ಸುಳ್ಯ: ಸುಳ್ಯ ತಾಲೂಕು ಕನ್ನಡ ಸಾಹಿತ್ಯ ಪರಿಷತ್ತಿನ ಆಶ್ರಯದಲ್ಲಿ 2022-23ನೇ ಸಾಲಿನಲ್ಲಿ ಹತ್ತನೇ ತರಗತಿಯ ವಾರ್ಷಿಕ ಪರೀಕ್ಷೆಯಲ್ಲಿ ಕನ್ನಡ ವಿಷಯದಲ್ಲಿ ಶೇ.100 ಅಂಕ ಗಳಿಸಿದ ವಿದ್ಯಾರ್ಥಿಗಳಿಗೆ ಗೌರವಾರ್ಪಣೆ ಕಾರ್ಯಕ್ರಮ 8 ಜುಲೈ 8 ರಂದು ಸುಳ್ಯದ ಕನ್ನಡ ಭವನದಲ್ಲಿ ನಡೆಯಲಿದೆ.ಕನ್ನಡ ಸಾಹಿತ್ಯ -ಭಾಷೆಯನ್ನು ಪ್ರೋತ್ಸಾಹಿಸುವ ದೃಷ್ಟಿಯಿಂದ ಕಳೆದ 8 ವರ್ಷಗಳಿಂದ ಸುಳ್ಯ ತಾಲೂಕು ಕನ್ನಡ ಸಾಹಿತ್ಯ ಪರಿಷತ್ತು ಈ ಕಾರ್ಯಕ್ರಮವನ್ನು ಆಯೋಜಿಸುತ್ತಿದೆ.ಹತ್ತನೇ ತರಗತಿಯಲ್ಲಿ ಕನ್ನಡ
ವಿಷಯದಲ್ಲಿ ಪೂರ್ಣ ಅಂಕ ಗಳಿಸಿದ ವಿದ್ಯಾರ್ಥಿಗಳನ್ನು ಗೌರವಿಸುವ ಮೂಲಕ ಆ ವಿದ್ಯಾರ್ಥಿಗಳನ್ನು ಕನ್ನಡ ಸಾಹಿತ್ಯದೆಡೆಗೆ ಸೆಳೆಯುವುದು ,ಕನ್ನಡ ಪುಸ್ತಕಗಳನ್ನು ಓದಲು ಪ್ರೇರೇಪಿಸುವುದು ಕಾರ್ಯಕ್ರಮದ ಪ್ರಮುಖ ಉದ್ದೇಶ. ಸುಳ್ಯ ಶಾಸಕಿ ಭಾಗೀರಥಿ ಮುರುಳ್ಯರವರು ಉದ್ಘಾಟಿಸಲಿದ್ದಾರೆ.ಸಾಧಕ ವಿದ್ಯಾರ್ಥಿಗಳನ್ನು ಅಕಾಡೆಮಿ ಆಫ್ ಲಿಬರಲ್ ಎಜ್ಯುಕೇಶನ್ ನ ಅಧ್ಯಕ್ಷರಾದ ಡಾ.ಕೆ.ವಿ.ಚಿದಾನಂದರವರು ಗೌರವಿಸಲಿದ್ದಾರೆ. ಸುಳ್ಯ ವೃತ್ತ ಪೊಲೀಸ್ ಉಪ ನಿರೀಕ್ಷಕ ಈರಯ್ಯ ಡಿ.ಎನ್ ಅಭಿನಂದನಾ ಮಾತುಗಳನ್ನಾಡಲಿದ್ದಾರೆ.
ಸುಳ್ಯ ತಾಲೂಕು ಕನ್ನಡ ಸಾಹಿತ್ಯ ಪರಿಷತ್ತಿನ ಪೂರ್ವಾಧ್ಯಕ್ಷೆ ಎಂ. ಮೀನಾಕ್ಷಿ ಗೌಡ ಮುಖ್ಯ ಅತಿಥಿಗಳಾಗಿ ಉಪಸ್ಥಿತರಿರಲಿದ್ದಾರೆ.
ಸುಳ್ಯ ತಾಲೂಕು ಸಾಹಿತ್ಯ ಪರಿಷತ್ತಿನ ಅಧ್ಯಕ್ಷ ಚಂದ್ರಶೇಖರ ಪೇರಾಲು ಸಭಾಧ್ಯಕ್ಷತೆ ವಹಿಸಲಿದ್ದಾರೆ. ಸುಳ್ಯ ತಾಲೂಕು ಕನ್ನಡ ಸಾಹಿತ್ಯ ಪರಿಷತ್ತಿನ ವ್ಯಾಪ್ತಿಯ ಸರಕಾರಿ, ಅನುದಾನಿತ ಹಾಗೂ ಖಾಸಗಿ ಪ್ರೌಢಶಾಲೆಗಳ ಸುಮಾರು 90ಕ್ಕೂ ಅಧಿಕ ವಿದ್ಯಾರ್ಥಿಗಳು ತಮ್ಮ ಸಾಧನೆಗಾಗಿ ಗೌರವ ಸ್ವೀಕರಿಸಲಿದ್ದಾರೆ ಎಂದು ಕಸಾಪ ಪ್ರಕಟಣೆ ತಿಳಿಸಿದೆ.