ವಿಶಾಖಪಟ್ಟಣ: ಇಂಡಿಯನ್ ಪ್ರೀಮಿಯರ್ ಲೀಗ್ ಕ್ರಿಕೆಟ್ ಟೂರ್ನಿಯಲ್ಲಿಯೇ ಎರಡನೇ ಸರ್ವಾಧಿಕ ಮೊತ್ತವನ್ನು ದಾಖಲಿಸಿದ ಕೋಲ್ಕತ್ತ ನೈಟ್ ರೈಸರ್ಸ್ ತಂಡವು ಬುಧವಾರ 106 ರನ್ಗಳಿಂದ ಡೆಲ್ಲಿ ಕ್ಯಾಪಿಟಲ್ಸ್ ವಿರುದ್ಧ ಜಯ ಸಾಧಿಸಿತು. ಕೆಕೆಆರ್ 7 ವಿಕೆಟ್ಗೆ 272 ರನ್ಗಳ ಭಾರಿ ಮೊತ್ತ ಕಲೆಹಾಕಿತು. ದೆಹಲಿ 17.2 ಓವರ್ಗಳಲ್ಲಿ 166 ರನ್ಗೆ ಆಲ್ ಔಟ್ ಆಯಿತು.ಕಠಿಣ ಸವಾಲನ್ನು ಬೆನ್ನಟ್ಟಿದ ಡೆಲ್ಲಿ
ಕ್ಯಾಪಿಟಲ್ಸ್ಗೆ ಕೋಲ್ಕತ್ತ ಬೌಲರ್ಗಳು ಆರಂಭದಲ್ಲೇ ಆಘಾತ ನೀಡಿದರು. 33 ರನ್ ಗಳಿಸುವಷ್ಟರಲ್ಲಿ ಪ್ರಮುಖ ನಾಲ್ಕು ವಿಕೆಟ್ ಕಳೆದುಕೊಂಡು ಸಂಕಷ್ಟಕ್ಕೆ ಸಿಲುಕಿತು. ಡೇವಿಡ್ ವಾರ್ಡರ್ (18), ಪ್ರಥ್ವಿ ಶಾ (10), ಮಿಚೆಲ್ ಮಾರ್ಷ್ (0) ಮತ್ತು ಅಭಿಷೇಕ್ ಪೊರೆಲ್ ಬೇಗನೇ ನಿರ್ಗಮಿಸಿದರು.
ನಂತರದಲ್ಲಿ ನಾಯಕ ರಿಷಭ್ ಪಂತ್ 55; 25ಎ, 4×4, 6×5) ಮತ್ತು ಟಿಸ್ಟನ್ ಸ್ಟಬ್ಸ್ (54; 32ಎ, 4×4, 6×4) ಐದನೇ ವಿಕೆಟ್ಗೆ 93 ರನ್ ಸೇರಿಸಿ ಕೊಂಚ ಪ್ರತಿರೋಧ ತೋರಿದರು. ವೈಭವ್ ಅರೋರಾ ಮತ್ತು ವರುಣ್ ಚಕ್ರವರ್ತಿ ತಲಾ ಮೂರು ವಿಕೆಟ್ ಪಡೆದು ಮಿಂಚಿದರು. ಎರಡು ವಿಕೆಟ್ ಮಿಚೆಲ್ ಸ್ಟಾರ್ಕ್ ಪಾಲಾದವು.
ಕೋಲ್ಕತ್ತ ತಂಡದ ಫಿಲ್ ಸಾಲ್ಟ್ ಮತ್ತು ಸುನಿಲ್ ನರೈನ್ ಮೊದಲ ವಿಕೆಟ್ ಜತೆಯಾಟದಲ್ಲಿ 27 ಎಸೆತಗಳಲ್ಲಿ 60 ರನ್ ಸೇರಿಸಿ ಮಿಂಚಿನ ಆರಂಭ ಒದಗಿಸಿದರು.ಸುನಿಲ್ ಸಿಡಿಲಬ್ಬರದ ಬ್ಯಾಟಿಂಗ್ ಮೂಲಕ ಡೆಲ್ಲಿ ಬೌಲರ್ಗಳನ್ನು ಹಿಗ್ಗಾಮುಗ್ಗ ದಂಡಿಸಿ ಬೌಂಡರಿ, ಸಿಕ್ಸರ್ಗಳನ್ನು ಸಿಡಿಸಿದರು. ಅವರ ಇನಿಂಗ್ಸ್ನಲ್ಲಿ 39 ಎಸೆತಗಳಲ್ಲಿ ಏಳು ಸಿಕ್ಸರ್, ಏಳು ಬೌಂಡರಿಗಳಿದ್ದ 85 ರನ್ ಹರಿದು ಬಂದವು.
ರಘುವಂಶಿ 27 ಎಸೆತಗಳಲ್ಲಿ 54 ರನ್ ಚಚ್ಚಿದರು. ಸುನಿಲ್ ಮತ್ತು ರಘುವಂಶಿ ಎರಡನೇ ವಿಕೆಟ್ ಜೊತೆಯಾಟದಲ್ಲಿ 48 ಎಸೆತಗಳಲ್ಲಿ 104 ರನ್ಗಳು ಹರಿದುಬಂದವು.
ಆಂಡ್ರೆ ರಸೆಲ್ (41, 19 ಎಸೆತ) ಮತ್ತು ‘ಫಿನಿಷರ್’ ರಿಂಕು ಸಿಂಗ್ (26, 8 ಎಸೆತ) ಅವರು ಕೊನೆಯಲ್ಲಿ ಮೊತ್ತವನ್ನು ಹಿಗ್ಗಿಸಿ ದಾಖಲೆಯತ್ತ ಒಯ್ದರು.
ಕೋಲ್ಕತ್ತ ಬ್ಯಾಟರ್ಗಳು ಒಟ್ಟು 18 ಸಿಕ್ಸರ್ಗಳು ಮತ್ತು 22 ಬೌಂಡರಿಗಳನ್ನು ಬಾರಿಸಿ, ಡೆಲ್ಲಿ ಬೌಲರ್ಗಳಿಗೆ ದುಃಸ್ವಪ್ನವಾದರು.