ಮಂಗಳೂರು: ಮುಂಬರುವ ದಿನಗಳಲ್ಲಿ ಕರಾವಳಿ ಅಭಿವೃದ್ಧಿ ಪ್ರಾಧಿಕಾರವನ್ನು ಕರಾವಳಿ ಅಭಿವೃದ್ಧಿ ಮಂಡಳಿಯಾಗಿ ಪರಿವರ್ತಿಸುವ ಬಗ್ಗೆ ಸರ್ಕಾರದ ಮಟ್ಟದಲ್ಲಿ ಚಿಂತನೆ ನಡೆಸಲಾಗಿದೆ ಎಂದು ಯೋಜನೆ, ಕಾರ್ಯಕ್ರಮ ಸಂಯೋಜನೆ ಮತ್ತು ಸಾಂಖ್ಯಿಕ ಇಲಾಖೆಯ ಸಚಿವರಾದ ಡಿ. ಸುಧಾಕರ್ ಅವರು ತಿಳಿಸಿದರು. ಅವರು ಜು.1ರ ಶನಿವಾರ ನಗರದ ಜಿಲ್ಲಾಧಿಕಾರಿ ಕಚೇರಿ ಸಭಾಂಗಣದಲ್ಲಿ ಕರಾವಳಿ ಅಭಿವೃದ್ಧಿ ಪ್ರಾಧಿಕಾರದ ಪ್ರಗತಿ ಪರಿಶೀಲನಾ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದರು.
ಕರಾವಳಿ ಅಭಿವೃದ್ಧಿ ಪ್ರಾಧಿಕಾರವನ್ನು ಮಂಡಳಿಯನ್ನಾಗಿ ಪರಿವರ್ತಿಸುವ
ಸಂಬಂಧ ಈಗಾಗಲೇ ಚರ್ಚೆ ನಡೆಸಲಾಗಿದೆ, ಅದನ್ನು ರಾಜ್ಯ ಸಚಿವ ಸಂಪುಟ ಸಭೆಯಲ್ಲಿ ತೀರ್ಮಾನಿಸಿ, ಕರಾವಳಿ ಅಭಿವೃದ್ಧಿ ಮಂಡಳಿಯಾಗಿ ಪುನರ್ ನಾಮಕರಣ ಮಾಡಲು ಕ್ರಮ ವಹಿಸಲಾಗುವುದು ಎಂದು ಹೇಳಿದರು.ರಾಜ್ಯದ ಕರಾವಳಿ ಪ್ರದೇಶಗಳ ಅಭಿವೃದ್ದಿಗೆ ಸರ್ಕಾರ ಕಟಿಬದ್ಧವಾಗಿದೆ, ನಿರ್ಲಕ್ಷ್ಯಕ್ಕೊಳಪಟ್ಟ ಪ್ರದೇಶಗಳನ್ನು ಗುರುತಿಸಿ, ಅಭಿವೃದ್ಧಿ ಪಡಿಸಲು ಹೆಚ್ಚಿನ ಒತ್ತು ನೀಡಲಾಗುವುದು, ಈ ವಿಚಾರದಲ್ಲಿ ಮೂರು ಜಿಲ್ಲೆಗಳ ಶಾಸಕರು ಹಾಗೂ ವಿಧಾನ ಪರಿಷತ್ ಶಾಸಕರ ಅಭಿಪ್ರಾಯ ಸಂಗ್ರಹಿಸಿ, ಅವರು ತಿಳಿಸುವ ಪ್ರದೇಶಗಳಲ್ಲಿಯೂ ಅಭಿವೃದ್ಧಿ ಕಾಮಗಾರಿಗಳನ್ನು ಕೈಗೊಳ್ಳುವಂತೆ ಸಚಿವರು ಸಂಬಂಧಪಟ್ಟ ಅಧಿಕಾರಿಗಳಿಗೆ ನಿರ್ದೇಶನ ನೀಡಿದರು.
ಅಭಿವೃದ್ಧಿ ಕಾಮಗಾರಿಗಳನ್ನು ಕೈಗೊಳ್ಳಲು ಸರ್ಕಾರ ಕರಾವಳಿ ಅಭಿವೃದ್ಧಿ ಪ್ರಾಧಿಕಾರಕ್ಕೆ ಬಿಡುಗಡೆ ಮಾಡುವ ಅನುದಾನವನ್ನು ಅಗತ್ಯವಿರುವ ಕಡೆ ಆದ್ಯತೆ ಮೇರೆಗೆ ಬಳಸಿಕೊಳ್ಳಬೇಕು, ಅದನ್ನು ಇತರೆ ಕಾಮಗಾರಿಗಳಿಗೆ ಬಳಸದಂತೆ ಕಟ್ಟುನಿಟ್ಟಿನ ಸೂಚನೆ ನೀಡಿದರು.
ತೂಗು ಸೇತುವೆ, ಕಾಲುಸಂಕ, ಶಾಲಾ ಕಟ್ಟಡ ಅಭಿವೃದ್ಧಿ, ಮೀನು ಮಾರುಕಟ್ಟೆ ನಿರ್ಮಾಣ, ಒಣ ಮೀನು ಸಂಸ್ಕರಣೆಗೆ ಮಹಿಳೆಯರಿಗೆ ಅಗತ್ಯ ತರಬೇತಿ ನೀಡಲು ಹೆಚ್ಚಿನ ಆದ್ಯತೆ ನೀಡಲಾಗುವುದೆಂದು ಸಚಿವರು ತಿಳಿಸಿದರು.
ವಿಧಾನ ಪರಿಷತ್ ಸದಸ್ಯರಾದ ಮಂಜುನಾಥ್ ಭಂಡಾರಿ ಅವರು ಮಾತನಾಡಿ ಕರಾವಳಿ ಅಭಿವೃದ್ಧಿ ಪ್ರಾಧಿಕಾರದ ಅನುದಾನವನ್ನು ಹೇಗೆ ಯಾವ ರೀತಿಯಲ್ಲಿ ಬಳಸಬೇಕು ಎಂಬುವುದರ ಬಗ್ಗೆ ಸೂಕ್ತ ರೂಪರೇಷೆಗಳನ್ನು ಒಳಗೊಂಡ ಮಾರ್ಗದರ್ಶನದ ಅವಶ್ಯಕತೆ ಇದ್ದು, ಈ ಸಂಬಂಧ ಆದೇಶ ಹೊರಡಿಸುವಂತೆ ಸಚಿವರಲ್ಲಿ ಮನವಿ ಮಾಡಿದರು
ಕರಾವಳಿ ಅಭಿವೃದ್ಧಿ ಪ್ರಾಧಿಕಾರದ ಕಾರ್ಯದರ್ಶಿ ಪ್ರದೀಪ್ ಡಿಸೋಜಾ, ಮೂರು ಜಿಲ್ಲೆಗಳಲ್ಲಿ ಸ್ಥಳೀಯ ಬೇಡಿಕೆ ಹಾಗೂ ಅಗತ್ಯತೆ ಅಗತ್ಯತೆಗೆ ಅನುಗುಣವಾಗಿ ಹಲವು ವಿಭಿನ್ನ ಯೋಜನೆಗಳನ್ನು ಕೈಗೊಳ್ಳಲಾಗಿದೆ ಎಂದರು.
ಸಭೆಯಲ್ಲಿ ವಿಧಾನ ಪರಿಷತ್ ಸದಸ್ಯರಾದ ಕೆ. ಹರೀಶ್ ಕುಮಾರ್ ಹಾಗೂ ಇತರರು ಉಪಸ್ಥಿತರಿದ್ದರು.