ಸುಳ್ಯ: ಸುಳ್ಯ ಕಲ್ಲಪ್ಪಳ್ಳಿ ಪಾಣತ್ತೂರು ಅಂತರಾಜ್ಯ ರಸ್ತೆಯ ಬಾಟೋಳಿ ಎಂಬಲ್ಲಿ ಮಣ್ಣು ಕುಸಿದು ರಸ್ತೆ ತಡೆ ಉಂಟಾಗುರುವ ಮಣ್ಣನ್ನು ತೆರವು ಮಾಡಲಾಗಿದೆ. ಜೆಸಿಬಿ ಬಳಸಿ ಮಣ್ಣು ತೆರವು ಮಾಡಲಾಗಿದ್ದು ರಸ್ತೆ ಸಂಚಾರಕ್ಕೆ ಮುಕ್ತವಾಗಿದೆ. ಈ ಪ್ರದೇಶದ ರಸ್ತೆಯಲ್ಲಿ ಹಗಲಿನ ವೇಳೆ ಮಾತ್ರ ವಾಹನ ಹಾಗೂ ಪಾದಚಾರಿಗಳ ಸಂಚಾರಕ್ಕೆ ಅವಕಾಶ ನೀಡಲಾಗುವುದು. ರಾತ್ರಿ ವೇಳೆಯಲ್ಲಿ ಇಲ್ಲಿ ವಾಹನ ಹಾಗೂ

ಪಾದಚಾರಿ ಸಂಚಾರಕ್ಕೆ ನಿಷೇಧ ಹೇರಲಾಗಿದೆ. ಭಾರೀ ಮಳೆ ಮುಂದುವರಿದಿದ್ದು
ಮೇಲ್ಭಾಗದಲ್ಲಿ ಬಿರುಕು ಬಿಟ್ಟಿರುವ ಗುಡ್ಡ ಇನ್ನಷ್ಟು ಕುಸಿಯುವ ಆತಂಕ ಇರುವ ಹಿನ್ನಲೆಯಲ್ಲಿ ಈ ಭಾಗದಲ್ಲಿ ಮುಂಜಾಗೃತಾ ಕ್ರಮವಾಗಿ ರಾತ್ರಿಯಲ್ಲಿ ರಸ್ತೆಯಲ್ಲಿ ವಾಹನ ಸಂಚಾರ, ಪಾದಚಾರಿಗಳ ಸಂಚಾರ ಸೇರಿದಂತೆ ಸಂಪೂರ್ಣ ಸಂಚಾರ ನಿಷೇಧ ಮಾಡಲು ನಿರ್ಧರಿಸಲಾಗಿದೆ ಎಂದು ಗ್ರಾಮ ಪಂಚಾಯತ್ ಸದಸ್ಯ ರಾಧಾಕೃಷ್ಣ ಕಲ್ಲಪಳ್ಳಿ ತಿಳಿಸಿದ್ದಾರೆ.
4 ದಿವಸಗಳ ಹಿಂದೆ ಬಾಟೋಳಿ ಭಾಗದಲ್ಲಿ ಬಾರಿ ಮರ ಸಹಿತ ಗುಡ್ಡ ಜರಿದು ವಾಹನ ಸಂಚಾರ ಅಸ್ತವ್ಯಸ್ತ ಆಗಿತ್ತು. ಮಣ್ಣು ಮರಗಳನ್ನು ತೆರುಗೊಳಿಸಿ ಶುಕ್ರವಾರ ವಾಹನ ಸಂಚಾರ ಪುನಃ ಸ್ಥಾಪಿಸಲಾಗಿತ್ತು. ಶನಿವಾರ ಅದೇ ಜಾಗದಲ್ಲಿ ಗುಡ್ಡಜರಿದು ಮಣ್ಣು ಕುಸಿದು ರಸ್ತೆಗೆ ಬಿದ್ದಿದೆ. ಗುಡ್ಡದ ಮೇಲ್ಭಾಗದಲ್ಲಿ ಬಿರುಕುಗಳು ಕಾಣಿಸಿಕೊಂಡ ಹಿನ್ನೆಲೆಯಲ್ಲಿ ಸಂಪೂರ್ಣವಾಗಿ ವಾಹನ ಸಂಚಾರ ನಿಲ್ಲಿಸಲಾಗಿತ್ತು. ಇದೀಗ ಕುಸಿದ ಮಣ್ಣು ತೆರವು ಮಾಡಿ ವಾಹನ ಸಂಚಾರ ಮರು ಸ್ಥಾಪಿಸಲಾಗಿದೆ. ಹಗಲಿನ ಬಸ್ ಮತ್ತಿತರ ವಾಹನಗಳ ಸಂಚಾರಕ್ಕೆ ಅನುವು ಮಾಡಿ ಕೊಡಲಾಗಿದೆ.