ಸುಳ್ಯ: ಸುಳ್ಯ ಹಳಗೇಟಿನ ಶ್ರೀ ಕೇಶವಕೃಪಾ ವೇದ ಮತ್ತು ಕಲಾ ಪ್ರತಿಷ್ಠಾನ ಆಧುನಿಕ ಕಾಲದ ಗುರುಕುಲ ಎಂದೇ ಪ್ರಸಿದ್ಧ. ಪ್ರಾಚೀನ ಕಾಲದ ಗುರುಕುಲ ಸಂಪ್ರದಾಯ, ವೇದ, ಶಾಸ್ತ್ರ, ಉಪನಿಷತ್ಗಳ ಅಧ್ಯಯನದ ಮೂಲಕ ಆಧುನಿಕ ಯುಗದಲ್ಲೂ ಪ್ರಾಚೀನ ಸಂಸ್ಕೃತಿ, ಸಂಪ್ರದಾಯ ಬೆಳಗುವ ಕೇಶವ ಕೃಪಾದಲ್ಲಿ ಇನ್ನು ಒಂದು ತಿಂಗಳ ಕಾಲ ವೇದ ಮಂತ್ರ ಘೋಷಗಳು ಅನುರಣಿಸಲಿದೆ. ಸುಳ್ಯ ಹಳೆಗೇಟು ವಿದ್ಯಾನಗರದ ಶ್ರೀ ಕೇಶವ ಕೃಪಾ ವೇದ ಮತ್ತು ಕಲಾ ಪ್ರತಿಷ್ಠಾನದ ವತಿಯಿಂದ 23 ನೇ ವರ್ಷದ ಶ್ರೀ ಕೇಶವಕೃಪಾ ವೇದ-ಯೋಗ-ಕಲಾ ಶಿಬಿರ ಏ.16 ರಿಂದ ಮೇ.14ರ ವರೆಗೆ ನಡೆಯಲಿದೆ. ಒಂದು ತಿಂಗಳ ಕಾಲ ವೇದ ಯೋಗ
ಕಲಾ ಶಿಬಿರದಲ್ಲಿ ವಿದ್ಯಾರ್ಥಿಗಳು ಯೋಗಿಗಳ ಹಾಗೆ ಬದುಕಿ ಗುರುಕುಲ ಮಾದರಿಯಲ್ಲಿ ವೇದಾಧ್ಯಯನ ನಡೆಸುತ್ತಾರೆ. ಆಧುನಿಕ ಯುಗದಲ್ಲೂ ಪ್ರಾಚೀನ ಕಾಲದ ಗುರುಕುಲ ಸಂಪ್ರದಾಯ ನೆನಪಿಸುವ ಈ ವೇದ ಶಿಬಿಲವನ್ನು 22 ವರ್ಷಗಳಿಂದ ನಡೆಸಿಕೊಂಡು ಬರಲಾಗುತ್ತಿದೆ. ನಿತ್ಯ, ನಿರಂತರ ಸಾಂಸ್ಕೃತಿಕ ಪ್ರವಾಹ ಹರಿಸಿ ಮಾನವೀಯ ಮೌಲ್ಯಗಳನ್ನು ಬಿತ್ತಿದ ವೇದ ಶಿಬಿರವು 22 ವರ್ಷಗಳಲ್ಲಿ ನೂರಾರು ವಿದ್ಯಾರ್ಥಿಗಳಿಗೆ ವೇದೋಪನಿಷತ್ತಿನ ಅಂತರ ಗಂಗೆಯನ್ನು ಹರಿಸಿದೆ.
ಪ್ರತಿಷ್ಠಾನದ ಅಧ್ಯಕ್ಷ ಪುರೋಹಿತ ನಾಗರಾಜ ಭಟ್ ನೇತೃತ್ವದಲ್ಲಿ ನಡೆಯುವ ಶಿಬಿರದಲ್ಲಿ ವೇದಮಂತ್ರಗಳ ಅನುರಣಗಳ ನಡುವೆ ಸಾವಿರಾರು ವರುಷಗಳ ಹಿಂದಿನ ಭಾರತ ದರ್ಶನ ಮಾಡಿಕೊಳ್ಳುವ ಮಕ್ಕಳು ಆಧುನಿಕ ಬೇಸಿಗೆ ಶಿಬಿರಗಳ ಹಾಡು, ಕುಣಿತ, ಅಭಿನಯ, ಜಾಡುಗಳಲ್ಲಿಯೂ ಭಾಗವಹಿಸಿ ಸಂಭ್ರಮಿಸುತ್ತಾರೆ, ಯೋಗಾಸನ, ಪ್ರಾಣಾಯಾಮ ಮೂಲಕ ಜೀವನಪದ್ಧತಿಯ ಆರೋಗ್ಯಕರ ಪಯಣವನ್ನು ಕಲಿಯುತ್ತಾರೆ, ಆದರ್ಶ ಪುರುಷರ ಜೀವನ, ರಾಷ್ಟ್ರಭಕ್ತಿಯ ಧೈಯವನ್ನೂ ಮೈಗೂಡಿಸಿಕೊಳ್ಳುತ್ತಾರೆ. ಒಟ್ಟಿನಲ್ಲಿ ಹಳೆಯ ಕಾಲದ ಗುರುಕುಲ ಶಿಕ್ಷಣ ಪದ್ಧತಿ ಮೂಲಕ ವೇದ, ಯೋಗ, ಕಲೆಗಳನ್ನು ಸಂಪೂರ್ಣ ಉಚಿತವಾಗಿ ಇಲ್ಲಿ ಕಲಿಸಲಾಗುತ್ತದೆ.
ಎರಡು ದಶಕದ ಪಯಣ:
ದೇಶದ ಸಾಂಸ್ಕೃತಿಕ ಮೌಲ್ಯಗಳನ್ನು ಎಳೆಯ ಮಕ್ಕಳಿಗೆ
ತಿಳಿಸಬೇಕೆಂದು 2000ನೇ ವರ್ಷದಲ್ಲಿ ನಾಗರಾಜಭಟ್ ವೇದ ಶಿಬಿರವನ್ನು ಆರಂಭಿಸಿದ್ದರು,16 ಮಕ್ಕಳೊಂದಿಗೆ ಆರಂಭವಾದ ಶಿಬಿರಕ್ಕೆ ಇಂದು ವಿವಿಧ ರಾಜ್ಯಗಳಿಂದ ವಿದ್ಯಾರ್ಥಿಗಳು ಆಗಮಿಸುತ್ತಾರೆ. ಸಂಪೂರ್ಣ ಉಚಿತವಾಗಿ ನಡೆಯುವ ಈ ಶಿಬಿರದಲ್ಲಿ ಸೇರಿದವರು ಮೂರು ವರ್ಷಗಳ ಭಾಗವಹಿಸಿ ವೇದ ಅಧ್ಯಯನ ಪೂರ್ತಿಗೊಳಿಸಬೇಕು. ಬೇಡಿಕೆ ಹೆಚ್ಚಿದ ಕಾರಣ ಈಗ ಪ್ರವೇಶ ಪರೀಕ್ಷೆ ನಡೆಸಿ ವಿದ್ಯಾರ್ಥಿಗಳನ್ನು ಸೇರಿಸಿಕೊಳ್ಳಲಾಗುತ್ತದೆ ಎನ್ನುತ್ತಾರೆ ಪ್ರತಿಷ್ಠಾನದ ಅಧ್ಯಕ್ಷ ನಾಗರಾಜ ಭಟ್.
ಯೋಗ ಹಾಗೂ ಕಲಾ ಶಿಕ್ಷಣದೊಂದಿಗೆ ಅಸನ ವಸನ, ವಸತಿ, ಪಠ್ಯ ಪುಸ್ತಕಗಳೂ, ವ್ಯಾಸಪೀಠ ಇತ್ಯಾದಿಗಳನ್ನು ವಿದ್ಯಾರ್ಥಿಗಳಿಗೆ ಉಚಿತವಾಗಿ ನೀಡಲಾಗುತ್ತದೆ. ನಾಗರಾಜ ಭಟ್ ತಮ್ಮ ಮನೆಯಲ್ಲಿಯೇ ವಿದ್ಯಾರ್ಥಿಗಳಿಗೆ ವಸತಿ ಮತ್ತಿತರ ಎಲ್ಲ ವ್ಯವಸ್ಥೆಯನ್ನು ಕಲ್ಪಿಸುತ್ತಾರೆ.
ಶಿಬಿರದಲ್ಲಿ ವೇದ ಪಾಠ ಮಾತ್ರ ಅಲ್ಲದೆ ವೇದಾಂತರ್ಗತ ಜೀವನ ದರ್ಶನವನ್ನು ಜನಮಾನಸಕ್ಕೆ ಸಮರ್ಥವಾಗಿ ತಲುಪಿಸಲು ಮಾಧ್ಯಮವಾದ ಯೋಗಾಭ್ಯಾಸ, ಭಜನೆ, ಸಂಕೀರ್ತನೆಗಳು, ಹಾಡು-ಕುಣಿತ, ಮಕ್ಕಳಲ್ಲಿ ರಾಷ್ಟ್ರಪ್ರೇಮದ ಭಕ್ತಿ ತರಂಗ ಮೂರಿಸುವ ಹಲವಾರು ವೈವಿಧ್ಯ ಕಾರ್ಯಕ್ರಮಗಳೊಂದಿಗೆ ಮಕ್ಕಳ ಮನೋವಿಕಾಸಕ್ಕೆ ಪೂರಕವಾಗಿ ಜಾದೂ, ಮಿಮಿಕ್ತಿ, ಮುಖವಾಡ ತಯಾರಿ, ಬೊಂಬೆ ತಯಾರಿ, ಮಾತುಗಾರಿಕೆ, ಜಾನಪದ ನೃತ್ಯಗಳು, ಹಾವುಗಳ ಮಾಹಿತಿ, ಯಕ್ಷಗಾನ ರಂಗಪಾಠಗಳು, ರಂಗಗೀತೆ, ಚಿತ್ರಕಲೆ, ಪೊಲೀಸ್ ಮಾಹಿತಿ, ಆರೋಗ್ಯ ಮಾಹಿತಿ, ಅಗ್ನಿ ಶಾಮಕ ಪ್ರಾತ್ಯಕ್ಷಿಕೆ ಹೀಗೆ ಹಲವಾರು ವಿಷಯಗಳನ್ನು ಕಲಿಸಿಕೊಡಲಾಗುತ್ತಿದೆ.
ರಾಜ್ಯದ ಸುಪ್ರಸಿದ್ಧ ಸಂಪನ್ಮೂಲ ವ್ಯಕ್ತಿಗಳಿಂದ ಶಿಕ್ಷಣ ನೀಡಲಾಗುತ್ತದೆ. ಅಲ್ಲದೇ ಇದೇ ಶಿಬಿರದಲ್ಲಿ ಮೂರು ವರ್ಷಗಳನ್ನು ಪೂರೈಸಿದ ವಿದ್ಯಾರ್ಥಿಗಳಿಗೆ ಅಗ್ನಿಮುಖ ಪ್ರಯೋಗ ಹಾಗೂ ದುರ್ಗಾಸಪ್ತಶತೀ ಪಾಠಗಳನ್ನು ಅಳವಡಿಸಿಕೊಳ್ಳಲಾಗುತ್ತದೆ. ಋಗ್ವೇದ ಹಾಗೂ ಯಜುರ್ವೆದ ವಿಭಾಗಗಳಲ್ಲಿ ಒಟ್ಟು 6 ತರಗತಿಗಳು ನಡೆಯಅದ್ದು, ‘ರಾಜ್ಯದ ಪ್ರಸಿದ್ಧ ವೇದ ವಿದ್ವಾಂಸರು, ಕಲಾ ತಜ್ಞರು. ಯೋಗ ಶಿಕ್ಷಕರು. ಅಧ್ಯಾಪಕರಾಗಿ ಭಾಗವಹಿಸಲಿದ್ದಾರೆ. ಶ್ರೀ ಕೇಶವಕೃಪಾ ವೇದ ಶಿಬಿರಕ್ಕೆ ವರ್ಷದಿಂದ ವರ್ಷಕ್ಕೆ ದಾಖಲೆ ಸಂಖ್ಯೆಯಲ್ಲಿ 150ಕ್ಕೂ ಮಿಕ್ಕಿ ವಿದ್ಯಾರ್ಥಿಗಳು ಅವಕಾಶಕ್ಕಾಗಿ ಹೆಸರು ನೋಂದಾಯಿಸುತ್ತಿದ್ದು, ಇವರೆಲ್ಲರಿಗೂ ಪ್ರವೇಶ ಪರೀಕ್ಷೆ ನಡೆಸಿ ಈ ವರ್ಷದಲ್ಲಿ 60 ಜನ ಹೊಸ ವಿದ್ಯಾರ್ಥಿಗಳಿಗೆ ಹಾಗೂ ಹಿಂದಿನ ವರ್ಷಗಳ 100 ಜನ ವಿದ್ಯಾರ್ಥಿಗಳು ಸೇರಿ ಒಟ್ಟು 160 ವಿದ್ಯಾರ್ಥಿಗಳಿಗೆ ಅವಕಾಶ ಕಲ್ಪಿಸಲಾಗುತ್ತದೆ.
ವೇದ ಶಿಬಿರಗಳಲ್ಲಿ ಕಲಿತ ವೇದಮಂತ್ರಗಳು ಮರೆತು ಹೋಗಬಾರದು. ಅದು ಜೀವನದಲ್ಲಿ ಅಳವಡಿಕೆಯಾಗಬೇಕು ಎಂಬ ದೃಷ್ಟಿಯಿಂದ ವೇದಮಂತ್ರಗಳನ್ನು ಪ್ರಾಯೋಗಿಕವಾಗಿ ಬಳಸಿಕೊಳ್ಳಲು ವಿದ್ಯಾರ್ಥಿಗಳಿಂದ ಸರಣಿ ಶಿವಪೂಜೆ ಹಮ್ಮಿಕೊಳ್ಳಲಾಗುತ್ತಿದೆ.
ಸಮಾಜದ ಎಲ್ಲ ವರ್ಗದ ಜನರೂ ವೇದ ಶಿಕ್ಷಣ ಪಡೆಯಬೇಕು ಎಂಬ ದೃಷ್ಟಿಯಿಂದ ಕೇಶವಕೃಪಾ ವೇದ ಮತ್ತು ಕಲಾ ಪ್ರತಿಷ್ಠಾನದ ವತಿಯಿಂದ ಪ್ರತಿ ವರ್ಷ ವೇದ ಶಿಬಿರ ಅರಂಭವಾಗುವ ಮುನ್ನ ಒಂದು ವಾರಗಳ ಸಂಸ್ಕಾರ ವಾಹಿನಿ ಶಿಬಿರ ಹಮ್ಮಿಕೊಳ್ಳಲಾಗಿದೆ.
16 ರಂದು ಉದ್ಘಾಟನೆ:
ಏ.16ರಿಂದ ಮೇ 14ರ ತನಕ ಇಪ್ಪತ್ತಮೂರನೇ ವರ್ಷದ ಶ್ರೀ ಅಂತಾರಾಜ್ಯ ಮಟ್ಟದ ಕೇಶವಕೃಪಾ ವೇದ-ಯೋಗ-ಕಲಾ ಶಿಬಿರ
ನಡೆಯಲಿದೆ. ಏ.16 ರಂದು ಬೆಳಗ್ಗೆ 10.30ಕ್ಕೆ ಶಿಬಿರದ ಹಿರಿಯ ವಿದ್ಯಾರ್ಥಿ, ಬೆಂಗಳೂರಿನ ಕೋಮ್ಸ್ಕೋಪ್ ಆರ್&ಡಿ ಕಂಪೆನಿಯ ಇಂಜಿನಿಯರ್ ಶ್ರೀನಿಧಿ ಉಪಾಧ್ಯಾಯ ಅಡಿಕೆಹಿತ್ತು. ಭರತನಾಟ್ಯ ಹಾಗೂ ಸಂಗೀತ ಶಿಕ್ಷಕಿ ವಿದುಷಿ ಪ್ರಾಂಜಲಿ ಉಪಾಧ್ಯಾಯ ದಂಪತಿಗಳು ಉದ್ಘಾಟಿಸಲಿದ್ದಾರೆ. ವೇದ ಶಿಬಿರದ ಅಧ್ಯಾಪಕ, ಜ್ಯೋತಿಷಿ ವೇ ಮೂ ಸುದರ್ಶನ ಭಟ್ಟ, ಉಜಿರೆ ಸಭಾಧ್ಯಕ್ಷತೆ ವಹಿಸಲಿದ್ದಾರೆ. ಸರಕಾರಿ ಸಂಸ್ಕೃತ ಕಾಲೇಜು, ಮೇಲುಕೋಟೆ ಇದರ ನಿವೃತ್ತ ಪ್ರಾಂಶುಪಾಲ ವಿದ್ಯಾವಾಚಸ್ಪತಿ ಉಮಾಕಾಂತ ಭಟ್ಟ ಕೆರೆಕೈ ಇವರು ದಿಕ್ಕೂಚಿ ಉಪನ್ಯಾಸ ಮಾಡಲಿದ್ದಾರೆ. ಗೀತಾ ಸಾಹಿತ್ಯ ಸಂಭ್ರಮದ ನಿರ್ದೇಶಕ ಹಾಗೂ ಅಧ್ಯಾಪಕರಾದ ವಿಠಲ ನಾಯಕ್ ಇವರು ಮುಖ್ಯ ಅಭ್ಯಾಗತರಾಗಿ ಭಾಗವಹಿಸಲಿದ್ದಾರೆ. ಶ್ರೀ ಕೇಶವಕೃಪಾ ವೇದ ಮತ್ತು ಕಲಾ ಪ್ರತಿಷ್ಠಾನದ ಗೌರವಾಧ್ಯಕ್ಷರಾದ ಗೋಪಾಲಕೃಷ್ಣ ಭಟ್ ವಗೆನಾಡು ಶುಭಾಶಂಸನೆ ಮಾಡಲಿದ್ದಾರೆ ಎಂದು ಪ್ರತಿಷ್ಠಾನದ ಅಧ್ಯಕ್ಷ ಪುರೋಹಿತ ನಾಗರಾಜ ಭಟ್ ತಿಳಿಸಿದ್ದಾರ.