ಸುಳ್ಯ: ಸುಳ್ಯ ಕಲ್ಲಪ್ಪಳ್ಳಿ ಪಾಣತ್ತೂರು ಅಂತರ್ ರಾಜ್ಯ ರಸ್ತೆಯ ಬಾಟೋಳಿ ಎಂಬಲ್ಲಿ ಮಣ್ಣು ಕುಸಿದು ರಸ್ತೆ ತಡೆ ಉಂಟಾಗಿರುವ ಮತ್ತು ಗುಡ್ಡ ಇನ್ನಷ್ಟು ಕುಸಿಯುವ ಆತಂಕ ಇರುವ ಹಿನ್ನಲೆಯಲ್ಲಿ ಈ ಭಾಗದಲ್ಲಿ ರಸ್ತೆಯಲ್ಲಿ ವಾಹನ ಸಂಚಾರ, ಪಾದಚಾರಿಗಳ ಸಂಚಾರ ಸೇರಿದಂತೆ ಸಂಪೂರ್ಣ ಸಂಚಾರ ನಿಷೇಧ ಮಾಡಲಾಗಿದೆ. ಪೊಲೀಸ್ ಬ್ಯಾರಿಕೇಡ್ ಅಳವಡಿಸಿ ರಸ್ತೆ ಬಂದ್ ಮಾಡಲಾಗಿದೆ. 3 ದಿವಸಗಳ ಹಿಂದೆ ಬಾಟೋಳಿ ಭಾಗದಲ್ಲಿ ಬಾರಿ

ಮರ ಸಹಿತ ಗುಡ್ಡ ಜರಿದು ವಾಹನ ಸಂಚಾರ ಅಸ್ತವ್ಯಸ್ತ ಆಗಿತ್ತು. ಸತತ ಮೂರು ದಿವಸಗಳಿಂದ ಪನತ್ತಡಿ ಗ್ರಾಮಪಂಚಾಯತ್ ಹಾಗೂ ಕಂದಾಯ ಇಲಾಖೆಯವರು ಪರಿಶ್ರಮದಿಂದ ಮಣ್ಣು ಮರಗಳನ್ನು ತೆರುಗೊಳಿಸಿ ನಿನ್ನೆ ಇಂದ ವಾಹನ ಸಂಚಾರ ಪುನಃ ಸ್ಥಾಪಿಸಲಾಗಿತ್ತು. ಇಂದು ಅದೇ ಜಾಗದಲ್ಲಿ ಗುಡ್ಡಜರಿದು ಮಣ್ಣು ಕುಸಿದು ರಸ್ತೆಗೆ ಬಿದ್ದಿದೆ. ಗುಡ್ಡದ ಮೇಲ್ಭಾಗದಲ್ಲಿ ಬಿರುಕುಗಳು ಕಾಣಿಸಿಕೊಂಡ ಹಿನ್ನೆಲೆಯಲ್ಲಿ ಸಂಪೂರ್ಣವಾಗಿ ವಾಹನ ಸಂಚಾರ ನಿಲ್ಲಿಸಲಾಗಿದೆ.

ಅಧಿಕಾರಿ, ಜನಪ್ರತಿನಿಧಿಗಳ ಭೇಟಿ:
ಸ್ಥಳಕ್ಕೆ ಕಾಸರಗೋಡು ಡೆಪ್ಯುಟಿ ಕಲೆಕ್ಟರ್ ದಿಲೀಪ್ ಕೆ , ಕಾಸರಗೋಡು ಭೂ ವಿಜ್ಞಾನ ಇಲಾಖೆಯ ಅಮೃತ, ವೆಳ್ಳರಿಕುಂಡು ತಹಶೀಲ್ದಾರ್ ಪಿ.ವಿ.ಮುರಳಿ, ಪನತ್ತಡಿ ಗ್ರಾಮ ಪಂಚಾಯತ್ ಅಧ್ಯಕ್ಷೆ ಪ್ರಸನ್ನ ಪ್ರಸಾದ್, ಪರಪ್ಪ ಬ್ಲಾಕ್ ಪಂಚಾಯತ್ ಸದಸ್ಯ ಅರುಣ್ ರಂಗತ್ತಮಲೆ ಗ್ರಾಮ ಪಂಚಾಯತ್ ಸದಸ್ಯ ರಾಧಾಕೃಷ್ಣ ಕಲ್ಲಪಳ್ಳಿ ವಿಲೇಜ್ ಆಫೀಸರ್ ವಿನೋದ್ ಕುಮಾರ್. ಸ್ಥಳಕ್ಕೆ ಭೇಟಿ ನೀಡಿ ಸ್ಥಳ ಪರಿಶೀಲನೆ ಮಾಡಿ ಭೂವಿಜ್ಞಾನಿಗಖ ನಿರ್ದೇಶನ ಪ್ರಕಾರ ಗುಡ್ಡದಲ್ಲಿ ಬಿರುಕು ಬಿಟ್ಟಿದ್ದು ಪುನಃ ಗುಡ್ಡ ಕುಸಿಯುವ

ಸಾಧ್ಯತೆ ಇದ್ದು ರಾತ್ರಿ ವಾಹನ, ಪಾದಾಚಾರಿಗಳಿಗೆ ಸಂಪೂರ್ಣ ಸಹಿತ ಸಂಚಾರ ನಿಷೇಧಿಸಲು ಉಪ ಜಿಲ್ಲಾಧಿಕಾರಿಯವರು ನಿರ್ದೇಶನ ನೀಡಿದ್ದಾರೆ. ಪೊಲೀಸ್ ಬಾರಿಕೇಡ್ ಇರಿಸಿ ಸಂಪೂರ್ಣ ರಸ್ತೆ ಮುಚ್ಚಲಾಗಿದೆ.ಮಳೆಯ ಸಾಧ್ಯತೆಗಳನ್ನು ಪರಿಶೀಲಿಸಿ ನಾಳೆ ಗುಡ್ಡ ಕುಸಿಯುವ ಸಾಧ್ಯತೆ ಇರುವ ಸ್ಥಳವನ್ನು ಯಾಂತ್ರಿಕ ತೆರವುಗೊಳಿಸುವ ಸಾಧ್ಯತೆ ಇದೆ.
ತಾತ್ಕಾಲಿಕ ಬದಲಿ ರಸ್ತೆ:
ಇದೀಗ ಸುಳ್ಯ-ಪಾಣತ್ತೂರು ರಸ್ತೆ ಬಂದ್ ಆಗಿರುವ ಹಿನ್ನಲೆಯಲ್ಲಿ ಪರ್ಯಾಯವಾಗಿ ಬಡ್ಡಡ್ಕ-ರಂಗತ್ತಮಲೆ- ಕಲ್ಲಪಳ್ಳಿ ರಸ್ತೆ, ಬಡ್ಡಡ್ಕ-ಬಾಟೋಳಿ- ಕಮ್ಮಾಡಿ ರಸ್ತೆ ಬಳಸಬಹುದಾಗಿದೆ. ಕಿರಿದಾದ ಹಾಗೂ ಕಚ್ಚಾ ರಸ್ತೆ ಇರುವ ಈ ರಸ್ತೆಯಲ್ಲಿ ಜೀಪುಗಳು ಮಾತ್ರ ಸಂಚರಿಸಬಹುದು.