ಸುಳ್ಯ: ಬಿಜೆಪಿ ರೈತ ಮೋರ್ಚಾ ಜಿಲ್ಲಾಧ್ಯಕ್ಷ ರಾಧಾಕೃಷ್ಣ ಬೊಳ್ಳೂರು ಬಿಜೆಪಿಯಿಂದ ರಾಜಿನಾಮೆ ನೀಡಿ ಕಾಂಗ್ರೆಸ್ ಸೇರ್ಪಡೆ ಆಗಿರುವುದರಿಂದ ಬಿಜೆಪಿಗೆ ಯಾವುದೇ ನಷ್ಟ ಇಲ್ಲ ಎಂದು ಬಿಜೆಪಿ ಮಂಡಲ ಸಮಿತಿ ಅಧ್ಯಕ್ಷ ಹರೀಶ್ ಕಂಜಿಪಿಲಿ ಹೇಳಿದ್ದಾರೆ. ಸುಳ್ಯ ಪ್ರೆಸ್ ಕ್ಲಬ್ನಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು. ಕಳೆದ 10 ವರ್ಷಗಳ ಹಿಂದೆ ರಾಧಾಕೃಷ್ಣ ಬೊಳ್ಳೂರು ಕಾಂಗ್ರೆಸ್ ಬಿಟ್ಟು ಬಿಜೆಪಿ ಸೇರಿದ್ದಾರೆ. ಬಿಜೆಪಿಯ ಯಾವುದೇ ಕಾರ್ಯಕರ್ತನಿಗೆ, ನಾಯಕರಿಗೆ ಸಿಗದಷ್ಟು ಗೌರವ, ಸ್ಥಾನಮಾನಗಳು ಬೊಳ್ಳೂರು ಅವರಿಗೆ ಬಿಜೆಪಿಯಲ್ಲಿ ನೀಡಿದೆ. ಒಬ್ಬ ಗ್ರಾಮ ಪಂಚಾಯತ್
ಸದಸ್ಯ ಮಾತ್ರ ಆಗಿದ್ದ ಅವರಿಗೆ ಎಪಿಎಂಸಿ ಸದಸ್ಯ, ಉಪಾಧ್ಯಕ್ಷ, ತಾಲೂಕು ಪಂಚಾಯತ್ ಸ್ಥಾಯಿ ಸಮಿತಿ ಸದಸ್ಯ, ಬಿಜೆಪಿ ಮಂಡಲ ಉಪಾಧ್ಯಕ್ಷ, ಜಿಲ್ಲಾ ರೈತ ಮೋರ್ಚಾ ಅಧ್ಯಕ್ಷ ಹೀಗೆ ಹಲವು ಹುದ್ದೆಗಳನ್ನು ನೀಡಿತ್ತು. ಹಲವಾರು ದಶಕಗಳಿಂದ ಪಕ್ಷಕ್ಕೆ ದುಡಿಯುವ ನಿಷ್ಠಾವಂತ ಕಾರ್ಯಕರ್ತರಿಗೆ ಆ ರೀತಿಯ ಯಾವುದೇ ಸ್ಥಾನ ಮಾನ ಕೊಡಲು ಸಾಧ್ಯವಾಗಿಲ್ಲ ಎಂದರು. ಇದೀಗ ಅವರು ಕಾಂಗ್ರೆಸ್ ಅಧಿಕಾರಕ್ಕೆ ಬಂದ ಹಿನ್ನಲೆಯಲ್ಲಿ ಅಧಿಕಾರ ಅನುಭವಿಸುವ ದೃಷ್ಟಿಯಿಂದ ಕಾಂಗ್ರೆಸ್ ಪಕ್ಷಕ್ಕೆ ಹೋಗಿರಬಹುದು ಎಂದು ಹೇಳಿದರು.

ಬಿಜೆಪಿಗೆ ಕಾರ್ಯಕರ್ತರೇ ಜೀವಾಳ ಕಾರ್ಯಕರ್ತರ ಅಭಿಪ್ರಾಯದ ಮೇರಗೆ ಗ್ರಾ.ಪಂ, ಸಹಕಾರಿ ಕ್ಷೇತ್ರದ ಚುನಾವಣೆಯಲ್ಲಿ ಅಭ್ಯರ್ಥಿಗಳ ಆಯ್ಕೆ ನಡೆಯುತ್ತದೆ. ಕಾರ್ಯಕರ್ತರೇ ಪಕ್ಷವನ್ನು ಗೆಲ್ಲಿಸುತ್ತಾರೆ. ಕ್ಷೇತ್ರದಲ್ಲಿ 38 ಗ್ರಾಮ ಪಂಚಾಯತ್ಗಳಲ್ಲಿ ಹಾಗೂ ಬಹುತೇಕ ಸಹಕಾರಿ ಸಂಸ್ಥೆಗಳಲ್ಲಿ ಬಿಜೆಪಿ ಅಧಿಕಾರದಲ್ಲಿ ಇರುವುದು ಅದಕ್ಕೆ ಸಾಕ್ಷಿ ಎಂದರು.
ಬೊಳ್ಳೂರು ಸೊಸೈಟಿ ನಿರ್ದೇಶಕ ಸ್ಥಾನ ರಾಜಿನಾಮೆ ಕೊಟ್ಟು ಮತ್ತೆ ಗೆದ್ದು ತೋರಿಸಲಿ:
ಚೊಕ್ಕಾಡಿ ಪ್ರಾಥಮಿಕ ಕೃಷಿಪತ್ತಿನ ಸಹಾಕಾರಿ ಸಂಘದ ಚುನಾವಣೆಯಲ್ಲಿ ರಾಧಾಕೃಷ್ಣ ಬೊಳ್ಳೂರು ಬಿಜೆಪಿ ಬೆಂಬಲಿತ ಸಹಕಾರ ಭಾರತಿಯ ಅಭ್ಯರ್ಥಿಯಾಗಿ ಗೆದ್ದು ನಿರ್ದೇಶಕರಾಗಿದ್ದಾರೆ. ಇದೀಗ ಬಿಜೆಪಿಗೆ ರಾಜಿನಾಮೆ ನೀಡಿರುವ ಹಿನ್ನಲೆಯಲದಲು ಅವರು ನಿರ್ದೇಶಕ ಸ್ಥಾನಕ್ಕೆ ರಾಜಿನಾಮೆ ಕೊಟ್ಟು ಮತ್ತೆ ಸ್ಪರ್ಧಿಸಿ ಗೆದ್ದು ತೋರಿಸಲಿ ಎಂದು ಕಂಜಿಪಿಲಿ ಸವಾಲು ಹಾಕಿದರು.

ಅಂಗಾರರನ್ನು ಕಡೆಗಣಿಸಲಾಗುತಿದೆಯೇ ಎಂದು ಅಂಗಾರರೇ ಸ್ಪಷ್ಟಪಡಿಸಲಿ:
ಮಾಜಿ ಶಾಸಕ ಎಸ್.ಅಂಗಾರ ಅವರನ್ನು ಸುಳ್ಯ ಬಿಜೆಪಿ ಕಡೆಗಣಿಸುತ್ತಾರೆ ಎಂಬ ರಾಧಾಕೃಷ್ಣ ಬೊಳ್ಳೂರು ಅವರ ಆರೋಪಕ್ಕೆ ಉತ್ತರಿಸಿದ ಹರೀಶ್ ಕಂಜಿಪಿಲಿ ‘ಮಾಜಿ ಸಚಿವ ಎಸ್.ಅಂಗಾರ ಹಿರಿಯರು ಅವರನ್ನು ಪಕ್ಷ ಎಂದೂ ಕಡೆಗಣಿಸಿಲ್ಲ.ಎಲ್ಲಾ ಸಭೆ, ಕಾರ್ಯಕ್ರಮಗಳಿಗೆ ಅವರನ್ನು ಕರೆಯುತ್ತೇವೆ. ಅಂಗಾರರನ್ನು ಸುಳ್ಯ ಬಿಜಪಿ ಕಡೆಗಣಿಸಿದೆಯೇ ಎಂದು ಅಂಗಾರರೇ ಸ್ಪಷ್ಟಪಡಿಸಲಿ ಎಂದು ಹೇಳಿದರು. ಅಂಗಾರರು ಜಿಲ್ಲಾ ಬಿಜೆಪಿ ಕೋರ್ ಕಮಿಟಿ ಸದಸ್ಯರು. ಶಾಸಕರ ನೆಲೆಯಲ್ಲಿ ಸುಳ್ಯ ಬಿಜೆಪಿ ಕೋರ್ ಕಮಿಟಿಯಲ್ಲಿ ಭಾಗವಹಿಸುತ್ತಿದ್ದರು.ಇದೀಗ ಶಾಸಕರ ನೆಲೆಯಲ್ಲಿ ಭಾಗೀರಥಿ ಮುರುಳ್ಯ ಅವರು ಭಾಗವಹಿಸುತ್ತಿದ್ದಾರೆ ಎಂದು ಅವರು ಹೇಳಿದರು.
ಸುದ್ದಿಗೋಷ್ಠಿಯಲ್ಲಿ ಬಿಜೆಪಿ ಮುಖಂಡರಾದ ಎಸ್.ಎನ್.ಮನ್ಮಥ, ಎ.ವಿ.ತೀರ್ಥರಾಮ, ವೆಂಕಟ್ ದಂಬೆಕೋಡಿ, ಎನ್.ಎ.ರಾಮಚಂದ್ರ, ಸುಬೋದ್ ಶೆಟ್ಟಿ ಮೇನಾಲ, ವಿನಯಕುಮಾರ್ ಕಂದಡ್ಕ, ಬಾಲಗೋಪಾಲ ಸೇರ್ಕಜೆ, ಜಿನ್ನಪ್ಪ ಪೂಜಾರಿ, ಸುನಿಲ್ ಕೇರ್ಪಳ, ಸಂತೋಷ್ ಕುತ್ತಮೊಟ್ಟೆ, ಹರೀಶ್ ಬೂಡುಪನ್ನೆ, ಚನಿಯ ಕಲ್ತಡ್ಕ, ಹೇಮಂತ ಕಂದಡ್ಕ, ವೆಂಕಟ್ರಮಣ ಮುಳ್ಯ, ಚಂದ್ರಶೇಖರ ನಡುಮನೆ, ಶಿವರಾಮ ಕೇರ್ಪಳ, ಕೇಶವ ಸಿ.ಎ ಹೊಸಗದ್ದೆ, ಪ್ರಬೋದ್ ಶೆಟ್ಟಿ ಮೇನಾಲ, ವಿಕ್ರಮ್ ಅಡ್ಪಂಗಾಯ, ನವ್ಯಾ ಚಂದ್ರಶೇಖರ ಅಡ್ಪಂಗಾಯ ಉಪಸ್ಥಿತರಿದ್ದರು












