ಸುಬ್ರಹ್ಮಣ್ಯ: ಅಡಿಕೆ ಆಮದು ಮಾಡಲಾಗುತ್ತಿದೆ ಎಂಬುದು ಸತ್ಯಕ್ಕೆ ದೂರವಾದುದು.ಈ ವರ್ಷ ಯಾವುದೇ ದೇಶದಿಂದ ಅಡಿಕೆ ಆಮದು ಮಾಡಲು ಅನುಮತಿ ನೀಡಿಲ್ಲ, ಈ ಬಗ್ಗೆ ಸರಕಾರದಲ್ಲಿ ಯಾವುದೇ ಆದೇಶವಾಗಿಲ್ಲ. ವಿದೇಶದಿಂದ ಅಡಿಕೆ ಆಮದು ಎಂಬ ಸುದ್ದಿ ಹಬ್ಬಿಸಿ ದರ ಕುಸಿತ ಮಾಡುವ ಪ್ರಯತ್ನ ನಡೆಯುತಿದೆ ಎಂದು ಕೇಂದ್ರ ಕೃಷಿ ಮತ್ತು ರೈತರ ಕಲ್ಯಾಣ ಸಚಿವೆ ಶೋಭಾ ಕರಂದ್ಲಾಜೆ ಹೇಳಿದರು.
ಅವರು ಕಡಬ ತಾಲೂಕಿನ ಬಿಳಿನೆಲೆ ಗ್ರಾಮದ ನೆಟ್ಟಣದ ಕಿದು ಸಿಪಿಸಿಆರ್ನಲ್ಲಿ ಕೃಷಿ ಸಮ್ಮೇಳನ ಉದ್ಘಾಟಿಸಿ ಮಾತನಾಡಿದರು. ಅಡಿಕೆ ಆರೋಗ್ಯಕ್ಕೆ ಹಾನಿಕರವಲ್ಲ ಎಂಬ ವೈಜ್ಞಾನಿಕ ವರದಿ ಬೇಕು ಅಡಿಕೆ ಹಾನಿಕರ ಅಲ್ಲ ಎಂಬುದನ್ನು
ಸಾಬೀತು ಪಡಿಸಲು ನಮ್ಮ ಭಾಗದ ಅಡಿಕೆಯನ್ನು ವೈಜ್ಞಾನಿಕವಾಗಿ ಅಧ್ಯಯನ ಮಾಡಲು ದೇಶದ ಪ್ರತಿಷ್ಠಿತ ಸಂಸ್ಥೆಗಳನ್ನು ಸೇರಿಸಿಕೊಂಡು ವೈಜ್ಞಾನಿಕವಾಗಿ ಅಧ್ಯಯನ ನಡೆಸಲು ಭಾರತ ಸರಕಾ ರೂಪಾಯಿ 10 ಕೋಟಿ ರೂ.ಹಣ ಮೀಸಲಿಟ್ಟು ಮುಂದುವರಿದಿದೆ. ಅಡಿಕೆ ಎಲೆಚುಕ್ಕಿ, ಹಳದಿ ಎಲೆ ರೋಗ ನಿರ್ವಹಣೆಗೆ 225 ಕೋಟಿ ಅನುದಾನಕ್ಕೆ ಪ್ರಸ್ತಾವನೆ ಸಲ್ಲಿಸಲಾಗಿದೆ. ತೆಂಗಿನಲ್ಲಿ ಕಂಡು ಬಂದ ರೋಗ ಪರಿಹಾರ ಹಾಗೂ ಅಧ್ಯಯನಕ್ಕೂ ಕೇಂದ್ರದಿಂದ ಸಹಾಯ ನೀಡಲಾಗಿದೆ ಎಂದರು. ಕೃಷಿಕರು, ರೈತರ ಹಿತ ಕಾಯುವಲ್ಲಿ ಕೇಂದ್ರ ಸರಕಾರ ಸದಾ ಜತೆಯಾಗಿದೆ. ರೈತರು ಒಂದೇ ಬೆಳೆಯನ್ನು ಹೊಂದಿಕೊಳ್ಳದೇ ಮಿಶ್ರ ಬೆಳೆಯನ್ನು ಬೆಳೆದು ಆದಾಯ ಗಳಿಸಲು ಮುಂದಾಗಬೇಕು ಎಂದರು.

ಸುಳ್ಯ ಶಾಸಕಿ ಭಾಗೀರಥಿ ಮುರುಳ್ಯಮಾತನಾಡಿ, ಕೃಷಿಯೇ ಸಂಕಷ್ಟದಲ್ಲಿರುವ ಈ ಸಂದರ್ಭದಲ್ಲಿ ಅವರಿಗೆ ಪರಿಹಾರ ಸೂಚಿಸಬೇಕು ಎಂಬ ನಿಟ್ಟಿನಲ್ಲಿ ಸಿಪಿಸಿಆರ್ಐ ಸಂಸ್ಥೆ ಕೃಷಿ ಮೇಳ ನಡೆಸುತ್ತಿರುವುದು ಶ್ಲಾಘನೀಯ. ಹಿಂದೆ ಗದ್ದೆ ಜೊತೆಗೆ ತೆಂಗು ಬೆಳೆದು ಜೀವನ ನಡೆಸುತ್ತಿದ್ದರು. ಆದರೆ ಇಂದು ಆಧುನಿಕ ಲೋಕಕ್ಕೆ ಮಾರು ಹೋಗಿ ನಮ್ಮ ಇಳುವರಿ ಕಳೆದುಕೊಳ್ಳುತ್ತಿದ್ದೇವೆ ಎಂದರು.
ಕೇಂದ್ರದ ತೋಟಗಾರಿಕಾ ಡಿಡಿಜಿ ಡಾ.ಸಂಜೀವ್ ಕುಮಾರ್ ಸಿಂಗ್ ಅಧ್ಯಕ್ಷತೆ ವಹಿಸಿದ್ದರು. ಕ್ಯಾಂಪ್ಕೋ ಅಧ್ಯಕ್ಷ ಕಿಶೋರ್ ಕುಮಾರ್ ಕೋಡ್ಗಿ, ಭಾರತ ಸರಕಾರದ ತೋಟಗಾರಿಕಾ ಇಲಾಖೆ ಆಯುಕ್ತ ಡಾ.ಪ್ರಭಾತ್ ಕುಮಾರ್, ಕೋಝೀಕೋಡ್ ಡಿಎಎಸ್ಡಿ ನಿರ್ದೇಶಕ ಹೋಮಿ ಚೆರಿಯನ್, ಕೊಚ್ಚಿ ಸಿಡಿಬಿ ಸಿಸಿಡಿಒ ಡಾ.ಬಿ.ಹನುಮಂತೇ ಗೌಡ, ಬಿಳಿನೆಲೆ ಗ್ರಾ.ಪಂ. ಸದಸ್ಯ ಸತೀಶ್ ಕಳಿಗೆ, ಕಿದು ಸಿಪಿಸಿಆರ್ಐ ವಿಜ್ಞಾನಿ ದಿವಾಕರ ವೈ ಮತ್ತಿತರರು ಉಪಸ್ಥಿತರಿದ್ದರು. ಸಿಪಿಸಿಆರ್ಐ ಕಾಸರಗೋಡು ನಿರ್ದೇಶಕ ಡಾ.ಕೆ.ಬಿ.ಹೆಬ್ಬಾರ್ ಪ್ರಸ್ತಾವನೆಗೈದು, ಸ್ವಾಗತಿಸಿದರು. ಡಾ.ವಿ.ನಿರಲ್ ವಂದಿಸಿದರು. ವಿಟ್ಲ ಸಿಪಿಸಿಆರ್ಐ ಹಿರಿಯ ವಿಜ್ಞಾನಿ ಡಾ.ನಾಗರಾಜ್ ಎನ್.ಆರ್. ಕಾರ್ಯಕ್ರಮ ನಿರೂಪಿಸಿದರು.
ಕಲ್ಪ ಸುವರ್ಣ ತಳಿ ಬಿಡುಗಡೆ;
ಸಿಪಿಸಿಆರ್ಐ ಅಭಿವೃದ್ಧಿಗೊಳಿಸಿದ ಕಲ್ಪ ಸುವರ್ಣ ಗಿಡ್ಡ ತಳಿಯ ಬಿಡುಗಡೆಯನ್ನು ಕೇಂದ್ರ ಸಚಿವೆ ಶೋಭಾ ಕರಂದ್ಲಾಜೆ ನೆರವೇರಿಸಿದರು. ಬಳಿಕದಲ್ಲಿ ಕೊಕ್ಕೋ ಸಂಕರಣ ವಿಟ್ಲ ಕೊಕ್ಕೋ ಹೈಬೀಡ್ ೧, ವಿಟ್ಲ ಕೊಕ್ಕೋ ಹೈಬ್ರೀಡ್ ೨ ತಳಿಯನ್ನು ಅತಿಥಿಗಳು ಬಿಡುಗಡೆ ಗೊಳಿಸಿದರು. ಕೃಷಿಕರಿಗೆ ವಿತರಣೆ ಮಾಡಲಾಯಿತು. ತರಬೇತುದಾರರಿಗೆ ಪ್ರಮಾಣಪತ್ರ ಹಾಗೂ ಉಪಕರಣ, ಸುಧಾರಿತ ತೆಂಗಿನ ತಳಿಗಳ ಪ್ರಕಟಣೆ ಬಿಡುಗಡೆ ಮಾಡಲಾಯಿತು.









