ಸುಳ್ಯ:ಧರ್ಮವನ್ನು ನಾವು ರಕ್ಷಣೆ ಮಾಡಿದರೆ, ಧರ್ಮ ನಮ್ಮನ್ನು ರಕ್ಷಿಸುತ್ತದೆ, ನಮ್ಮಿಂದ ಧರ್ಮ, ಸಂಸ್ಕಾರಗಳು ಬೆಳೆಯಬೇಕು, ಧರ್ಮ ಸಂಸ್ಕಾರಗಳಿಂದ ನಾವು ಬದುಕಬೇಕು ಆದುದರಿಂದ ನಮ್ಮ ಧರ್ಮ ಮತ್ತು ಸಂಸ್ಕಾರವನ್ನು ಪೋಷಿಸಿ ಬೆಳೆಸಬೇಕಾದುದು ಪ್ರತಿಯೊಬ್ಬರ ಜವಾಬ್ದಾರಿ ಎಂದು ಸುಬ್ರಹ್ಮಣ್ಯ ಮಠದ ಶ್ರೀ ವಿದ್ಯಾಪ್ರಸನ್ನ ತೀರ್ಥ ಸ್ವಾಮೀಜಿಯವರು ಹೇಳಿದ್ದಾರೆ.ಸುಳ್ಯ ಹಳೆಗೇಟು ವಿದ್ಯಾನಗರದ ಶ್ರೀ ಕೇಶವಕೃಪಾ ವೇದ ಮತ್ತು ಕಲಾ ಪ್ರತಿಷ್ಠಾನದ ಆಶ್ರಯದಲ್ಲಿ ಸುಳ್ಯದ ಶಿವಕೃಪಾ ಕಲಾ ಮಂದಿರದಲ್ಲಿ ನಡೆದ
25ನೇ ವರ್ಷದ ಶ್ರೀ ಕೇಶವಕೃಪಾ ವೇದ ಯೋಗ ಕಲಾ ಶಿಬಿರದ ಸಮಾರೋಪ ಮತ್ತು ಶ್ರೀ ಕೇಶವ ಸ್ಮೃತಿ ಪ್ರಶಸ್ತಿ ಪ್ರದಾನ ಸಮಾರಂಭದಲ್ಲಿ ಅವರು ಆಶೀರ್ವಚನ ನೀಡಿದರು.ವೇದಗಳ ಅಧ್ಯಯನ, ಕಲಿಸುವಿಕೆ ಧರ್ಮ ಸಂರಕ್ಷಣೆಯ ಭಾಗ. ನಿರಂತರ ಪರಿಶ್ರಮದ ಫಲವಾಗಿ ನಾಗರಾಜ ಭಟ್ ನೇತೃತ್ವದಲ್ಲಿ ಕೇಶವಕೃಪಾ ಗುರುಕುಲ ಸುದೀರ್ಘವಾಗಿ ಬೆಳೆದು ಬಂದಿದೆ. ಎಲ್ಲರೂ ಸುಖವಾಗಿ ಬದುಕಬೇಕು ಎಂದು ಬೋಧಿಸುವ ಉದಾತ್ತ ಧರ್ಮ ಹಿಂದೂ ಧರ್ಮ. ಧರ್ಮವನ್ನು ನಾವು ಪೋಷಿಸಿದರೆ, ಧರ್ಮ ನಮ್ಮನ್ನು ಕಾಪಾಡುತ್ತದೆ ಎಂದರು.

ಕೇಶವ ಸ್ಮೃತಿ ಸಾಧನಾ ಪ್ರಶಸ್ತಿ ಸ್ವೀಕರಿಸಿದ ಗ್ರೀನ್ ಹೀರೋ ಆಫ್ ಇಂಡಿಯಾ ಡಾ.ಆರ್.ಕೆ.ನಾಯರ್ ಮಾತನಾಡಿ ‘ಧರ್ಮ, ಸಂಸ್ಕೃತಿ, ಕಲೆಗಳನ್ನು ಉಳಿಸಿ ಹೊಸ ತಲೆಮಾರಿಗೆ ಹಸ್ತಾಂತರಿಸಲು ಈ ರೀತಿಯ ಶಿಬಿರಗಳು ಬೇಕು. ಈ ನಿಟ್ಟಿನಲ್ಲಿ ಕೇಶವ ಕೃಪಾ ವೇದ ಮತ್ತು ಕಲಾ ಶಿಬಿರ ದೇಶಕ್ಕೆ ಮಾದರಿಯಾಗಿದೆ ಎಂದು ಹೇಳಿದರು. ನಾವು ಯಾವ ರೀತಿಯಲ್ಲಿ ಜೀವನವನ್ನು ನಡೆಸಬೇಕು ಎಂಬುದನ್ನು ಧರ್ಮ, ವೇದ ಮತ್ತು ಶಾಸ್ತ್ರಗಳು ಹೇಳಿದೆ. ಆದುದರಿಂದ ಬದುಕು ಪರಿಪೂರ್ಣವಾಗಲು ತಾಂತ್ರಿಕ ಶಿಕ್ಷಣ ಮತ್ತು ಆಧುನಿಕ ಬದುಕಿನ ಜೊತೆಗೆ ವೇದ ಮತ್ತು ಶಾಸ್ತ್ರಗಳನ್ನು ಕಲಿಯಬೇಕು ಎಂದು ಅವರು ಹೇಳಿದರು.
ಸಮಾರಂಭದ ಅಧ್ಯಕ್ಷತೆ ವಹಿಸಿದ್ದ ಬೆಂಗಳೂರಿನ ಖ್ಯಾತ ಆರ್ಯುವೇದ ವೈದ್ಯರಾದ ಡಾ. ಗಿರಿಧರ ಕಜೆ ಮಾತನಾಡಿ’ ವೇದಗಳ ಜೊತೆ ಸಕಲ ಕಲೆಗಳನ್ನು ಕಲಿಸುವ ಕೇಶವ ಕೃಪಾ ವೇದ ಶಿಬಿರ ಪ್ರಾಚೀನ ನಳಂದ ವಿಶ್ವವಿದ್ಯಾನಿಲಯದ ಪುಟ್ಟ ಪ್ರತಿರೂಪ ಎಂದು ಬಣ್ಣಿಸಿದರು. ಆಧುನಿಕ ಬದುಕಿಗೆ ಈ ರೀತಿಯ ಗುರುಕುಲ ಶಿಕ್ಷಣ ಅನಿವಾರ್ಯ ಎಂದ ಅವರು ಈ ವೇದಾಧ್ಯಯನ ಬದುಕಿನ ಪುಣ್ಯ ಕಾಲ ಎಂದ ಅವರು ಜಗತ್ತಿನ ಶ್ರೇಷ್ಠ ಭಾಷೆಗಳಾದ ಸಂಸ್ಕೃತ, ಕನ್ನಡ ಅಧ್ಯಯನ ನಮ್ಮ ಪುಣ್ಯ ಎಂದು ಅಭಿಪ್ರಾಯಪಟ್ಟರು.

ಅಭಿನಂದನಾ ಭಾಷಣ ಮಾಡಿದ ಬೆಳಾಲು ಧರ್ಮಸ್ಥಳ ಮಂಜುನಾಥೇಶ್ವರ ಕಾಲೇಜಿನ ನಿವೃತ್ತ ಶಿಕ್ಷಕ ರಾಮಕೃಷ್ಣ ಭಟ್ ಚೂಂತಾರು ಮಾತನಾಡಿ’ ಕೇಶವ ಸ್ಮೃತಿ ಪ್ರಶಸ್ತಿ ಪಡೆದ ಮೂವರು ಸಾಧಕರು ಸಾಧನೆಯ ಉತ್ತುಂಗವನ್ನು ಏರಿದವರು. ಈ ಸಾಧಕರಿಗೆ ನೀಡಿದ ಕೇಶವ ಸ್ಮೃತಿ ಪ್ರಶಸ್ತಿ ಮೌಲಿಕವಾದುದು, ಈ ಪ್ರಶಸ್ತಿಗೆ ದೊಡ್ಡ ಗೌರವ ಇದೆ ಎಂದು ಹೇಳಿದರು.
ಕೇಶವ ಸ್ಮೃತಿ ಪ್ರಶಸ್ತಿ:
ಗ್ರೀನ್ ಹೀರೋ ಆಫ್ ಇಂಡಿಯಾ ಡಾ.ಆರ್.ಕೆ.ನಾಯರ್ ಅವರಿಗೆ ಸಾಧನಾ ಶ್ರೀ ಪ್ರಶಸ್ತಿ, ಅರಂಬೂರು ಕಾಂಚಿ ಕಾಮಕೋಟಿ ವೇದ ವಿದ್ಯಾಲಯದ ವೇದ ಅಧ್ಯಾಪಕರಾದ ವೆಂಕಟೇಶ ಶಾಸ್ತ್ರಿ ಅವರಿಗೆ ವೇದ ಸ್ಮೃತಿ ಹಾಗೂ ಸಂಗೀತ ಶಿಕ್ಷಕ ವಿದ್ವಾನ್ ಕಾಂಚನ ಈಶ್ವರ ಭಟ್ ಅವರಿಗೆ ಕಲಾಸ್ಮೃತಿ ಪ್ರಶಸ್ತಿ ನೀಡಿ ಗೌರವಿಸಲಾಯಿತು.

ಶಿಬಿರದ ವಿದ್ಯಾರ್ಥಿಗಳಿಗೆ ಸರ್ವಪ್ರಥಮ ಪ್ರಶಸ್ತಿ ಹಾಗೂ ಹಾಗೂ ಪ್ರತಿಭಾ ಪುರಸ್ಕಾರ ನೀಡಿ ಗೌರವಿಸಲಾಯಿತು.ಸರ್ವಪ್ರಥಮ ಪ್ರಶಸ್ತಿಯನ್ನು ಅಕ್ಷಜ ಸ್ಕಂದ, ಧ್ರುವ ಭಟ್, ರವೀಶ್.ಕೆ, ವಿಭವ ಮಯ್ಯ ಅವರಿಗೆ ನೀಡಲಾಯಿತು.ಪ್ರತಿಭಾ ಪುರಸ್ಕಾರವನ್ನು ಸನತ್, ಹರಿಕೃಷ್ಣ, ಜ್ಞಾನೇಶ್ ಕಲಾವಂತಕರ್ ಅವರಿಗೆ ನೀಡಿ ಗೌರವಿಸಲಾಯಿತು.
ಸುಳ್ಯ ಶಿವಕೃಪಾ ಕಲಾಮಂದಿರದ ಮಾಲಕ ಹರೀಶ್ ಕುಮಾರ್ ಕೆ. ಶ್ರೀ ಕೇಶವಕೃಪಾ ವೇದ ಮತ್ತು ಕಲಾ ಪ್ರತಿಷ್ಠಾನದ ಗೌರವಾಧ್ಯಕ್ಷರಾದ ಗೋಪಾಲಕೃಷ್ಣ ಭಟ್ ವಗೆನಾಡು, ಪ್ರತಿಷ್ಠಾನದ ಅಧ್ಯಕ್ಷರು ಹಾಗೂ ಶಿಬಿರದ ಪ್ರಧಾನ ಆಚಾರ್ಯರಾದ ಪುರೋಹಿತ ನಾಗರಾಜ ಭಟ್, ಸಂಚಾಲಕಿ ಶ್ರೀದೇವಿ ನಾಗರಾಜ ಭಟ್ ವೇದಿಕೆಯಲ್ಲಿ ಉಪಸ್ಥಿತರಿದ್ದರು.

ವೇದ ಗುರುಗಳಾದ ಅಭಿರಾಮ ಭಟ್ ಸ್ವಾಗತಿಸಿದರು, ಪ್ರತಿಷ್ಠಾನದ ಅಧ್ಯಕ್ಷ ಪುರೋಹಿತ ನಾಗರಾಜ ಭಟ್ ಪ್ರಾಸ್ತಾವಿಕವಾಗಿ ಮಾತನಾಡಿದರು. ಶ್ರೀದೇವಿ ನಾಗರಾಜ ಭಟ್, ಯಶಸ್ವಿ ಪಿ ಭಟ್, ಅನುರಾಧಾ ಶಿವಪ್ರಸಾದ್ ಸನ್ಮಾನ ಪತ್ರ ವಾಚಿಸಿದರು. ವೇದ ಗುರುಗಳಾದ ಸುದರ್ಶನ ಭಟ್ ಉಜಿರೆ ವಂದಿಸಿದರು. ಉದಯ ಭಾಸ್ಕರ ಹಾಗೂ ಅಕ್ಷತಾ ನಾಯಕ್ ಕಾರ್ಯಕ್ರಮ ನಿರೂಪಿಸಿದರು.

25ನೇ ವರ್ಷದ ಶಿಬಿರ ಸಂಪನ್ನ:
ರಾಜ್ಯ ಹಾಗೂ ಅಂತರ್ರಾಜ್ಯಗಳಲ್ಲಿ ಜನಮೆಚ್ಚುಗೆ ಗಳಿಸಿದ ಕೇಶವ ಕೃಪಾ ವೇದ-ಯೋಗ-ಕಲಾ ಶಿಬಿರ ಇದೀಗ ಇಪ್ಪತ್ತೈದನೇ ವರ್ಷವನ್ನು ಪೂರ್ತಿ ಮಾಡಿದೆ.
ಸಂಪೂರ್ಣ ಉಚಿತವಾಗಿ ವೇದ-ಯೋಗ ಹಾಗೂ ಕಲಾ ಶಿಕ್ಷಣದೊಂದಿಗೆ ಅಸನ, ವಸನ, ವಸತಿ, ಪಠ್ಯ ಪುಸ್ತಕಗಳೂ, ವ್ಯಾಸಪೀಠ ಇತ್ಯಾದಿಗಳನ್ನು ನೀಡಿ ಸಂಪೂರ್ಣ ಉಚಿತವಾಗಿ ಶಿಬಿರ ನಡೆಯಿತು. ಕರ್ನಾಟಕ, ಕೇರಳ ಸೇರಿ ವಿವಿಧ ರಾಜ್ಯಗಳಿಂದ 200 ವಿದ್ಯಾರ್ಥಿಗಳು ಒಂದು ತಿಂಗಳ ಕಾಲ ನಡೆದ ಶಿಬಿರದಲ್ಲಿ ಭಾಗವಹಿಸಿದ್ದರು.