ಕುಂಬಳೆ:ಚೊಚ್ಚಲ ಚಿತ್ರಕ್ಕೆ ರಾಷ್ಟ್ರ ಪ್ರಶಸ್ತಿ ಪಡೆದು, ರಾಷ್ಟ್ರೀಯ ಗಮನ ಸೆಳೆದ ಗಡಿನಾಡು ಕಾಸರಗೋಡಿನ ತರುಣ ಪ್ರತಿಭೆ “777 ಚಾರ್ಲಿ” ಚಿತ್ರದ ನಿರ್ದೇಶಕ ಕಿರಣ್ ರಾಜ್ಗೆ ಮಾಂಗಲ್ಯ ಯೋಗ. ತನ್ನ ತನ್ನೂರಿನ ದೇವಳದಲ್ಲಿ ಯು. ಕೆ. ನಿವಾಸಿ ನರ್ತಕಿ ಅನಯ ವಸುಧಾ ಅವರನ್ನುಸಾಂಪ್ರದಾಯಿಕವಾಗಿ ವಿವಾಹಿತರಾಗಿ ದಾಂಪತ್ಯ ಜೀವನಕ್ಕೆ ಕಾಲೂರಿದರು.ನಾರಂಪಾಡಿ ಶ್ರೀ ಉಮಾಮಹೇಶ್ವರ ಕ್ಷೇತ್ರದಲ್ಲಿ
ನ. 30ರಂದು ಭಾನುವಾರ ನಡೆದ ವಿವಾಹ ಸಮಾರಂಭದಲ್ಲಿ ಪ್ರಮುಖರು ಪಾಲ್ಗೊಂಡರು. ಸುಳ್ಯ ಮೂಲದವರಾದ ದಿ.ಅಚ್ಚುತ ಮಣಿಯಾಣಿ ಕೇರ್ಪಳ ಹಾಗು ಗೋದಾವರಿ ಮಲ್ಲಮೂಲೆ ಅವರ ಪುತ್ರರಾದ ಕಿರಣ್ ರಾಜ್ ಕಾಸರಗೋಡು ಮಲ್ಲಮೂಲೆಯವರು.
ಮೂಲತಃ ಕಾಸರಗೋಡಿನವರೇ ಆದ ಯು. ಕೆ ಯಲ್ಲಿ ನೆಲೆಸಿರುವ ಪ್ರಸಿದ್ಧ ಭಾರತೀಯ ಶಾಸ್ತ್ರೀಯ ನೃತ್ಯಾಧ್ಯಾಪಿಕೆ ಮತ್ತು ನರ್ತಕಿಯಾದ ಚಿತ್ರಲೇಖಾ ಅವರ ಪುತ್ರಿ, ನರ್ತಕಿ ಅನಯ ಅವರನ್ನು ಕಿರಣ್ ರಾಜ್ ವರಿಸಿದ್ದು, ನಿನ್ನೆಯೇ ಅವರ ಅರಶಿನ ಶಾಸ್ತ್ರ ಕೌಟುಂಬಿಕವಾಗಿ ಜರುಗಿತ್ತು.
ಕನ್ನಡವಲ್ಲದೇ ಇತರ ಭಾಷೆಗಳಲ್ಲೂ ಸೂಪರ್ ಹಿಟ್ ಎಂದೆನಿಸಿಕೊಂಡ ‘777ಚಾರ್ಲಿ’ ಮೂಲಕ ಭರವಸೆಯ ಮುದ್ರೆಯೊತ್ತಿದ ಕಿರಣ್ ಇದೀಗ ತನ್ನ ಎರಡನೇ ಚಿತ್ರದ ಸಿದ್ಧತೆಯಲ್ಲಿದ್ದಾರೆ. ಅದರ ಚಿತ್ರೀಕರಣ ಆರಂಭಕ್ಕೂ ಮುನ್ನ ಅವರು ತಾನು ಬೆಳೆದ ಗ್ರಾಮದ ಜನ ಸಮ್ಮುಖದಲ್ಲೇ ವಿವಾಹಿತರಾಗಿದ್ದಾರೆ. ವಧು ಯು. ಕೆಯಲ್ಲಿದ್ದರೂ ಅವರ ಕುಟುಂಬದ ಬೇರು ಕಾಸರಗೋಡಿನಲ್ಲಿದೆ. ವರ ಸಿನಿಮಾ ಮೇಕರ್ ಆಗಿ ಬೆಳೆದರೂ ಅವರ ಮೂಲ ನಾರಂಪಾಡಿಯ ಮಲ್ಲಮೂಲೆಯಲ್ಲಿದೆ.
ವಿವಾಹ ಸಮಾರಂಭದಲ್ಲಿ ಕನ್ನಡದ ಜನಪ್ರಿಯ ನಟ, 77 ಚಾರ್ಲಿ ನಾಯಕ ರಕ್ಷಿತ್ ಶೆಟ್ಟಿ, ಸಂಗೀತ, ನಿರ್ದೇಶಕ ನಾಬಿನ್ ಪೌಲ್, ಸಿನಿ ಪತ್ರಕರ್ತ ಬಾ. ನಾ. ಸುಬ್ರಹ್ಮಣ್ಯ, ಆರ್. ಎಸ್. ಎಸ್ ಪ್ರಮುಖ್ ಕಜಂಪಾಡಿ ಸುಬ್ರಹ್ಮಣ್ಯ ಭಟ್, ಹಿರಿಯ ನೃತ್ಯ ಗುರು ಉಳ್ಳಾಲ ಮೋಹನ್ ಕುಮಾರ್, ಗುಣವಂತೆ ಯಕ್ಷಗಾನ ಕೇಂದ್ರದ ನಿರ್ದೇಶಕ, ಖ್ಯಾತ ಕಲಾವಿದ ಕೆರೆಮನೆ ಶಿವಾನಂದ ಹೆಗೆಡೆ, ನಟ ಸಿದ್ಲಿಂಗು ಶ್ರೀಧರ್, ಅಂತರಾಷ್ಟ್ರೀಯ ಮೃದಂಗ ವಿದ್ವಾನ್ ಎಸ್. ವಿ. ಬಾಲಕೃಷ್ಣ, ಗಾಯಕಿ ವಸುಧಾ, ಪದ್ಮಶ್ರೀ ಸತ್ಯನಾರಾಯಣ ಬೆಳೇರಿ, ಡಾ ಸುಂದರ್ ಕೇನಾಜೆ ಹಾಗೂ ಕಾಸರಗೋಡಿನ ಸಾಹಿತ್ಯ, ಸಾಂಸ್ಕೃತಿಕ ವಲಯದ ಪ್ರಮುಖರು ಪಾಲ್ಗೊಂಡಿದ್ದರು.













