ಬೆಂಗಳೂರು: ‘ಬೆಂಗಳೂರು ಕಂಬಳ-ನಮ್ಮ ಕಂಬಳ’ಕ್ಕೆ ಅದ್ಧೂರಿ ತೆರೆ ಬಿದ್ದಿದ್ದು, ಎರಡು ದಿನಗಳಲ್ಲಿ ಲಕ್ಷಾಂತರ ಮಂದಿ ಆಗಮಿಸಿ ಕರಾವಳಿಯ ಕ್ರೀಡೆ, ಸಾಂಸ್ಕೃತಿಕ ಕಾರ್ಯಕ್ರಮ ಕಣ್ತುಂಬಿಕೊಂಡಿದ್ದಾರೆ.
ಬೆಂಗಳೂರು ಕಂಬಳ ಸಮಿತಿ ಇದೇ ಮೊದಲ ಬಾರಿ ರಾಜಧಾನಿಯಲ್ಲಿ ಏರ್ಪಡಿಸಿದ್ದ ಕಂಬಳ ಕ್ರೀಡಾಕೂಟ ನಿರೀಕ್ಷೆಗೂ ಮೀರಿ ಜನ ಮೆಚ್ಚುಗೆಗೆ ಪಾತ್ರವಾಯಿತು. ಕಂಬಳದ ಎರಡನೇ ದಿನವಾದ ಭಾನುವಾರ ಜನ ಕಿಕ್ಕಿರಿದು ನೆರೆದಿದ್ದರು. ಇಡೀ ಅರಮನೆ ಮೈದಾನದ ತುಂಬಾ
ಜನಜಾತ್ರೆ ಸೇರಿತ್ತು. ಕಂಬಳ ಕೋಣಗಳನ್ನು ವೀಕ್ಷಿಸಲು ನೂಕುನುಗ್ಗಲು ಉಂಟಾಗಿತ್ತು.ಶನಿವಾರಕ್ಕಿಂತಲೂ ದುಪ್ಪಟ್ಟು ಸಂಖ್ಯೆಯಲ್ಲಿ ಪ್ರೇಕ್ಷಕರು ಆಗಮಿಸಿ ಕಂಬಳ ಕೋಣಗಳ ಓಟ ವೀಕ್ಷಿಸಿದರು. ರಾತ್ರಿ ಅರಮನೆ ಮೈದಾನದ ಸುತ್ತ ಬಣ್ಣ-ಬಣ್ಣಗಳಿಂದ ಅಲಂಕೃತಗೊಂಡ ವಿದ್ಯುತ್ ದೀಪಗಳು ಕಂಗೊಳಿಸಿದರೆ, ಮೇಳದವರು ಇಂಪಾದ ವಾದ್ಯನುಡಿಸಿ ನೆರೆದಿದ್ದವರನ್ನು ಸೆಳೆದರು. ಎರಡನೇ ದಿನವೂ ಫುಡ್ ಕೋರ್ಟ್ ಮತ್ಯ್ಸಖಾದ್ಯ ಪ್ರಿಯರಿಂದ ತುಂಬಿ ತುಳುಕಿತು.
ಕಂಬಳದ ಪ್ರತಿ ವಿಭಾಗದ ಫೈನಲ್ ಸ್ಪರ್ಧೆ ಮೈನವಿರೇಳುವಂತೆ ಮಾಡಿತ್ತು.
ನಟ, ನಿರ್ದೇಶಕ ರಿಷಬ್ ಶೆಟ್ಟಿ ಅಭಿನಯದ ‘ಕಾಂತಾರ’ ಚಲನಚಿತ್ರದಲ್ಲಿ ಓಡಿದ್ದ ಕೋಣಗಳು ಬೆಂಗಳೂರು ಕಂಬಳ ಸ್ಪರ್ಧೆಯಲ್ಲಿ ಚಿನ್ನದ ಪದಕ ಗೆದ್ದಿವೆ. ಕಂಬಳದ ಕನಹಲಗೆ ವಿಭಾಗದಲ್ಲಿ ಕಾಂತಾರ ಚಿತ್ರದಲ್ಲಿ ಮಿಂಚಿದ್ದ ಕೋಣಗಳು ಪದಕ ಗೆದ್ದಿವೆ. ಕಿಟ್ಟು-ಅಪ್ಪು ಹೆಸರಿನ ಕೋಣಗಳು ಗೆಲುವು ಸಾಧಿಸಿ ಪದಕ ಗೆದ್ದು ಮಿಂಚಿವೆ.
ಹಗ್ಗ ಕಿರಿಯ ವಿಭಾಗ, ಹಗ್ಗ ಹಿರಿಯ ವಿಭಾಗ, ಅಡ್ಡಹಲಗೆ ಕಂಬಳ, ಕನಹಲಗೆ, ನೇಗಿಲು ಕಿರಿಯ, ನೇಗಿಲು ಹಿರಿಯ ಹೀಗೆ ಹಲವು ವಿಭಾಗಗಳಲ್ಲಿ ಕೋಣಗಳಲ್ಲಿ ಸ್ಪರ್ಧಿಸಿ ಚಿನ್ನದ ಪದಕ ಗೆದ್ದಿವೆ.







