ನವದೆಹಲಿ: ಕೇರಳ ರಾಜ್ಯದ ಹೆಸರು ಇನ್ನು ‘ಕೇರಳಂ’ ಆಗಲಿದೆ. ರಾಜ್ಯದ ಮರು ನಾಮಕರಣ ಪ್ರಕ್ರಿಯೆಗೆ ಕೇಂದ್ರ ಸರ್ಕಾರ ಒಪ್ಪಿಗೆ ನೀಡಿದೆ. ರಾಜ್ಯದ ಹೆಸರು ಬದಲಾವಣೆಯ ನಿರ್ಧಾರವನ್ನು ಪ್ರಧಾನಿ ನರೇಂದ್ರ ಮೋದಿ ಅಧ್ಯಕ್ಷತೆಯಲ್ಲಿ ನಡೆದ ಸಚಿವ ಸಂಪುಟ ಸಭೆಯಲ್ಲಿ ತೆಗೆದುಕೊಳ್ಳಲಾಯಿತು.ಕೇರಳದ ಹೆಸರನ್ನು ಅಧಿಕೃತ ವಾಗಿ
‘ಕೇರಳಂ’ ಎಂದು ಬದಲಾಯಿಸುವಂತೆ ಕೇಂದ್ರವನ್ನು ಒತ್ತಾಯಿಸುವ ನಿರ್ಣಯವನ್ನು ಕೇರಳ ವಿಧಾನಸಭೆಯು 2023ರ ಆಗಸ್ಟ್ 9ರಂದು ಅಂಗೀಕರಿಸಿತ್ತು. ರಾಜ್ಯವನ್ನು ಮಲಯಾಳ ಭಾಷೆಯಲ್ಲಿ ‘ಕೇರಳಂ’ ಎಂದೇ ಕರೆಯಲಾಗುತ್ತಿದೆ. ಆದರೆ, ಇತರ ಭಾಷೆಗಳಲ್ಲಿ ರಾಜ್ಯದ ಹೆಸರು ಇನ್ನೂ ಕೇರಳವಾಗಿದೆ. ಸಂವಿಧಾನದ 3ನೇ ವಿಧಿದಡಿ ‘ಕೇರಳಂ’ ಎಂದು ತಿದ್ದುಪಡಿ ಮಾಡಲು ಮತ್ತು ಸಂವಿಧಾನದ 8ನೇ ವಿಧಿಯಡಿದಲ್ಲಿ ಉಲ್ಲೇಖಿಸಿರುವ ಎಲ್ಲ ಭಾಷೆಗಳಲ್ಲಿ ‘ಕೇರಳಂ’ ಎಂದು ಮರುನಾಮಕರಣ ಮಾಡಲು ತಕ್ಷಣ ಕ್ರಮ ಕೈಗೊಳ್ಳುವಂತೆ ವಿಧಾನಸಭೆ ಸರ್ವಾನುಮತದಿಂದ ಕೇಂದ್ರ ಸರ್ಕಾರವನ್ನು ಕೋರುತ್ತದೆ‘ ಎಂದು ನಿರ್ಣಯ ತೆಗೆದುಕೊಂಡಿತ್ತು.
ಮೊದಲ ಬಾರಿ ಕಳುಹಿಸಿದ್ದ ನಿರ್ಣಯವನ್ನು ಪರಿಶೀಲಿಸಿದ್ದ ಕೇಂದ್ರ ಗೃಹ ಸಚಿವಾಲಯವು ಕೆಲ ತಾಂತ್ರಿಕ ಬದಲಾವಣೆ ಮಾಡುವಂತೆ ಸಲಹೆ ಮಾಡಿತ್ತು. ಹೀಗಾಗಿ, ಕೇರಳ ವಿಧಾನಸಭೆಯು 2024ರ ಜೂನ್ 24ರಂದು ಮತ್ತೊಮ್ಮೆ ನಿರ್ಣಯ ಅಂಗೀಕರಿಸಿತ್ತು. ಮುಂದೆ ರಾಷ್ಟ್ರಪತಿ ಅವರು ಸಂವಿಧಾನದ 3ನೇ ವಿಧಿ ಅಡಿಯಲ್ಲಿ ಅಭಿಪ್ರಾಯ ವ್ಯಕ್ತಪಡಿಸಲು ಕೇರಳ ವಿಧಾನಸಭೆಗೆ ಕಳುಹಿಸುತ್ತಾರೆ. ವಿಧಾನಸಭೆಯ ಅಭಿಪ್ರಾಯ ಸ್ವೀಕರಿಸಿದ ಬಳಿಕ ಕೇಂದ್ರ ಸರ್ಕಾರವು ಮುಂದಿನ ಕ್ರಮ ಕೈಗೊಳ್ಳುತ್ತದೆ. ಮಸೂದೆಯನ್ನು ಸಂಸತ್ತಿನ ಉಭಯ ಸದನಗಳಲ್ಲಿ ಮಂಡಿಸಲು ರಾಷ್ಟ್ರಪತಿಗಳ ಶಿಫಾರಸನ್ನು ಪಡೆಯಲಾಗುತ್ತದೆ.







