ಸುಳ್ಯ:ಕರ್ನಾಟಕ ಅರೆಭಾಷೆ ಸಂಸ್ಕೃತಿ ಮತ್ತು ಸಾಹಿತ್ಯ ಅಕಾಡೆಮಿಯ ವತಿಯಿಂದ ಮಾರ್ಚ್ 31ರಂದು ಬೆಳ್ಳಾರೆಯ ಬಂಗ್ಲೆಗುಡ್ಡೆಯಲ್ಲಿ ಸಮರ ವೀರ ಕೆದಂಬಾಡಿ ರಾಮಯ್ಯ ಗೌಡರ ಸಂಸ್ಮರಣಾ ದಿನಾಚರಣೆಯನ್ನು ಆಚರಿಸಲಾಗುವುದು. ಕೆದಂಬಾಡಿ ರಾಮಯ್ಯ ಗೌಡರ ನೇತೃತ್ವದ ತಂಡ ಬ್ರಿಟಿಷರ ವಿರುದ್ಧ ಹೋರಾಟ ನಡೆಸಿದ ಸಂದರ್ಭದಲ್ಲಿ 1837ರ
ಮಾರ್ಚ್ 31ರಂದು ಸಂಗ್ರಾಮಕ್ಕೆ ಹೊರಟು ಬೆಳ್ಳಾರೆಯಲ್ಲಿದ್ದ ಬ್ರಿಟಿಷರ ಖಜಾನೆಯನ್ನು ವಶಪಡಿಸಿಕೊಂಡು ನಂತರದಲ್ಲಿ ಮಂಗಳೂರಿನತ್ತ ಸಾಗಿತ್ತು. ಇದರ ಸ್ಮರಣಾರ್ಥ ಅಕಾಡೆಮಿಯು ಈ ಕಾರ್ಯಕ್ರಮವನ್ನು ಹಮ್ಮಿಕೊಂಡಿದೆ.
ಕಾರ್ಯಕ್ರಮವು ಅಕಾಡೆಮಿ ಅಧ್ಯಕ್ಷರಾದ ಸದಾನಂದ ಮಾವಜಿಯವರ ಅಧ್ಯಕ್ಷತೆಯಲ್ಲಿ ನಡೆಯಲಿದೆ. ಸುಳ್ಯ ಶಾಸಕಿ ಭಾಗೀರಥಿ ಮುರುಳ್ಯ ಕಾರ್ಯಕ್ರಮವನ್ನು ಉದ್ಘಾಟಿಸಲಿದ್ದಾರೆ. ಶಾರದಾ ಪದವಿಪೂರ್ವ ಕಾಲೇಜಿನ ಪ್ರಾಧ್ಯಪಕರಾದ ಪ್ರಸನ್ನ ನಿಡ್ಯಮಲೆ ಅವರು ಸಂಪನ್ಮೂಲ ವ್ಯಕ್ತಿಯಾಗಿ ಭಾಗವಹಿಸಲಿದ್ದಾರೆ. ಅತಿಥಿಗಳಾಗಿ ಕರ್ನಾಟಕ ರಾಜ್ಯ ಕನಿಷ್ಟ ವೇತನ ಸಲಹಾ ಮಂಡಳಿ ಅಧ್ಯಕ್ಷ ಟಿ.ಎಂ. ಶಾಹೀದ್ ತೆಕ್ಕಿಲ್, ಸುಳ್ಯ ತಹಶೀಲ್ದಾರ್ ಮಂಜುಳಾ, ತಾಲೂಕು ಪಂಚಾಯತ್ ಕಾರ್ಯನಿರ್ವಹಣಾಧಿಕಾರಿ ರಾಜಣ್ಣ, ಸಹಾಯಕ ಕಾರ್ಯಪಾಲಕ ಅಭಿಯಂತರರು ಪಂಚಾಯತ್ ರಾಜ್ ಹಾಗೂ ಬೆಳ್ಳಾರೆ ಗ್ರಾಮ ಪಂಚಾಯತ್ ಆಡಳಿತಾಧಿಕಾರಿ ಶ್ರೀ ಎಂ.ಎಂ. ಪಯಾಜ್ ಅಹ್ಮದ್, ಬೆಳ್ಳಾರೆ ಠಾಣೆ ಉಪನಿರೀಕ್ಷರಾದ ಈರಯ್ಯ ದೂಂತೂರು, ಅಮರ ಸುಳ್ಯ ಸಮರ 1837 ಸುಳ್ಯ ತಾಲೂಕು ಸಮಿತಿಯ ಅಧ್ಯಕ್ಷರಾದ ಚಂದ್ರಾ ಕೋಲ್ಚಾರ್, ಸುಬ್ರಹ್ಮಣ್ಯ ಮಹಿಳಾ ವಿವಿಧೋದ್ದೇಶ ಸಹಕಾರಿ ಸಂಘ್ಯದ ಅಧ್ಯಕ್ಷೆ ರಾಜೀವಿ ಆರ್ ರೈ, ಮಂಗಳೂರು ಎಸ್.ಸಿ.ಡಿ.ಸಿ.ಸಿ ಬ್ಯಾಂಕ್ ನಿರ್ದೇಶಕ ಎಸ್.ಎನ್ ಮನ್ಮಥ, ಬೆಳ್ಳಾರೆ ಪ್ರಾಥಮಿಕ ಕೃಷಿ ಪತ್ತಿನ ಸಹಕಾರಿ ಸಂಘದ ಅಧ್ಯಕ್ಷ ರಾಮಕೃಷ್ಣ ಭಟ್ ಕುರುಂಬುಡೇಲು ಮತ್ತಿತರರು ಭಾಗವಹಿಸಲಿದ್ದಾರೆ.
ಕಾರ್ಯಕ್ರಮವು ಪೂ. 9ಗಂಟೆಗೆ ಆರಂಭಗೊಳ್ಳಲಿದೆ. ಬೆಳ್ಳಾರೆ ಪೋಲೀಸ್ ಠಾಣೆಯ ಸಮೀಪದಿಂದ ಬಂಗ್ಲೆಗುಡ್ಡೆ ತನಕ ಮೆರವಣಿಗೆ ಸಾಗಿ, ಕೆದಂಬಾಡಿ ರಾಮಯ್ಯ ಗೌಡರ ಭಾವಚಿತ್ರಕ್ಕೆ ಪುಷ್ಪ ನಮನ ಸಲ್ಲಿಸಿ ನಂತರ ಸಭಾ ಕಾರ್ಯಕ್ರಮನಡೆಯಲಿದೆ ಎಂದು ಅರೆಭಾಷೆ ಅಕಾಡೆಮಿ ಅಧ್ಯಕ್ಷ ಸದಾನಂದ ಮಾವಜಿ ರವರು ಪತ್ರಿಕಾ ಹೇಳಿಕೆಯಲ್ಲಿ ತಿಳಿಸಿದ್ದಾರೆ.










