ಸುಳ್ಯ: ಮಂಡೆಕೋಲು ಕಣೆಮರಡ್ಕದ ಶ್ರೀ ಅಯ್ಯಪ್ಪ ಸ್ವಾಮಿ ಮಂದಿರದ 3ನೇ ಪ್ರತಿಷ್ಠಾ ವಾರ್ಷಿಕೋತ್ಸವ ಹಾಗು ಲೋಕ ಕಲ್ಯಾಣಾರ್ಥವಾಗಿ ಸಾರ್ವಜನಿಕ ಶ್ರೀ ಶನೈಶ್ಚರ ಪೂಜೆ 2025 ಜನವರಿ.5ರಂದು ಭಾನುವಾರ ನಡೆಯಲಿದೆ ಎಂದು ಕಣೆಮರಡ್ಕ ಶ್ರಿ ಶಬರಿಗಿರಿ ಸೇವಾ ಪ್ರತಿಷ್ಠಾನದ ಅಧ್ಯಕ್ಷ ಸುರೇಶ್ ಕಣೆಮರಡ್ಕ ತಿಳಿಸಿದ್ದಾರೆ. ಸುಳ್ಯ ಪ್ರೆಸ್ ಕ್ಲಬ್ನಲ್ಲಿ ನಡೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು 53 ವರ್ಷಗಳ ಹಿಂದೆ ಕಣೆಮರಡ್ಕದಲ್ಲಿ ಅಯ್ಯಪ್ಪ ಸ್ವಾಮಿ ಮಂದಿರ ನಿರ್ಮಾಣವಾಗಿ ಆರಾಧನೆ ನಡೆಸಿಕೊಂಡು ಬರಲಾಗುತಿದೆ.ಮೂರು ವರ್ಷಗಳ ಹಿಂದೆ ನೂತನ ಮಂದಿರ
ನಿರ್ಮಾಣವಾಗಿ 2022 ಜ.5ರಂದು ಪುನಃ ಪ್ರತಿಷ್ಠೆ ನಡೆದಿತ್ತು. ಇದೀಗ ವಿವಿಧ ಕಾರ್ಯಕ್ರಮಗಳೊಂದಿಗೆ ಮೂರನೇ ಪ್ರತಿಷ್ಠಾ ವಾರ್ಷಿಕವನ್ನು ಆಚರಿಸಲಾಗುವುದು.ಜ.5ರಂದು ಬೆಳಿಗ್ಗೆ 6ಕ್ಕೆ ಗಣಪತಿ ಹವನ, 7.30ಕ್ಕೆ ಶ್ರೀ ಗುಳಿಗ ದೈವದ ಕಟ್ಟೆಗೆ ಪೂಜೆ, ತಂಬಿಲ ನಡೆಯಲಿದೆ. ಬಳಿಕ ಅಡೂರು ಅಶೋಕ ಸರಳಾಯ ಅವರ ನೇತೃತ್ವದಲ್ಲಿ ಸಾರ್ವಜನಿಕ ಶ್ರೀ ಶೈನೈಶ್ಚರ ಪೂಜೆ ನಡೆಯಲಿದೆ. ಪೂ.9.30ಕ್ಕೆ ಶ್ರೀ ಶೈನೈಶ್ಚರ ಪೂಜಾ ಸಂಕಲ್ಪ ನಡೆಯಲಿದೆ,11.30ಕ್ಕೆ ಶ್ರೀ ಶೈನೈಶ್ಚರ ಪೂಜಾ ಮಹಾಮಂಗಳಾರತಿ ನಡೆಯಲಿದೆ. 12 ಗಂಟೆಗೆ ಮಹಾ ಪೂಜೆ, 12.30ಕ್ಕೆ ಭಜನಾ ಸಂಕೀರ್ತನೆ, ಅನ್ನ ಸಂತರ್ಪಣೆ ನಡೆಯಲಿದೆ. ಅಪರಾಹ್ನ 2 ರಿಂದ
ಧಾರ್ಮಿಕ ಸಭಾ ಕಾರ್ಯಕ್ರಮ ನಡೆಯಲಿದೆ. ಮಾಜಿ ಸಂಸದ ನಳಿನ್ ಕುಮಾರ್ ಕಟೀಲ್ ಉದ್ಘಾಟಿಸುವರು. ಖ್ಯಾತ ವಾಗ್ಮಿ ಹಾಗೂ ಧಾರ್ಮಿಕ ಚಿಂತಕ ದಯಾನಂದ ಕತ್ತಲ್ಸಾರ್ ಧಾರ್ಮಿಕ ಉಪನ್ಯಾಸ ನೀಡಲಿದ್ದಾರೆ. ಮುಖ್ಯ ಅತಿಥಿಗಳಾಗಿ ಶಾಸಕಿ ಭಾಗೀರಥಿ ಮುರುಳ್ಯ, ಶಬರಿಮಲೆ ಅಯ್ಯಪ್ಪ ಸೇವಾ ಸಮಾಜಂ ಜಿಲ್ಲಾಧ್ಯಕ್ಷ ಗಣೇಶ್ ಪೊದುವಾಳ್, ಶ್ರೀ ದೇವಿ ಮೂಕಾಂಬಿಕಾ ದೇವಸ್ಥಾನ ಶ್ರೀ ಕ್ಷೇತ್ರ ಕೊಲ್ಯದ ಅಧ್ಯಕ್ಷ ಮಧುಸೂದನ್ ಆಯರ್, ಶ್ರೀಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯ ಯೋಜನಾಧಿಕಾರಿ ಮಾಧವ ಗೌಡ ಭಾಗವಹಿಸುವರು.
ಮಂಡೆಕೋಲು ಗ್ರಾ.ಪಂ.ಅಧ್ಯಕ್ಷ ಕುಶಲ ಉದ್ದಂತ್ತಡ್ಕ, ಮಂಡೆಕೋಲು ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘದ ಅಧ್ಯಕ್ಷ ರಾಮಕೃಷ್ಣ ರೈ ಪೇರಾಲುಗುತ್ತು,ಶಬರಿಮಲೆ ಅಯ್ಯಪ್ಪ ಸೇವಾ ಸಮಾಜಂ ಸುಳ್ಯ ತಾಲೂಕು ಅಧ್ಯಕ್ಷ ಶಿವಪ್ರಕಾಶ್ ಅಡ್ಪಂಗಾಯ ಉಪಸ್ಥಿತರಿರುವರು. ಸಂಜೆ 6ರಿಂದ ರಾತ್ರಿ 10 ಗಂಟೆಯ ತನಕ ವಿವಿಧ ಭಜನಾ ತಂಡಗಳಿಂದ ಭಜನಾ ಕಾರ್ಯಕ್ರಮ ನಡೆಯಲಿದೆ ಎಂದು ಸುರೇಶ್ ಕಣೆಮರಡ್ಕ ತಿಳಿಸಿದ್ದಾರೆ.
ಸುದ್ದಿಗೋಷ್ಠಿಯಲ್ಲಿ ಶ್ರಿ ಶಬರಿಗಿರಿ ಸೇವಾ ಪ್ರತಿಷ್ಠಾನದ ಪ್ರಧಾನ ಕಾರ್ಯದರ್ಶಿ ಪ್ರಕಾಶ್ ಕಣೆಮರಡ್ಕ, ಉಪಾಧ್ಯಕ್ಷ ಶಿವಪ್ರಸಾದ್ ಉಗ್ರಾಣಿಮನೆ, ಟ್ರಸ್ಟಿ ಅನಿಲ್ ತೋಟಪಾಡಿ, ಪ್ರೀತೇಶ್, ಸಂತೋಷ್, ಪ್ರವೀಣ್ ಮುಳ್ಯ ಉಪಸ್ಥಿತರಿದ್ದರು.