ಬನಾರಿ: ಗಡಿ ಪ್ರದೇಶವಾದ ದೇಲಂಪಾಡಿಯ ಬನಾರಿ ಶ್ರೀ ಗೋಪಾಲಕೃಷ್ಣ ಯಕ್ಷಗಾನ ಕಲಾ ಸಂಘದ ವತಿಯಿಂದ
ಕೀ.ವ.ಕೇಶವ ಸಾಧನಾ ಪ್ರಶಸ್ತಿ ಪ್ರದಾನ, ವನಮಾಲ ಕೇಶವ ಭಟ್ಟ ಸಂಸ್ಮರಣೆ ಹಾಗೂ ಯಕ್ಷಗಾನಾರ್ಥರೂಪಕ ಪ್ರಸ್ತುತಿ ಕಾರ್ಯಕ್ರಮ ನಡೆಯಿತು.ಶ್ರೀ ಕೃಷ್ಣ ಜನ್ಮಾಷ್ಟಮಿಯ ವಿಶೇಷ ಕಾರ್ಯಕ್ರಮವಾಗಿ ಪುಸ್ತಕ ಪ್ರೀತಿಯ ಪ್ರತಿಪಾದಕ, ಸಂಸ್ಕೃತಿಯ ಆರಾಧಕ ಸಮಾಜ ಸುಧಾರಕ, ಸಂಘದ ಮಾಜಿ ಅಧ್ಯಕ್ಷ ಕೀರಿಕ್ಕಾಡು ವನಮಾಲ ಕೇಶವ ಭಟ್ಟ ಅವರ ಸಂಸ್ಕರಣೆ ಹಾಗೂ
‘ಕೀ. ವ. ಕೇಶವ ಸಾಧನಾ ಪ್ರಶಸ್ತಿ’ ಪ್ರದಾನ ಸಮಾರಂಭ
ಸಂಘದ ಕೀರಿಕ್ಕಾಡು ಮಾಸ್ತರ್ ಸ್ಮಾರಕ ಸಭಾಭವನದಲ್ಲಿ ಹಮ್ಮಿಕೊಳ್ಳಲಾಯಿತು.ಭಗವದ್ಗೀತೆ ಪಾರಾಯಣದೊಂದಿಗೆ ಶ್ರೀ ಗೋಪಾಲಕೃಷ್ಣ ದೇವರ ವಿಶೇಷ ಆರಾಧನೆ ಮತ್ತು ಪೂಜಾರ್ಚನೆಯ ಬಳಿಕ ನಡೆದ ಸಮಾರಂಭದಲ್ಲಿ ಕೀರಿಕ್ಕಾಡು ವನಮಾಲ ಕೇಶವ ಭಟ್ಟ ಸ್ಮರಣಾರ್ಥ ನೀಡುವ ‘ಕೀ.ವ.ಕೇಶವ ಸಾಧನಾ ಪ್ರಶಸ್ತಿ’ಯನ್ನು ಶಿಕ್ಷಣ ಕ್ಷೇತ್ರದ ಹಿರಿಯರು ಹಾಗೂ ಕಲಾವಿದರಾದ ವೆಂಕಟರಮಣ ಮಾಸ್ತರ್ ದೇಲಂಪಾಡಿ ಅವರಿಗೆ ಪ್ರದಾನ ಮಾಡಲಾಯಿತು.
ಚಂದ್ರಶೇಖರ ಏತಡ್ಕ ಸಂಸ್ಮರಣಾ ಭಾಷಣ ಮಾಡಿದರು. ಸಂಘದ ಅಧ್ಯಕ್ಷರಾದ ಡಾ.ರಮಾನಂದ ಬನಾರಿ ಮಂಜೇಶ್ವರ ಅಧ್ಯಕ್ಷತೆ ವಹಿಸಿದ್ದರು.

ಪ್ರಶಸ್ತಿ ಸ್ವೀಕರಿಸಿ ಮಾತನಾಡಿದ ವೆಂಕಟರಮಣ ಮಾಸ್ತರ್ ದೇಲಂಪಾಡಿ ಬನಾರಿ ಶ್ರೀ ಗೋಪಾಲಕೃಷ್ಣ ಯಕ್ಷಗಾನ ಕಲಾ ಸಂಘದ ಜೊತೆಗಿನ ತಮ್ಮ ಸುದೀರ್ಘ ಸಂಬಂಧವನ್ನು ಸ್ಮರಿಸಿ ಧನ್ಯವಾದ ಅರ್ಪಿಸಿದರು. ರಾಮಣ್ಣ ಮಾಸ್ತರ್ ದೇಲಂಪಾಡಿ ಅಭಿನಂದನಾ ಭಾಷಣ ಮಾಡಿದರು. ಬನಾರಿ ಶ್ರೀ ಗೋಪಾಲಕೃಷ್ಣ ಯಕ್ಷಗಾನ ಕಲಾ ಸಂಘದ ಪ್ರಧಾನ ಕಾರ್ಯದರ್ಶಿ ವಿಶ್ವವಿನೋದ ಬನಾರಿ ಅಭಿನಂದನಾ ಪತ್ರ ವಾಚಿಸಿದರು. ನಾರಾಯಣ ದೇಲಂಪಾಡಿ ಸ್ವಾಗತಿಸಿ, ಕಾರ್ಯಕ್ರಮ ನಿರೂಪಿಸಿದರು.
ಈಶ್ವರಿ ಪೃಥ್ವಿ ಪ್ರಾರ್ಥನೆ ಹಾಡಿದರು.ಎಂ.ರಮಾನಂದ ರೈ ದೇಲಂಪಾಡಿ ವಂದಿಸಿದರು.

ಶಿವರಾಮ ಕಲ್ಲೂರಾಯ, ಅಪ್ಪಯ್ಯ ಮಣಿಯಾಣಿ, ಗೋಪಾಲ ಗೌಡ ಚಿದ್ಗಲ್ಲು, ಗೋಪಾಲಯ್ಯ ಕೋಟಿಗದ್ದೆ, ಡಾ.ಅನ್ನಪೂರ್ಣ ಏತ್ತಡ್ಕ, ವೆಂಕಟೇಶ್ವರಿಯಮ್ಮ ಬನಾರಿ, ಸರೋಜಿನಿ ಬನಾರಿ, ನಂದಕಿಶೋರ ಬನಾರಿ, ಪೂರ್ಣಿಮಾ ಬನಾರಿ ಮತ್ತಿತರರು ಉಪಸ್ಥಿತರಿದ್ದರು.
‘ಶ್ರೀಕೃಷ್ಣಾರ್ಪಣ ಯಕ್ಷಗಾನಾರ್ಥರೂಪಕ’:
ಸಭಾ ಕಾರ್ಯಕ್ರಮದ ಬಳಿಕ ಸಂಘದ ಅಧ್ಯಕ್ಷ ಡಾ.ರಮಾನಂದ ಬನಾರಿ ಅವರ ಕಲ್ಪನೆಯ ಹೊಸ ಪ್ರಯೋಗ ‘ಶ್ರೀಕೃಷ್ಣಾರ್ಪಣ’ ಯಕ್ಷಗಾನಾರ್ಥರೂಪಕ ಪ್ರಸ್ತುತಿಗೊಂಡಿತು. ಶ್ರೀಕೃಷ್ಣನ ಜನನ, ಶ್ರೀಕೃಷ್ಣಸಾರಥ್ಯ ಎಂಬ ಕಥಾ ಭಾಗವನ್ನು ಪ್ರಸ್ತುತಪಡಿಸಲಾಯಿತು.

ಭಾಗವತರಾಗಿ ರಚನಾ ಚಿದ್ಗಲ್ಲು, ವಿದ್ಯಾಶ್ರೀ ಆಚಾರ್ಯ, ಮೋಹನ ಮೆಣಸಿನಕಾನ, ಚೆಂಡೆ, ಮದ್ದಳೆ, ಚಕ್ರತಾಳದಲ್ಲಿ ಕುಮಾರ ಸುಬ್ರಹ್ಮಣ್ಯ ವಳಕುಂಜ, ವಿಷ್ಣುಶರಣ ಬನಾರಿ, ಶ್ರೀಧರ ಆಚಾರ್ಯ, ಕೃಷ್ಣ ಪ್ರಸಾದ, ಸದಾನಂದ ಮಯ್ಯಾಳ, ಪಾತ್ರವರ್ಗದಲ್ಲಿ ಶಾಂತಾಕುಮಾರಿ,ಶ್ರೀದೇವ್, ಡಾ.ರಮಾನಂದ ಬನಾರಿ, ನಾರಾಯಣ ದೇಲಂಪಾಡಿ, ರಾಮಣ್ಣ ಮಾಸ್ತರ್, ರಮಾನಂದ ರೈ ದೇಲಂಪಾಡಿ ಸಹಕರಿಸಿದರು. ಎಡೆಬಿಡದೆ ಸುರಿದ ಮಳೆಯ ನಡುವೆ ಯಕ್ಷಗಾನದ ಈ ನೂತನ ಪ್ರಯೋಗ ಯಕ್ಷಗಾನ ಪ್ರೇಮಿಗಳ ಮನಸೂರೆಗೊಂಡಿತು.





