ಉಜಿರೆ: ಧರ್ಮವನ್ನು ನಾವು ರಕ್ಷಿಸಿದರೆ, ಧರ್ಮ ನಮ್ಮನ್ನು ಸದಾ ಕಾಪಾಡುತ್ತದೆ. ಧರ್ಮಸ್ಥಳ ಸೌಂದರ್ಯ ನಗರ, ಸಂಸ್ಕೃತಿ ನಗರ ಮತ್ತು ಸೇವಾ ನಗರ. ಇಡೀ ದೇಶಕ್ಕೆ ಮುಕುಟಪ್ರಾಯವಾದ ಧರ್ಮಸ್ಥಳದಲ್ಲಿ ಅಮೂಲ್ಯ ಆಸ್ತಿಯಾದ ಭಕ್ತಿ, ಸೇವೆ, ಅನುಭವ, ನಾಯಕತ್ವ, ಪ್ರತಿಷ್ಠೆ, ಪ್ರಜ್ಞಾ, ಕೀರ್ತಿ ಎಲ್ಲವೂ ಇದೆ ಎಂದು ಕಂಚಿಕಾಮಕೋಟಿ ಪೀಠಾಧಿಪತಿ ಶ್ರೀ ಶಂಕರವಿಜಯೇಂದ್ರ ಸರಸ್ವತಿ ಶಂಕರಾಚಾರ್ಯ ಸ್ವಾಮೀಜಿ ಹೇಳಿದರು.ಅವರು ಶನಿವಾರ ಧರ್ಮಸ್ಥಳ ಕ್ಷೇತ್ರಕ್ಕೆ ಪುರಪ್ರವೇಶ ಮಾಡಿದಾಗ
ಮುಖ್ಯ ಪ್ರವೇಶ ದ್ವಾರದಿಂದ ಭವ್ಯ ಮೆರವಣಿಗೆಯಲ್ಲಿ ಸ್ವಾಗತಿಸಿ ಬಳಿಕ ಅಮೃತವರ್ಷಿಣಿ ಸಭಾಭವನದಲ್ಲಿ ನಡೆದ ಸಭೆಯಲ್ಲಿ ಅನುಗ್ರಹ ಭಾಷಣ ಮಾಡಿದರು.ದಾರಿದ್ರ್ಯ ನಿರ್ಮೂಲನೆಯೊಂದಿಗೆ ಭಾವದಾರಿದ್ರ್ಯ ನಿರ್ಮೂಲನವೂ ಆಗಬೇಕು.ಕರ್ನಾಟಕ ಸಂಗೀತ ಮತ್ತು ಯಕ್ಷಗಾನದ ಸೊಗಡನ್ನು ಶ್ಲಾಘಿಸಿದ ಅವರು ವಿದ್ಯೆ, ಕಲೆಗಳು ಮತ್ತು ವಿದ್ವಾಂಸರ ರಕ್ಷಣೆಯಾಗಬೇಕು ಎಂದು ಸಲಹೆ ನೀಡಿದರು.
ಬಹುಮುಖ ಪ್ರತಿಭೆ ಹಾಗೂ ಆದರ್ಶ ವ್ಯಕ್ತಿತ್ವ ಹೊಂದಿದ ಹೆಗ್ಗಡೆಯವರ ಹೃದಯ ಶ್ರೀಮಂತಿಕೆ ಹಾಗೂ ಸೇವಾ ಕಾಳಜಿ ಇಡೀ ದೇಶಕ್ಕೆ ಮಾದರಿಯಾಗಿದೆ. ಇತರರಿಗೂ ಸ್ಫೂರ್ತಿ, ಪ್ರೇರಣೆ ನೀಡುತ್ತವೆ ಎಂದರು.ಸ್ವಾಮೀಜಿಯವರು ಹೆಗ್ಗಡೆಯವರು ಮತ್ತು ಕುಟುಂಬದ ಎಲ್ಲಾ ಸದಸ್ಯರನ್ನು ಗೌರವಿಸಿ ಆಶೀರ್ವದಿಸಿದರು.
ಧರ್ಮಾಧಿಕಾರಿ ಡಿ. ವೀರೇಂದ್ರ ಹೆಗ್ಗಡೆಯವರು, ಹೇಮಾವತಿ ವೀ. ಹೆಗ್ಗಡೆಯವರು, ಡಿ. ಹರ್ಷೇಂದ್ರ ಕುಮಾರ್, ಸುಪ್ರಿಯಾ ಹರ್ಷೇಂದ್ರ ಕುಮಾರ್, ಸೋನಿಯಾಯಶೋವರ್ಮ ಮತ್ತು ಪೂರಣ್ವರ್ಮ ಉಪಸ್ಥಿತರಿದ್ದರು.