ಮೇನಾಲ: ಅಜ್ಜಾವರ ಗ್ರಾಮದ ಮೇನಾಲ ಶ್ರೀ ವಯನಾಟ್ ಕುಲವನ್ ದೈವಸ್ಥಾನದಲ್ಲಿ ಮಾ.5ರಿಂದ ಆರಂಭಗೊಂಡ ಶ್ರೀ ವಯನಾಟ್ ಕುಲವನ್ ದೈವಂಕಟ್ಟು ಮಹೋತ್ಸವ ವಿಜ್ರಂಭಣೆಯಿಂದ ನಡೆಯುತಿದೆ. ಬುಧವಾರ ರಾತ್ರಿ ದೈವಗಳ ವೆಳ್ಳಾಟ್ಟಂ ನಡೆದು ಭಕ್ತರಿಗೆ ಅನುಗ್ರಹ ನೀಡಿತು. ಶತಮಾನದ ಬಳಿಕ ನಡೆದ ದೈವಂಕಟ್ಟು ಮಹೋತ್ಸವವನ್ನು ಹರಿದು ಬಂದ
ಸಾವಿರಾರು ಮಂದಿ ಭಕ್ತರು ಕಣ್ತುಂಬಿಕೊಂಡರು.
ರಾತ್ರಿ ಕೋರಚ್ಛನ್ ದೈವದ ವೆಳ್ಳಾಟ್ಟಂ, ಕಂಡನಾರ್ ಕೇಳನ್ ದೈವದ ವೆಳ್ಳಾಟ್ಟಂ ಅಂಗಣ ಪ್ರವೇಶಿಸಿ ನೆರೆದ ಸಾವಿರಾರು ಭಕ್ತರಿಗೆ ದರ್ಶನ ನೀಡಿ ಹರಸಿತು. ರಾತ್ರಿ ವಯನಾಟ್ ಕುಲವನ್ ದೈವದ ವೆಳ್ಳಾಟ್ಟಂ ನಡೆಯಿತು. ಶ್ರೀ ವಿಷ್ಣುಮೂರ್ತಿ ದೈವದ ತೊಡಂಙಲ್ ನಡೆಯಿತು.

ಮಾ.7ರಂದು ಗುರುವಾರ ಬೆಳಗ್ಗಿನಿಂದ ಕೊರಚ್ಛನ್ ದೈವ, ಕಂಡನಾರ್ ಕೇಳನ್ ದೈವಗಳು ನಡೆದ ಅಪರಾಹ್ನ 2 ರಿಂದ ವಯನಾಟ್ ಕುಲವನ್ ದೈವದ ಅಂಗಣ ಪ್ರವೇಶ ಮತ್ತು ಸೂಟೆ ಸಮರ್ಪಣೆ ನಡೆಯಲಿದೆ. ಅಪರಾಹ್ನ 3 ರಿಂದ ವಿಷ್ಣುಮೂರ್ತಿ ದೈವ ಅಂಗಣ ಪ್ರವೇಶ ಮಾಡಲಿದೆ.
ಹರಿದು ಬಂದ ಜನ ಸಾಗರ:
ಬುಧವಾರ ರಾತ್ರಿ ನಡೆದ ಕೋರಚ್ಚನ್ ದೈವ, ಕಂಡನಾರ್ ಕೇಳನ್ ಹಾಗು ಶ್ರೀ ವಯನಾಟ್ ಕುಲವನ್ ದೈವಗಳ ವೆಳ್ಳಾಟಂ ದರ್ಶನ ಪಡೆಯಲು ಭಕ್ತ ಜನ ಸಾಗರವೇ ಹರಿದು ಬಂತು. ದಕ್ಷಿಣ ಕನ್ನಡ, ಕೊಡಗು ಹಾಗೂ ನೆರೆಯ ಕೇರಳ ರಾಜ್ಯದಿಂದ ಭಕ್ತರ ಗಡಣವೇ ಆಗಮಿಸಿತು. ಕ್ಷೇತ್ರ ಪರಿಸರ ಹಾಗೂ ಸಮೀಪ ಪ್ರದೇಶದಲ್ಲಿ ಭಕ್ತರಿಂದ ತುಂಬಿ ತುಳುಕಿತ್ತು.ಸುಮಾರು 15 ಸಾವಿರಕ್ಕೂ ಮಿಕ್ಕಿ ಜನರು ಸೇರಿದ್ದರು ಎಂದು ಅಂದಾಜಿಸಲಾಗಿದೆ.

ಅಚ್ಚುಕಟ್ಟಾದ ವ್ಯವಸ್ಥೆ:
ದೈವಂಕಟ್ಟು ಮಹೋತ್ಸವಕ್ಕೆ ಆಗಮಿಸಿದ ಭಕ್ತರ ಅನುಕೂಲಕ್ಕೆ ಸೂಕ್ತ ವ್ಯವಸ್ಥೆಗಳನ್ನು ಮಾಡಲಾಗಿತ್ತು. ಆಗಮಿಸಿದ ಎಲ್ಲರಿಗೂ ನಿರಂತರ ಅನ್ನದಾನದ ವ್ಯವಸ್ಥೆ ಮಾಡಲಾಗಿತ್ತು. ವಾಹನ ಪಾರ್ಕಿಂಗ್ಗೂ ವಿವಿಧ ವ್ಯವಸ್ಥೆ ಮಾಡಲಾಗಿತ್ತು. ಕ್ಷೇತ್ರದ ಸುತ್ತಲೂ ವರ್ಣಮಯ ವಿದ್ಯುತ್ ದೀಪಾಲಂಕಾರ ಝಗಮಗಿಸಿತ್ತು. ಎಲ್ಲೆಡೆ ತಳಿರು ತೋರಣ, ಬ್ಯಾನರ್, ಬಂಟಿಂಗ್ಸ್ಗಳಿಂದ ಅಲಂಕರಿಸಲಾಗಿತ್ತು. ಅಲ್ಲಲ್ಲಿ ಸ್ವಾಗತ ಗೋಪುರಗಳು, ದ್ವಾರಗಳು ನಿರ್ಮಿಸಿ ಭಕ್ತರಿಗೆ ಸ್ವಾಗತ ಕೋರಲಾಗುತಿದೆ.

ಮಹೋತ್ಸವ ಸಮಿತಿ ಅಧ್ಯಕ್ಷ ಗುಡ್ಡಪ್ಪ ರೈ ಮೇನಾಲ, ಪ್ರಧಾನ ಕಾರ್ಯದರ್ಶಿ ರಾಧಾಕೃಷ್ಣ ಪರಿವಾರಕಾನ,ಶ್ರೀಕ್ಷೇತ್ರ ಕುತ್ತಿಕೊಲು ಅಧ್ಯಕ್ಷ ಆರ್.ಕುಂಞಿಕಣ್ಣನ್, ಮಹೋತ್ಸವ ಸಮಿತಿಯ
ಸಂಘಟನಾ ಕಾರ್ಯದರ್ಶಿ ಗಿರಿಶಂಕರ ಸುಲಾಯ, ಕೋಶಾಧಿಕಾರಿ ರಾಮಕೃಷ್ಣ ರೈ ಮೇನಾಲ, ಸಂಚಾಲಕರಾದ ಸುಬೋದ್ ಶೆಟ್ಟಿ ಮೇನಾಲ, ಕಾರ್ಯಾಧ್ಯಕ್ಷರಾದ ರವೀಂದ್ರನಾಥ ರೈ ಮೇನಾಲ, ಜಗನ್ನಾಥ ರೈ ಮೇನಾಲ ಮುಂಬೈ, ಹರಿಪ್ರಕಾಶ್ ಗೌಡ ಕುರುಂಜಿ, ವಿಜಯಕುಮಾರ್ ತುದಿಯಡ್ಕ, ಸ್ಥಾನದ ಮನೆ ಅರ್ಚಕರಾದ ಯಂ.ಕೆ.ಕೃಷ್ಣ, ಪದಾಧಿಕಾರಿಗಳು, ಸಂಚಾಲಕರುಗಳು, ಸದಸ್ಯರುಗಳು, ಗ್ರಾಮಸ್ಥರು, ಮಹೋತ್ಸವ ಸಮಿತಿ, ಉಪಸಮಿತಿ, ಆಡಳಿತ ಸಮಿತಿ ಪದಾಧಿಕಾರಿಗಳು, ಮೇನಾಲ ಕುಟುಂಬಸ್ಥರು ಮತ್ತು ಪ್ರಮುಖರು ಉಪಸ್ಥಿತರಿದ್ದರು















