ಸುಳ್ಯ:ಅಡಿಕೆ ಬೆಳೆಗೆ ಪರ್ಯಾಯವಾಗಿ ಕಾಫಿ ಬೆಳೆಯುವುದು ಅಲ್ಲ, ಅಡಿಕೆಯ ಜೊತೆಗೆ ಕಾಫಿಯನ್ನು ಬೆಳೆಯಬೇಕಾಗಿದೆ.ಆಧುನಿಕ ತಂತ್ರಜ್ಞಾನದ ಸಹಾಯದಿಂದ ಕಾಫಿ ಬೆಳೆಯುವ ಮೂಲಕ ಕಾಫಿಯಲ್ಲಿ ಕರಾವಳಿ ಬ್ರಾಂಡ್ ನಿರ್ಮಿಸಲು ಎಲ್ಲರ ಪ್ರಯತ್ನ ಅಗತ್ಯ ಎಂದು ದ.ಕ.ಸಂಸದ ಕ್ಯಾಪ್ಟನ್ ಬ್ರಿಜೇಶ್ ಚೌಟ ಹೇಳಿದ್ದಾರೆ.
ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಕಾಫಿ ಕೃಷಿ ಉತ್ತೇಜಿಸಲು ರೈತರಿಗೆ ಮಾರ್ಗದರ್ಶನ ನೀಡುವ ನಿಟ್ಟಿನಲ್ಲಿ
ಸುಳ್ಯ ಸಿಎ ಬ್ಯಾಂಕ್ನ ಸಭಾಂಗಣದಲ್ಲಿ ಆಯೋಜಿಸಿದ ‘ಕಾಫಿಕೊ’ ಕಾರ್ಯಾಗಾರವನ್ನು ಉದ್ಘಾಟಿಸಿ ಅವರು ಮಾತನಾಡಿದರು.
ದಕ್ಷಿಣ ಕನ್ನಡ ಜಿಲ್ಲೆ ಸಾಧ್ಯತೆಗಳ ದೊಡ್ಡ ಸಾಗರ, ಇಲ್ಲಿ ಸಾಕಷ್ಟು ಅವಕಾಶಗಳು, ಸಾಧ್ಯತೆಗಳು ಇದೆ, ವ್ಯವಸ್ಥಿತ ನೆಲೆಯಲ್ಲಿ ಕಾಫಿಯನ್ನು ಅಡಿಕೆಯ ಜೊತೆಗೆ ಉಪ ಬೆಳೆಯಾಗಿ ಬೆಳೆಯುವ ಮೂಲಕ ಹೊಸ ಸಾಧ್ಯತೆಯನ್ನು ಕಂಡುಕೊಳ್ಳಬೇಕು.ಅಡಿಕೆ ನಮ್ಮ ಬದುಕು ಮಾತ್ರವಲ್ಲದೆ ನಮ್ಮ ಸಂಸ್ಕೃತಿಯ ಭಾಗವೂ ಹೌದು ಎಂದು ಹೇಳಿದರು.
ಅಡಿಕೆ ಹಳದಿ ರೋಗಕ್ಕೆ ಪರಿಹಾರಕ್ಕೆ ಮತ್ತು ಪರ್ಯಾಯಕ್ಕೆ ನನ್ನ ಬದ್ಧತೆ ಸದಾ ಇದೆ ಎಂದ ಅವರು ಕಳೆದ ಒಂದು ವರ್ಷಗಳ ಅವಧಿಯಲ್ಲಿ ಅಡಿಕೆ ಹಳದಿ ರೋಗದ ಬಗ್ಗೆ ಕೇಂದ್ರ ಸರಕಾರದ ಗಮನ ಸೆಳೆಯಲು ಸಾಧ್ಯವಾಗಿದೆ. ಸಚಿವರ ನೇತೃತ್ವದಲ್ಲಿ ಸಂಸದರ, ಅಧಿಕಾರಿಗಳ ಉನ್ನತ ಮಟ್ಟದ ಸಭೆ ನಡೆಸಲಾಗಿದೆ. ಅಡಿಕೆ ಹಳದಿ ರೋಗ ಬಾಧಿತ ಪ್ರದೇಶಕ್ಕೆ ಕೇಂದ್ರ ಸಚಿವರನ್ನು ಕರೆ ತರುವ ಪ್ರಯತ್ನ ಮುಂದುವರಿಸಿ ಹಳದಿ ರೋಗ ಬಾಧೆಯಿಂದ ಕೃಷಿ ಹಾನಿ ಸಂಭವಿಸಿದ ಕೃಷಿಕರಿಗೆ ಪೂರ್ಣ ಪರಿಹಾರ ನೀಡಲಾಗದಿದ್ದರೂ ಏಕ ಗಂಟಿನಲ್ಲಿ ಒಂದಿಷ್ಟು ಪರಿಹಾರ ದೊರಕಿಸುವ

ಪ್ರಯತ್ನ ನಡೆಸಲಾಗುವುದು ಎಂದು ಅವರು ಭರವಸೆ ನೀಡಿದರು. ಆಧುನಿಕ ತಂತ್ರಜ್ಞಾನದ ಬಳಕೆಯ ಮೂಲಕ ಅಡಿಕೆಯನ್ನು ಬೆಳೆಸುವ ಪ್ರಯೋಗ ನಡೆಯಬೇಕಾಗಿದೆ ಎಂದ ಅವರು ದಕ್ಷಿಣ ಕನ್ನಡ ಜಿಲ್ಲೆಯ ತಾಲೂಕುಗಳಲ್ಲಿ ಬೆಳೆಯುವ ಕಾಫಿಗೆ ಮಾನ್ಯತೆ ಮತ್ತು ಪ್ರೋತ್ಸಾಹ ನೀಡುವ ಕೆಲಸ ಆಗಬೇಕು ಎಂದು ಅವರು ಕಾಫಿ ಮಂಡಳಿ ಅಧ್ಯಕ್ಷರಿಗೆ ತಿಳಿಸಿದರು.
ಮುಖ್ಯ ಅತಿಥಿಯಾಗಿದ್ದ ಕಾಫಿ ಬೋರ್ಡ್ ಚೆಯರ್ಮೆನ್ ದಿನೇಶ್ ಎಂ.ಜೆ ಮಾತನಾಡಿ ಮಲೆನಾಡಿಗೂ ಕರಾವಳಿಗೂ, ಕರಾವಳಿಗೂ ಕಾಫಿಗೂ ನಿಕಟ ಸಂಬಂಧವಿದೆ.ಕಾಫಿಯ ಮೂಲಕ ಈ ಸಂಬಂಧ ಇನ್ನಷ್ಟು ಗಟ್ಟಿಯಾಗಲಿದೆ ಎಂದು ಹೇಳಿದರು.ಕಾಫಿ ಮಂಡಳಿಗೆ ಹೊಸ ದಿಕ್ಕನ್ನು ತೋರಿಸುವ ಪ್ರಯತ್ನ ಮಾಡ್ತಾ ಇದ್ದೇವೆ ಎಂದ ಅವರು ಪೆಟ್ರೋಲಿಯಂ ಬಳಿಕ ವಿಶ್ವದ ಎರಡನೇ ಟ್ರೇಡಿಂಗ್ ಇರುವ ಕಾಫಿ ಬೆಳೆಯಲ್ಲಿ ಭಾರತ ಏಳನೇ ಸ್ಥಾನದಲ್ಲಿದೆ. ಏಳು ಲಕ್ಷ ಟನ್ ಕಾಫಿ ಬೆಳೆದು ವಿಶ್ವದ ಐದನೇ ಕಾಫಿ ಬೆಳೆಯುವ ರಾಷ್ಟ್ರವನ್ನಾಗಿ ಬೆಳೆಸುವುದು ನಮ್ಮ ಗುರಿ. ಕಾಫಿ ಬೆಳೆಯನ್ನು ವಿಸ್ತರಿಸಿ ಸ್ವಾತಂತ್ರ್ಯದ ನೂರನೇ ವರ್ಷದ ವೇಳೆಗೆ ಅದು ನಮ್ಮ

ಕೊಡುಗೆಯಾಗಬೇಕು ಎಂದರು.ವೈಜ್ಞಾನಿಕವಾಗಿ ಬೆಳೆಯುವ ಮೂಲಕ ಕಾಫಿ ಕೃಷಿಯಲ್ಲಿ ಸಾಧನೆ ಮಾಡಬೇಕು.ಈ ಭಾಗದ ಕೃಷಿಕರ ಬೆಂಬಲಕ್ಕೆ ನಾವು ಸದಾ ಇದ್ದೇವೆ ಎಂದ ಅವರು ಕಾಫಿ ಬದುಕಿನ ಭರವಸೆಯ ಪೇಯ, ಕಾಫಿ ಬೆಳೆಯಲು ಸವಾಲು ಮತ್ತು ಅವಕಾಶ ಎರಡೂ ಇದೆ.ಸವಾಲನ್ನು ಎದುರಿಸಿ, ಅವಕಾಶವನ್ನು ಬಳಸಿಕೊಳ್ಳಬೇಕು ಎಂದು ಅವರು ಕರೆ ನೀಡಿದರು.
ಕಾಫಿ ಬೋರ್ಡ್ ಆಫ್ ಇಂಡಿಯಾ ಉಪ ನಿರ್ದೇಶಕ ಡಾ.ವಿ.ಚಂದ್ರಶೇಖರ್,ನಬಾರ್ಡ್ ಡಿಡಿಎಂ ಸಂಗೀತ ಕರ್ತ, ತೋಟಗಾರಿಕಾ ಇಲಾಖೆಯ ಉಪನಿರ್ದೇಶಕರಾದ ಮಂಜುನಾಥ್, ಸಕಲೇಶಪುರ 7 ಬೀನ್ ಟೀಂ ಸ್ಥಾಪಕಾಧ್ಯಕ್ಷ ಡಾ. ಪ್ರದೀಪ್, ಸಕಲೇಶಪುರ 7 ಬೀನ್ ಟೀಂ ಚೆಯರ್ಮೆನ್ ಡಾ.ಧರ್ಮರಾಜ್, ಬಿಜೆಪಿ ಮಂಡಲ ಸಮಿತಿ ಅಧ್ಯಕ್ಷ ವೆಂಕಟ್ ವಳಲಂಬೆ, ಯಾರಾ ಫರ್ಟಿಲೈಸರ್ನ ಮುಖ್ಯಸ್ಥರಾದ ಬೋಪಣ್ಣ, ಝೈನ್ ಇರಿಗೇಷನ್ನ ಕಾರ್ತಿಕ್ ಮಂಜುನಾಥ್, ಸುಳ್ಯ ನಗರ ಪಂಚಾಯತ್ ಅಧ್ಯಕ್ಷೆ ಶಶಿಕಲಾ ನೀರಬಿದಿರೆ, ಸುಳ್ಯ ಸಿಎ ಬ್ಯಾಂಕ್ ಅಧ್ಯಕ್ಷ ವಿಕ್ರಮ್ ಎ.ವಿ ವೇದಿಕೆಯಲ್ಲಿ ಉಪಸ್ಥಿತರಿದ್ದರು.ಸಕಲೇಶಪುರ 7 ಬೀನ್ ಟೀಂ ಚೆಯರ್ಮೆನ್ ಡಾ.ಧರ್ಮರಾಜ್ ಸಂಪನ್ಮೂಲ ವ್ಯಕ್ತಿಯಾಗಿ ಮಾಹಿತಿ ನೀಡಿದರು.
ಕಾಪಿಕೊ ಕಾರ್ಯಾಗಾರದ ಸಂಚಾಲಕರಾದ ಸಂತೋಷ್ ಕುತ್ತಮೊಟ್ಟೆ ಸ್ವಾಗತಿಸಿ, ಸಹ ಸಂಚಾಲಕರಾದ ರಾಮಕೃಷ್ಣ ಭಟ್ ಕುರುಂಬುಡೇಲು ವಂದಿಸಿದರು. ಸುದರ್ಶನ ಎಸ್.ಪಿ. ಹಾಗೂ ವಾಸುದೇವ ನಾಯಕ್ ಕಾರ್ಯಕ್ರಮ ನಿರೂಪಿಸಿದರು. ಈ ಸಂದರ್ಭದಲ್ಲಿ ಸಹಕಾರಿ ಸಂಘಗಳಿಗೆ ಸಾಂಕೇತಿಕವಾಗಿ ಕಾಫಿ ಗಿಡ ವಿತರಿಸಲಾಯಿತು.













