ಸುಳ್ಯ: ಅಸ್ಟಬಂಧ ಬ್ರಹ್ಮಕಲಶೋತ್ಸವ ನಡೆದ ಕಾಯರ್ತೋಡಿ ಶ್ರೀ ಮಹಾವಿಷ್ಣು ದೇವಸ್ಥಾನದಲ್ಲಿ ದೇವರ ಪ್ರತಿಷ್ಠೆ ಸಂದರ್ಭದಲ್ಲಿ ಹಲವು ಮಂದಿ ಭಕ್ತರು ಭಕ್ತಿ ಪೂರ್ವಕ ಆಭರಣಗಳನ್ನು, ಒಡವೆಗಳನ್ನು ದೇವಸ್ಥಾನಕ್ಕೆ ಸಮರ್ಪಿಸಿದ್ದಾರೆ. ದೇವಸ್ಥಾನದ ಅರ್ಚಕರ ಸಲಹೆಯ ಮೇರೆಗೆ ಪ್ರತಿಷ್ಠಾ ಸಂದರ್ಭದಲ್ಲಿ ದೇವರಿಗೆ ಆಭರಣ ಸಮರ್ಪಣೆ ಮಾಡಬಹುದು ಎಂದು ದೇವಸ್ಥಾನದ ಆಡಳಿತ ಮಂಡಳಿ ತಿಳಿಸಿತ್ತು. ಈ ಹಿನ್ನಲೆಯಲ್ಲಿ ಹಲವು ಮಂದಿ ಭಕ್ತರು ಆಭರಣ, ಒಡವೆಗಳನ್ನು ಸಮರ್ಪಣೆ

ಮಾಡಿದ್ದಾರೆ. 92 ಗ್ರಾಂನ ಬೆಳ್ಳಿಯ ಮುಖ ಕವಚ, 480 ಗ್ರಾಂ ತೂಕದ ಸೊಂಟದಿಂದ ಎದೆಯವರೆಗಿನ ಬೆಳ್ಳಿಯ ಕವಚ, 780 ಗ್ರಾಂ ತೂಕದ ಪಾದದಿಂದ ಸೊಂಟದವರೆಗಿನ ಬೆಳ್ಳಿಯ ಕವಚ, 590 ಗ್ರಾಂ ತೂಕದ ಪಾಣಿ ಪೀಠದ ಎದುರಿನ ಬೆಳ್ಳಿಯ ಕವಚ, ಜಾತಿ ಮುತ್ತಿನ ಹಾರ 1, ಹೈದರಾಬಾದ್ ಮುತ್ತಿನ ಹಾರ 1, ಬೆಳ್ಳಿಯ ಸರ,ಪಚ್ಚೆ ಕಲ್ಲಿನ ಪದಕ 1 ಸಮರ್ಪಣೆ ಮಾಡಲಾಗಿದೆ. ಪ್ರತಿಷ್ಠೆಯ ದಿನ ಈ ಆಭರಣಗಳನ್ನು ತೊಡಿಸಿ ಅಲಂಕಾರಿಸಿ ಕಾಯರ್ತೋಡಿಯ ಮಹಾ ವಿಷ್ಣು ದೇವರ ವಿಗ್ರಹ ಕಂಗೊಳಿಸಿತ್ತು.

ಈ ಹಿಂದೆ ವಿಷ್ಣುವಿಗೆ ಬೆಳ್ಳಿಯ ಕಿರೀಟ, ಬೆಳ್ಳಿಯ ಶಂಖ, ಚಕ್ರ, ಗದಾ ಪದ್ಮ ಸಮರ್ಪಿಸಲಾಗಿತ್ತು. ಪ್ರಶಾಂತ್ ಕಾಯರ್ತೋಡಿ ಅವರು ದೇವಸ್ಥಾನಕ್ಕೆ ಭಕ್ತರು ಸಮರ್ಪಿಸಿದ ಆಭರಣಗಳ ತಯಾರಿಕೆಯಲ್ಲಿ ಸಹಕಾರ ನೀಡಿದ್ದರು.

“ದೇವಸ್ಥಾನದ ಅರ್ಚಕರ ಸಲಹೆಯ ಮೇರೆಗೆ ಪ್ರತಿಷ್ಠಾ ಸಂದರ್ಭದಲ್ಲಿ ಭಕ್ತರು ಆಭರಣಗಳನ್ನು ಸಮರ್ಪಣೆ ಮಾಡಬಹುದು ಎಂದು ತಿಳಿಸಲಾಗಿತ್ತು. ಈ ಹಿನ್ನಲೆಯಲ್ಲಿ ಹಲವು ಮಂದಿ ಭಕ್ತರು ಭಕ್ತಿ ಪೂರ್ವಕ ಆಭರಣಗಳನ್ನು ಸಮರ್ಪಿಸಿದ್ದರು. ಸಮರ್ಪಣೆ ಮಾಡಿದ ಎಲ್ಲಾ ಭಕ್ತರಿಗೆ ದೇವಸ್ಥಾನದ ವ್ಯವಸ್ಥಾಪನಾ ಸಮಿತಿ ಹಾಗು ಬ್ರಹ್ಮ ಕಲಶೋತ್ಸವ ಸಮಿತಿಯ ಪರವಾಗಿ ಕೃತಜ್ಞತೆಯನ್ನು ಸಲ್ಲಿಸುತ್ತೇವೆ”
-ಎ.ಟಿ.ಕುಸುಮಾಧರ.
ಪ್ರಧಾನ ಕಾರ್ಯದರ್ಶಿ ಬ್ರಹ್ಮಕಲಶೋತ್ಸವ ಸಮಿತಿ.