ಸುಳ್ಯ: ಡೆಂಗಿ ಜ್ವರ ಹರಡುವುದನ್ನು ಗಂಭೀರವಾಗಿ ಪರಿಗಣಿಸಿ, ಸುಳ್ಯ ತಾಲೂಕಿನಲ್ಲಿ ವ್ಯಾಪಕವಾಗಿ ಹರಡುತ್ತಿರುವ ಡೆಂಗಿ ಜ್ವರದ ನಿಯಂತ್ರಣಕ್ಕೆ ಎಲ್ಲಾ ಕ್ರಮಗಳನ್ನು ಕೈಗೊಳ್ಳಬೇಕು.ಡೆಂಗಿ ಜ್ವರದ ನಿಯಂತ್ರಣಕ್ಕೆ ಆರೋಗ್ಯ ಇಲಾಖೆಯ ಜೊತೆಗೆ ಎಲ್ಲಾ ಇಲಾಖೆಗಳು ಕೈಜೋಡಿಸಬೇಕು ಎಂದು ಸಂಸದ ಕ್ಯಾಪ್ಟನ್ ಬ್ರಿಜೇಶ್ ಚೌಟ ಹಾಗೂ ಶಾಸಕಿ ಭಾಗೀರಥಿ ಮುರುಳ್ಯ ಅಧಿಕಾರಿಗಳಿಗೆ ಸೂಚನೆ ನೀಡಿದ್ದಾರೆ. ಸುಳ್ಯ ತಾಲೂಕು ಪಂಚಾಯತ್ ಸಭಾಂಗಣದಲ್ಲಿ ನಡೆಸ ಕರ್ನಾಟಕ ಅಭಿವೃದ್ಧಿ ಕಾರ್ಯಕ್ರಮಗಳ ತ್ರೈಮಾಸಿಕ ಪ್ರಗತಿ ಪರಿಶೀಲನಾ ಸಭೆಯಲ್ಲಿ
ಸಂಸದರು ಹಾಗೂ ಶಾಸಕರು ಈ ಸೂಚನೆ ನೀಡಿದರು.
ರಾಜ್ಯದಾದ್ಯಂತ ಡೆಂಗಿ ಜ್ವರ ಹರಡುತ್ತಿದೆ.ಆದ್ದರಿಂದ ಇದನ್ನು ಗಂಭೀರವಾಗಿ ಪರಿಗಣಿಸಿ ಜ್ವರ ನಿಯಂತ್ರಣಕ್ಕೆ ಕ್ರಮ ಕೈಗೊಳ್ಳಬೇಕು.ಎಲ್ಲಾ ಅಧಿಕಾರಿಗಳು ಇದರ ಬಗ್ಗೆ ಗಮನಹರಿಸಿ ಗ್ರಾಮ ಮಟ್ಟದಲ್ಲಿ ಜನ ಜಾಗೃತಿಗೊಳಿಸುವ ಮತ್ತು ಗ್ರಾಮ ಗ್ರಾಮಗಳಿಂದ ರೋಗಿಗಳ ಕುರಿತು ಮಾಹಿತಿ ಸಂಗ್ರಹಿಸುವ ಕೆಲಸ ಕಾರ್ಯಗಳನ್ನು ಮಾಡಬೇಕು. ಜ್ವರದ ಬಗ್ಗೆ ಜನರಿಗೆ ಸೂಕ್ತ ಮಾಹಿತಿ ನೀಡಲು ಮತ್ತು ಜನರಿಗೆ ತ್ವರಿತ ನೆರವು ಪಡೆಯುವ ನಿಟ್ಟಿನಲ್ಲಿ ಕಾಲ್ ಸೆಂಟರ್ ತೆರೆಯಬೇಕು ಎಂದು ಸಂಸದರು ಹಾಗೂ ಶಾಸಕರು ಸೂಚಿಸಿದರು.ಆರೋಗ್ಯ ಇಲಾಖೆ ವತಿಯಿಂದ ಡೆಂಗ್ಯೂ ರೋಗ ಹರಡುವ ಮತ್ತು ಅದನ್ನು ನಿಯಂತ್ರಿಸುವ ಬಗ್ಗೆ ಸಾಕ್ಷ ಚಿತ್ರ ಪ್ರದರ್ಶನ ನೀಡಿ ಮಾಹಿತಿಯನ್ನು ನೀಡಲಾಯಿತು.
ಜನರ ಸಮಸ್ಯೆಗಳಿಗೆ ಸ್ಪಂದಿಸುವ ಕೆಲಸವನ್ನು ತ್ವರಿತವಾಗಿ ಮಾಡಬೇಕೆಂದು ಸಂಸದರು ಸೂಚಿಸಿದರು.ಸುಳ್ಯ ನಗರ ಪಂಚಾಯತಿ ವ್ಯಾಪ್ತಿಯಲ್ಲಿ ನದಿ ಪರಂಬೋಕು ಮತ್ತು ರಸ್ತೆ ಪರಂಬೋಕುವಿನಲ್ಲಿ ಅಕ್ರಮವಾಗಿ ಕಟ್ಟಿರುವ ಕಟ್ಟಡಗಳ ಬಗ್ಗೆ ಲೋಕೋಪಯೋಗಿ ಇಲಾಖೆ ಕಂದಾಯ ಇಲಾಖೆ ಮತ್ತು ಸುಳ್ಯ ನಗರ ಪಂಚಾಯತ್ ಜಂಟಿಯಾಗಿ ಸಮೀಕ್ಷೆ ನಡೆಸಿ ವರದಿ ಸಲ್ಲಿಸುವಂತೆ ಶಾಸಕರು ಸೂಚಿಸಿದರು. ಕೊಲ್ಲಮೊಗ್ರ ಗ್ರಾಮ ಪಂಚಾಯತಿನಲ್ಲಿ ನೆರೆ ಸಂತ್ರಸ್ತರಿಗೆ ನಿವೇಶನಗಳನ್ನು ಹಂಚಿಕೆ ಮಾಡಲು ಕ್ರಮ ಕೈಗೊಳ್ಳಬೇಕು, ವಿದ್ಯುತ್ ಸಂಪರ್ಕ ಇಲ್ಲದ ಮನೆಗಳನ್ನು ಗುರುತಿಸಿ ಅರ್ಹರಿಗೆ ವ್ಯವಸ್ಥೆ ಕಲ್ಪಿಸಿ ಕೊಡಬೇಕು ಎಂದು ಅಧಿಕಾರಿಗಳಿಗೆ ಸೂಚನೆ ನೀಡಿದರು. ಜಲಜೀವನ್ ಮಿಷನ್ ಕಾಮಗಾರಿ ತ್ವರಿತವಾಗಿ ಪೂರ್ತಿ ಮಾಡಬೇಕು ಎಂದು ಸಂಸದರು ಸೂಚಿಸಿದರು.
ತಾಲೂಕಿನಲ್ಲಿ ಅಡಿಕೆ ಹಳದಿ ರೋಗ,ರೋಗದ ಬಗ್ಗೆ ಪರಿಶೀಲನೆ ನಡೆಸಿದ ವಿಷಯಗಳ ಕುರಿತು ಚರ್ಚೆ ನಡೆಯಿತು. ಸುಳ್ಯದ ಅಂಬೇಡ್ಕರ್ ಭವನ ಕಟ್ಟಡ ಕಾಮಗಾರಿಯ ವಿಳಂಬ ಆಗಿರುವ ಕುರಿತು ಚರ್ಚೆ ನಡೆಯಿತು.
ವೇದಿಕೆಯಲ್ಲಿ ಸುಳ್ಯ ತಾಲೂಕು ಪಂಚಾಯತ್ ಮುಖ್ಯ ಕಾರ್ಯನಿರ್ವಹಣಾಧಿಕಾರಿ ರಾಜಣ್ಣ, ತಹಶೀಲ್ದಾರ್ ಮಂಜುನಾಥ್, ತಾಲೂಕು ಪಂಚಾಯತ್ ಆಡಳಿತಾಧಿಕಾರಿ ಉದಯಕುಮಾರ್ ಶೆಟ್ಟಿ ಉಪಸ್ಥಿತರಿದ್ದರು.ಸಭೆಯಲ್ಲಿ ವಿವಿಧ ಇಲಾಖೆಗಳ ಅಧಿಕಾರಿಗಳು ಭಾಗವಹಿಸಿದ್ದರು.