಲ್ ಚಾಂಪಿಯನ್ ಆಗಿ ಹೊರ ಹೊಮ್ಮಿದೆ.ಐಪಿಎಲ್ ಟಿ20 ಕ್ರಿಕೆಟ್ ಟೂರ್ನಿಯ ಫೈನಲ್ ಪಂದ್ಯದಲ್ಲಿ ಸಂಘಟಿತ ಬೌಲಿಂಗ್ ಹಾಗೂ ಆಕ್ರಮಣಕಾರಿ ಬ್ಯಾಟಿಂಗ್ ಪ್ರದರ್ಶನದ ಮೂಲಕ ಸನ್ರೈಸರ್ಸ್ ಹೈದರಾಬಾದ್ ತಂಡವನ್ನು 8 ವಿಕೆಟ್ ಅಂತರದಲ್ಲಿ ಸೋಲಿಸಿ ಕೋಲ್ಕತ್ತ ನೈಟ್ ರೈಡರ್ಸ್ 3ನೇ ಬಾರಿ ಚಾಂಪಿಯನ್ ಪಟ್ಟಕ್ಕೇರಿತು.ಮೊದಲು ಬ್ಯಾಟಿಂಗ್ ಮಾಡಿದ
ಹೈದರಾಬಾದ್ ತಂಡ 18.3 ಓವರ್ಗಳಲ್ಲಿ ಕೇವಲ 113 ರನ್ ಗಳಿಸಿ ಸರ್ವ ಪತನ ಕಂಡಿತು. ಕೋಲ್ಕತ್ತ 10.3 ಓವರ್ಗಳು ಕೇವಲ 2 ವಿಕೆಟ್ ಕಳೆದುಕೊಂಡು 114 ರನ್ ಬಾರಿಸಿ ಗೆದ್ದು ಬೀಗಿತು.ಕೋಲ್ಕತ್ತ ತಂಡದ ವೆಂಕಟೇಶ್ ಅಯ್ಯರ್(52 ರನ್, 26 ಎಸೆತ) ಹಾಗೂ ರಹಮಾನುಲ್ಲಾ ಗುರ್ಬಾಜ್(32 ರನ್, 39 ಎಸೆತ) ಲೀಲಾಜಾಲವಾಗಿ ರನ್ ಗಳಿಸಿದರು. 2012 ಮತ್ತು 2014ರ ಐಪಿಎಲ್ ಪಂದ್ಯದಲ್ಲಿ ಕೋಲ್ಕತ್ತ ಚಾಂಪಿಯನ್ ಆಗಿ ಹೊರಹೊಮ್ಮಿತ್ತು.
ಎಸ್ಆರ್ಎಚ್ ಆರಂಭದಲ್ಲಿಯೇ ಕುಸಿಯಿತು. ಇನಿಂಗ್ಸ್ ಆರಂಭಿಸಿದ ಅಭಿಷೇಕ್ ಶರ್ಮಾ (2) ಮತ್ತು ಟ್ರಾವಿಸ್ ಹೆಡ್ (0) ಮೊದಲೆರಡು ಓವರ್ ಮುಗಿಯುವುದರೊಳಗೆ ಪೆವಿಲಿಯನ್ ಸೇರಿಕೊಂಡರು.
ಶರ್ಮಾಗೆ ಮಿಚೇಲ್ ಸ್ಟಾರ್ಕ್ ಪೆವಿಲಿಯನ್ ದಾರಿ ತೋರಿದರೆ, ಹೆಡ್ ಅವರನ್ನು ವೈಭವ್ ಅರೋರಾ ಹೊರಗಟ್ಟಿದರು.
ನಂತರ ಬಂದ ರಾಹುಲ್ ತ್ರಿಪಾಠಿ ಆಟ 9 ರನ್ಗೆ ಕೊನೆಗೊಂಡಿತು. ಹೀಗಾಗಿ, ಈ ತಂಡ ಕೇವಲ 21 ರನ್ ಗಳಿಸುವಷ್ಟರಲ್ಲೇ ಮೂರು ವಿಕೆಟ್ ಕಳೆದುಕೊಂಡಿತ್ತು. ಈ ಹಂತದಲ್ಲಿ ಜೊತೆಯಾದ ಏಡನ್ ಮಾರ್ಕ್ರಂ ಮತ್ತು ನಿತೀಶ್ ರೆಡ್ಡಿ ಭರವಸೆ ಮೂಡಿಸಿದರಾದರೂ, ಕೋಲ್ಕತ್ತ ಬೌಲಿಂಗ್ ಎದುರು ದಿಟ್ಟ ಆಟವಾಡಲು ಸಾಧ್ಯವಾಗಲಿಲ್ಲ.ಇಬ್ಬರು 4ನೇ ವಿಕೆಟ್ ಪಾಲುದಾರಿಕೆಯಲ್ಲಿ 26 ರನ್ ಸೇರಿಸಿದ್ದೇ ರೈಸರ್ಸ್ ಪರ ಗರಿಷ್ಠ ರನ್ ಜೊತೆಯಾಟವೆನಿಸಿತು.
ರೆಡ್ಡಿ 13 ರನ್ ಗಳಿಸಿ ಔಟಾದರೆ, ಮಾರ್ಕ್ರಂ ಆಟ 20 ರನ್ ಗಳಿಗೆ ಅಂತ್ಯವಾಯಿತು. ಬಿರುಸಿನ ಆಟಗಾರ ಹೆನ್ರಿಚ್ ಕ್ಲಾಸೆನ್ (16) ನಿರಾಸೆ ಮೂಡಿಸಿದರು. ಶಹಬಾಜ್ ಅಹ್ಮದ್ (8), ಅಬ್ದುಲ್ ಸಮದ್ (4) ವೈಫಲ್ಯ ಅನುಭವಿಸಿದರು.ಕೊನೆಯಲ್ಲಿ ನಾಯಕ ಪ್ಯಾಟ್ ಕಮಿನ್ಸ್ 19 ಎಸೆತಗಳಲ್ಲಿ 24 ರನ್ ಗಳಿಸಿದರು. ಇದರಿಂದಾಗಿ ತಂಡದ ಮೊತ್ತ 110ರ ಗಡಿ ದಾಟಿತು. ರೈಸರ್ಸ್ಗೆ ಆರಂಭದಲ್ಲೇ ಆಘಾತ ನೀಡಿದ ಮಿಚೇಲ್ ಸ್ಟಾರ್ಕ್ 3 ಓವರ್ಗಳಲ್ಲಿ ಕೇವಲ 14 ರನ್ ನೀಡಿ ಎರಡು ವಿಕೆಟ್ ಕಿತ್ತರು. ಅವರಿಗೆ ಉತ್ತಮ ಸಹಕಾರ ನೀಡಿದ ಹರ್ಷಿತ್ ರಾಣಾ 2 ಮತ್ತು ಆ್ಯಂಡ್ರೆ ರಸೆಲ್ 3 ವಿಕೆಟ್ ಉರುಳಿಸಿದರು. ವೈಭವ್ ಅರೋರಾ ಮತ್ತು ಸ್ಪಿನ್ನರ್ಗಳಾದ ವರುಣ್ ಚಕ್ರವರ್ತಿ, ಸುನೀಲ್ ನರೇನ್ ತಲಾ ಒಂದೊಂದು ವಿಕೆಟ್ ಹಂಚಿಕೊಂಡರು.