ಕೋಲ್ಕತ್ತ: ಐಪಿಎಲ್ ಪಂದ್ಯದಲ್ಲಿ ಸನ್ರೈಸರ್ಸ್ ವಿರುದ್ಧ ಕೋಲ್ಕತ್ತ 80 ರನ್ಗಳ ಗೆಲುವು ಸಾಧಿಸಿತು.ಟಾಸ್ ಗೆದ್ದ ಸನ್ರೈಸರ್ಸ್ ಹೈದರಾಬಾದ್ ತಂಡವು ಫೀಲ್ಡಿಂಗ್ ಆಯ್ಕೆ ಮಾಡಿಕೊಂಡಿತು. ಹಾಲಿ ಚಾಂಪಿಯನ್ ಕೋಲ್ಕತ್ತ ತಂಡವು ರಘುವಂಶಿ (50; 32ಎ, 4X5, 6X2) ಮತ್ತು ಎಡಗೈ ಬ್ಯಾಟರ್ ವೆಂಕಟೇಶ್ (60; 29ಎ, 4X7, 6X3) ಬ್ಯಾಟಿಂಗ್ ಬಲದಿಂದ 20 ಓವರ್ಗಳಲ್ಲಿ 6 ವಿಕೆಟ್ಗಳಿಗೆ 200 ರನ್ ಗಳಿಸಿತು. ಗುರಿ ಬೆನ್ನಟ್ಟಿದ
ಸನ್ರೈಸರ್ಸ್, 16.4 ಓವರ್ಗಳಲ್ಲಿ 120 ರನ್ಗಳಿಸಿ ಎಲ್ಲಾ ವಿಕೆಟ್ಗಳನ್ನು ಕಳೆದುಕೊಂಡಿತು.ವೆಂಕಟೇಶ್ ಅಯ್ಯರ್ ಮತ್ತು ಅಂಗಕ್ರಿಷ್ ರಘುವಂಶಿ ಅವರ ಅಬ್ಬರದ ಬ್ಯಾಟಿಂಗ್ನಿಂದಾಗಿ ಕೋಲ್ಕತ್ತ ನೈಟ್ ರೈಡರ್ಸ್ ತಂಡವು ದೊಡ್ಡ ಮೊತ್ತ ಪೇರಿಸಿತು. ಆರಂಭಿಕ ಆಘಾತ ಅನುಭವಿಸಿದ್ದ ಕೋಲ್ಕತ್ತ ತಂಡಕ್ಕೆ ಮಧ್ಯಮಕ್ರಮಾಂಕದ ಬ್ಯಾಟರ್ಗಳು ಹೊಸಚೈತನ್ಯ ತುಂಬಿದರು. ಅದರಲ್ಲೂ ವೆಂಕಟೇಶ್ ಮತ್ತು ರಿಂಕು ಸಿಂಗ್ (ಔಟಾಗದೇ 32; 17ಎ, 4X4, 6X1) ಅವರ ಆರ್ಭಟಕ್ಕೆ ರನ್ಗಳು ವೇಗವಾಗಿ ಹರಿದುಬಂದವು. ಅವರ ಆಟದ ವೇಗಕ್ಕೆ ಇನಿಂಗ್ಸ್ನ ಕೊನೆ 5 ಓವರ್ಗಳಲ್ಲಿ 88 ರನ್ಗಳು ಸೇರಿದವು.
15 ಓವರ್ಗಳಲ್ಲಿ 122 ರನ್ ಕೊಟ್ಟು ಒಂದಿಷ್ಟು ಹಿಡಿತ ಸಾಧಿಸಿದ್ದ ಬೌಲರ್ಗಳು ವೆಂಕಟೇಶ್ ಮುಂದೆ ಮಂಕಾದರು. 206ರ ಸ್ಟ್ರೈಕ್ರೇಟ್ನಲ್ಲಿ ರನ್ ಸೂರೆ ಮಾಡಿದ ವೆಂಕಟೇಶ್ 3 ಸಿಕ್ಸರ್ ಸಿಡಿಸಿದರು. ಕೊನೆಯ ಓವರ್ನಲ್ಲಿ 3 ಎಸೆತಗಳು ಬಾಕಿಯಿದ್ದಾಗ ಅಯ್ಯರ್ ಔಟಾದರು. ಇವರಿಬ್ಬರೂ ಐದನೇ ವಿಕೆಟ್ ಜೊತೆಯಾಟದಲ್ಲಿ 91 (41ಎಸೆತ) ರನ್ ಸೇರಿಸಿದರು.
ಕೋಲ್ಕತ್ತ ತಂಡದ ನಾಯಕ ಅಜಿಂಕ್ಯ ರಹಾನೆ (38; 27ಎ, 4X1, 6X4) ಇನಿಂಗ್ಸ್ಗೆ ಸ್ಥಿರತೆ ಒದಗಿಸಿದರು. ಅವರಿಗೆ ಉತ್ತಮ ಜೊತೆ ನೀಡಿದ ರಘುವಂಶಿ ಉತ್ತಮವಾಗಿ ಆಡಿದರು. ಇವರಿಬ್ಬರೂ 3ನೇ ವಿಕೆಟ್ ಜೊತೆಯಾಟದಲ್ಲಿ 81 ರನ್ ಸೇರಿಸಿದರು.