ಸುಳ್ಯ: ಕರ್ನಾಟಕ ಹಾಗೂ ಕೇರಳ ರಾಜ್ಯಗಳನ್ನು ಅತೀ ಸಮೀಪದಲ್ಲಿ ಸಂಪರ್ಕಿಸುವ ಕಾಞಂಗಾಡ್-ಕಾಣಿಯೂರು ರೈಲ್ವೇ ಹಳಿ ನಿರ್ಮಾಣ ಮಾಡಲು ಕರ್ನಾಟಕ ರಾಜ್ಯ ಸರಕಾರದಿಂದ ಒಪ್ಪಿಗೆ ಪಡೆಯುವ ನಿಟ್ಟಿನಲ್ಲಿ ವಿಧಾನಸಭೆಯಲ್ಲಿ ಸರಕಾರದ ಗಮನ ಸೆಳೆಯಬೇಕು ಎಂದು ಸುಳ್ಯ ಶಾಸಕಿ ಭಾಗೀರಥಿ ಮುರುಳ್ಯ ಅವರಿಗೆ ಕಾಞಂಗಾಡು-ಕಾಣಿಯೂರು ಹಳಿ
ನಿರ್ಮಾಣ ಕ್ರಿಯಾ ಸಮಿತಿಯ ಪದಾಧಿಕಾರಿಗಳು ಮನವಿ ಸಲ್ಲಿಸಿದ್ದಾರೆ. ಜೂ.17ರಂದು ಶಾಸಕರನ್ನು ಕಚೇರಿಯಲ್ಲಿ ಭೇಟಿ ಮಾಡಿದ ಕ್ರಿಯಾ ಸಮಿತಿ ಪದಾಧಿಕಾರಿಗಳು ಶಾಸಕರ ಜೊತೆ ಮಾತುಕತೆ ನಡೆಸಿದರು. ಕೇರಳ ಮತ್ತು ಕರ್ನಾಟಕ ರಾಜ್ಯಗಳನ್ನು ಅತೀ ಸಮೀಪದಲ್ಲಿ ಸಂಪರ್ಕಿಸುವ ಮತ್ತು ಅತೀ ಕಡಿಮೆ ಖರ್ಚಿನಲ್ಲಿ ನಿರ್ಮಾಣ ಮಾಡಬಹುದಾದ ರೈಲ್ವೇ ಹಳಿ ಇದಾಗಿದ್ದು ಈ ಯೋಜನೆಗೆ ರೈಲ್ವೇ ಹಾಗೂ ಕೇರಳ ಸರಕಾರ ಒಪ್ಪಿಗೆ ನೀಡಿದೆ. ಕರ್ನಾಟಕ ಸರಕಾರ ಇದಕ್ಕೆ ಒಪ್ಪಿಗೆ ನೀಡಿಲ್ಲ. ಈ ಹಿನ್ನಲೆಯಲ್ಲಿ ಸರಕಾರದ ಒಪ್ಪಿಗೆ ಪಡೆಯುವ ನಿಟ್ಟಿನಲ್ಲಿ ಪ್ರಯತ್ನ ನಡೆಸಬೇಕು ಎಂದು ಮನವಿಯಲ್ಲಿ ತಿಳಿಸಲಾಗಿದೆ. ಕಾಞಂಗಾಡ್-ಕಾಣಿಯೂರು ಮಧ್ಯೆ 90 ಕಿ.ಮಿ.ದೂರದಲ್ಲಿ ಸಂಪರ್ಕಿಸುವ ರೈಲ್ವೇ ಹಳಿ 1400 ಕೋಟಿ ರೂನಲ್ಲಿ ನಿರ್ಮಾಣ ಮಾಡಬಹುದು ಎಂದು ಅಂದಾಜಿಸಲಾಗಿದೆ. ಹಳಿಯ ಬಗ್ಗೆ ಎರಡು
ಹಂತದಲ್ಲಿ ಸರ್ವೆ ನಡೆಸಲಾಗಿದ್ದು ಈ ಹಳಿ ಲಾಭದಾಯಕ ಎಂದು ಕಂಡುಕೊಳ್ಳಲಾಗಿದೆ. ಈ ಹಿನ್ನಲೆಯಲ್ಲಿ ಹಳಿ ನಿರ್ಮಾಣ ಕಾರ್ಯಕ್ಕೆ ಎಲ್ಲಾ ಸಹಕಾರ ನೀಡಬೇಕು ಎಂದು ಶಾಸಕರಿಗೆ ಮನವಿ ಸಲ್ಲಿಸಲಾಯಿತು. ಈಗಿನ ಹೊಸ ಸರಕಾರ ರೈಲ್ವೆ ಯೋಜನೆಗೆ ಮರು ಜೀವ ನೀಡಬೇಕು ಎಂದು ಸಮಿತಿಯ ಪದಾಧಿಕಾರಿಗಳು ಮನವಿ ಮಾಡಿದರು.
ಮುಂದಿನ ದಿನಗಳಲ್ಲಿ ಕಾಞಂಗಾಡ್, ಸುಳ್ಯ, ಪುತ್ತೂರು ಶಾಸಕರು, ಕಾಸರಗೋಡು, ದಕ್ಷಿಣ ಕನ್ನಡ ಸಂಸದರನ್ನು ಒಳಗೊಂಡ ನಿಯೋಗ ಕರ್ನಾಟಕ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರನ್ನು ಭೇಟಿ ಮಾಡಿ ಚರ್ಚಿಸಿ ಯೋಜನೆಗೆ ಅನುಮತಿ ಪಡೆಯುವ ಪ್ರಯತ್ನ ನಡೆಸಲಾಗುವುದು ಎಂದು ಕ್ರಿಯಾ ಸಮಿತಿಯ ಪದಾಧಿಕಾರಿಗಳು ತಿಳಿಸಿದ್ದಾರೆ.
ಕಾಞಂಗಾಡ್-ಕಾಣಿಯೂರು ಕ್ರಿಯಾ ಸಮಿತಿಯ ಪದಾಧಿಕಾರಿಗಳಾದ ಎನ್.ಎ.ರಾಮಚಂದ್ರ, ಪಿ.ಬಿ.ಸುಧಾಕರ ರೈ, ಸೂರ್ಯನಾರಾಯಣ ಭಟ್, ಎಂ.ವಿ.ಭಾಸ್ಕರನ್, ಜೋಸ್ ಕೊಚ್ಚಿಕುನ್ನೇಲ್, ಮಹೇಶ್ ಕುಮಾರ್ ಮೇನಾಲ ಮತ್ತಿತರರು ಈ ಸಂದರ್ಭದಲ್ಲಿ ಉಪಸ್ಥಿತರಿದ್ದರು.