ಸುಳ್ಯ: ವೈಜ್ಞಾನಿಕ, ರಾಜಕೀಯ, ಸಾಮಾಜಿಕ ಶಿಕ್ಷಣ ನೀಡುವ ಲೌಖಿಕ ಶಿಕ್ಷಣದ ಜೊತೆಗೆ ನಮ್ಮ ಧರ್ಮ, ಪುರಾಣ, ಸಂಸ್ಕೃತಿ, ಸಂಸ್ಕಾರ ಕಲಿಸುವ ಧಾರ್ಮಿಕ ಶಿಕ್ಷಣವನ್ನು ಕಲಿಸುವ ‘ಸಂಸ್ಕೃತಿ ಪಾಠಶಾಲೆ’ ದೇವಸ್ಥಾನಗಳಲ್ಲಿ ಆರಂಭಿಸಬೇಕು ಎಂದು ಕಾಂಚಿ ಕಾಮಕೋಟಿ ಪೀಠದ ಜಗದ್ಗುರು ಶಂಕರಾಚಾರ್ಯ ಶ್ರೀ ವಿಜಯೇಂದ್ರ ಸರಸ್ವತಿ ಮಹಾಸ್ವಾಮಿ ಹೇಳಿದರು. ಸೋಮವಾರ ರಾತ್ರಿ ಸುಳ್ಯ ಶ್ರೀ ಚೆನ್ನಕೇಶವ ದೇವಸ್ಥಾನಕ್ಕೆ ಭೇಟಿ ನೀಡಿದ ಅವರು ಆಶೀರ್ವಚನ ನೀಡಿದರು.ಎಲ್ಲಾ ರೀತಿಯ ಉನ್ನತ
ಶಿಕ್ಷಣವೂ ನಮ್ಮ ದೇಶದಲ್ಲಿ ದೊರೆಯುವಂತಾಗಬೇಕು ಅದಕ್ಕಾಗಿ ಪ್ರಯತ್ನ ನಡೆಸಬೇಕು ಜೊತೆಗೆ ಧಾರ್ಮಿಕ, ಸಂಸ್ಕೃತಿ, ಸಾಂಸ್ಕೃತಿಕ ಪರಂಪರೆಯನ್ನು ತಿಳಿಸುವ ಶಿಕ್ಷಣವೂ ವ್ಯಾಪಿಸಬೇಕು ಎಂದು ಹೇಳಿದರು. ವೇದಾಧ್ಯಯನ ಮಾಡುವುದು ಭಾರತದ ಸಂಸ್ಕೃತಿ ಎಂದ ಅವರು ಭಾರತೀಯ ಜೀವನ ಕ್ರಮ ವೇದ ಮಾರ್ಗದಲ್ಲಿ ಇರಬೇಕು. ಅದಕ್ಕಾಗಿ ಕಾಂಚಿ ಪೀಠದಲ್ಲಿ ತಲ ತಲಾಂತರಗಳಿಂದ ವೇದಾಧ್ಯಯನ ನಡೆಸಲಾಗುತಿದೆ ಎಂದು ತಿಳಿಸಿದರು.
ಎಲ್ಲಾ ಸಂಪತ್ತಿಗಿಂತಲೂ ಧರ್ಮ ಮುಖ್ಯ. ಆದುದರಿಂದ
ಮಾನವನ ಬದುಕು ಧರ್ಮ, ಸಂಪ್ರದಾಯ, ಸಂಸ್ಕೃತಿಯಿಂದ ಕೂಡಿರಬೇಕು, ಮನುಷ್ಯತ್ವ, ಮಾನವೀಯತೆ , ಶಾಂತಿ, ಸೌಜನ್ಯದ ಆಗರವಾಗಿರಬೇಕು ಎಂದು ಹೇಳಿದರು.
ಸುಳ್ಯ ಚೆನ್ನಕೇಶವ ದೇವಸ್ಥಾನಕ್ಕೆ 20 ವರ್ಷಗಳ ಹಿಂದೆ ಆಗಮಿಸಿರುವುದನ್ನು ನೆನಪಿಸಿದ ವಿಜಯೇಂದ್ರ ಸರಸ್ವತಿ ಮಹಾಸ್ವಾಮಿಗಳು ಸುಳ್ಯಕ್ಕೂ ಕಾಂಚಿ ಕಾಮಕೋಟಿ ಪೀಠಕ್ಕೂ ಅವಿನಾಭಾವ ಸಂಬಂಧವಿದೆ. ಕಾಂಚಿ ಪೀಠದಲ್ಲಿ ವೇದಾಧ್ಯಯನ ನಡೆಸಿ ವೇದ ವಿದ್ವಾಂಸರಾದವರು ಹಲವು ಮಂದಿ ಇದ್ದಾರೆ. ಇಲ್ಲಿನ ಕಾಂಚಿ ಕಾಮಕೋಟಿ ವೇದ ವಿದ್ಯಾಲಯದ ಮೂಲಕ ಹಲವರು ವೇದಾಧ್ಯಯನ ನಡೆಸುತ್ತಿದ್ದಾರೆ ಎಂದರು.
ಶಾಸಕಿ ಭಾಗೀರಥಿ ಮುರುಳ್ಯ, ಪದ್ಮಶ್ರೀ ಪುರಸ್ಕೃತರಾದ ಡಾ.ಗಿರೀಶ್ ಭಾರದ್ವಾಜ್, ಚೆನ್ನಕೇಶವ ದೇವಸ್ಥಾನದ ಅನುವಂಶಿಕ ಆಡಳಿತ ಮೊಕ್ತೇಸರ ಡಾ.ಹರಪ್ರಸಾದ್ ತುದಿಯಡ್ಕ, ಉದ್ಯಮಿ ಕೃಷ್ಣ ಕಾಮತ್ ವೇದಿಕೆಯಲ್ಲಿ ಉಪಸ್ಥಿತರಿದ್ದರು. ಅಗ್ನಿಹೋತ್ರಿ ಸೋಮಯಾಜಿ ಗೋವಿಂದ ಪ್ರಸಾದ್ ಭಟ್ ಕಾಂಚಿ ಕಾಮಕೋಟಿ ಪೀಠದ ಕುರಿತು ಮಾತನಾಡಿದರು. ಕೃಪಾಶಂಕರ ತುದಿಯಡ್ಕ ಸ್ವಾಗತಿಸಿ, ವಂದಿಸಿದರು. ಬಳಿಕ ಸ್ವಾಮೀಜಿಯವರು ನೆರೆದ ಭಕ್ತರಿಗೆ ಮಂತ್ರಾಕ್ಷತೆ ನೀಡಿ ಹರಸಿದರು. ಚೆನ್ನಕೇಶವ ದೇವಸ್ಥಾನಕ್ಕೆ ಆಗಮಿಸಿದ ಶ್ರೀಗಳನ್ನು ಮಂತ್ರ ಘೋಷ, ವಾದ್ಯಮೇಳಗಳೊಂದಿಗೆ ಪೂರ್ಣಕುಂಭ ಸ್ವಾಗತ ನೀಡಲಾಯಿತು.