ಕಾಸರಗೋಡು:ನೆತ್ತಿ ಮೇಲೆ ಹೊತ್ತಿ ಉರಿಯುವ ಸುಡು ಬಿಸಿಲು, ಬೆವರಿ ಬೆಂಡಾಗುವ ಸೆಕೆ. 41 ಡಿಗ್ರಿ ಸೆಲ್ಸಿಯಸ್ ತನಕ ಏರುವ ಉಷ್ಣಾಂಶ. ಈ ಸಂದರ್ಭದಲ್ಲಿ ಒಂದು ತುಂಡು ಕಲ್ಲಂಗಡಿ ಹಣ್ಣು ಸಿಕ್ಕಿದರೆ.. ಆಹಾ..ಬಾಯಲ್ಲಿ ನೀರೂರುತ್ತದೆ..! ಬೇಸಿಗೆ ಬಂತೆಂದರೆ ಕಲ್ಲಂಗಡಿಗೆ ಬಲು ಡಿಮಾಂಡ್. ಹಸಿವು, ದಾಹ ತಣಿಸುವ ಜೊತೆಗೆ ನಾಲಗೆಗೆ ಸಿಹಿ ನೀಡುವ ಕಲ್ಲಂಗಡಿ ಬೇಸಿಗೆಯ ರಾಜ. ಅದರಲ್ಲೂ ಸ್ಥಳೀಯವಾಗಿ ಬೆಳೆದರೆ ರುಚಿ ಇನ್ನೂ ಸ್ವಲ್ಪ ಜಾಸ್ತಿ. ನಮ್ಮ ಮಾರುಕಟ್ಟೆಯಲ್ಲಿ ಸಿಗುವ ಕಲ್ಲಂಗಡಿ ಹಣ್ಣುಗಳು ಕರ್ನಾಟಕದ ವಿವಿಧ ಭಾಗಗಳಿಂದ, ತಮಿಳುನಾಡು, ಆಂಧ್ರಪ್ರದೇಶದಿಂದ ಬರುತ್ತದೆ. ಇದೀಗ ದಕ್ಷಿಣ ಕನ್ನಡ ಜಿಲ್ಲೆಯ ನೆರೆಯ ಕಾಸರಗೋಡು ಜಿಲ್ಲೆಯಲ್ಲಿಯೂ ಕಲ್ಲಂಗಡಿ ಕೃಷಿ ಬೆಳೆದು ಕೃಷಿಕರು ಯಶಸ್ಸು ಕಾಣುತ್ತಿದ್ದಾರೆ.ಕಾಸರಗೋಡಿನ ಮಣ್ಣು ಮತ್ತು ಹವಾಮಾನ ಕಲ್ಲಂಗಡಿಗೆ ಬೆಳೆಗೆಗೆ ಸೂಕ್ತವೇ.? ಈ ಸಂದೇಹದಿಂದಾಗಿ ಇದುವರೆಗೆ

ಕಾಸರಗೋಡು ಜಿಲ್ಲೆಯ ರೈತರು ಕೃಷಿ ನಷ್ಟ ಅನುಭವಿಸಿದ ಸಂದರ್ಭದಲ್ಲಿ ಹಲವು ಪರ್ಯಾಯ ಕೃಷಿಗಳನ್ನು ನಡೆಸಿದರೂ ಕಲ್ಲಂಗಡಿ ಕೃಷಿಯತ್ತ ಮನಸ್ಸು ಮಾಡಿರಲಿಲ್ಲ.ಆದರೆ ಕಲ್ಲಂಗಡಿ ಹಣ್ಣು ಇಲ್ಲೂ ಪಸಂದಾಗಿ ಬೆಳೆಯಬಹುದು ಎಂಬುದು ಈಗ ಕೃಷಿಕರ ಅರಿವಿಗೆ ಬಂದಿದ್ದು ಕಾಸರಗೋಡು ಜಿಲ್ಲೆಯಲ್ಲಿ ಕೃಷಿಕರು ವ್ಯಾಪಕವಾಗಿ ಕಲ್ಲಂಗಡಿ ಕೃಷಿಯನ್ನು ನಡೆಸುತ್ತಿದ್ದಾರೆ. ಕುಟುಂಬಶ್ರೀ ಸ್ವಸಹಾಯ ಸಂಘಗಳ ನೇತೃತ್ವದಲ್ಲಿ ಸುಮಾರು 100 ಎಕರೆಯಲ್ಲಿ ಕಲ್ಲಂಗಡಿ ಬೆಳೆಯಲಾಗಿದೆ. ಅದರಲ್ಲಿ ಬಹಳಷ್ಟು ಕೊಯ್ಲು ಮಾಡಲಾಗಿದೆ.ಮಾಗಿದ ಕಲ್ಲಂಗಡಿ ಹಲವು ಕಡೆ ಕೊಯ್ಲಿಗೆ ಸಿದ್ಧವಾಗಿದೆ. ಅತೀ ಕಡಿಮೆ ಅವಧಿಯಲ್ಲಿ ಫಲ ನೀಡುತ್ತದೆ ಎಂಬ ಕಾರಣಕ್ಕೆ ವರ್ಷಕ್ಕೆ 2 ಬಾರಿ ಕೃಷಿ ಮಾಡಬಹುದು ಎಂಬುದು ಇದರ

ವಿಶೇಷತೆ. ಉತ್ತಮ ಮಾರುಕಟ್ಟೆಯೂ ಇರುವುದು ರೈತರಲ್ಲಿ ಭರವಸೆ ಮೂಡಿಸಿದೆ. ರಂಜಾನ್ ಸಂದರ್ಭದಲ್ಲಿ ಬೇಡಿಕೆ ಹೆಚ್ಚಾಗಿ ದೊರೆಯಬಹುದು ಎಂದು ಕೃಷಿ ಮಾಡಿದವರು ಸಾಕಷ್ಟು ಮಂದಿ ಇದ್ದಾರೆ. ಜಿಲ್ಲೆಯ ಒಣಹವೆ ಹಾಗೂ ಕೆಂಪು ಮಣ್ಣು ಇದಕ್ಕೆ ಹೆಚ್ಚು ಸೂಕ್ತ ಎನ್ನುತ್ತಾರೆ ಕೃಷಿಕರು. ಮುಕಾಸಾ ಎಫ್1 ಎಂಬ ಹೈಬ್ರಿಡ್ ತಳಿಯನ್ನು ಜಿಲ್ಲೆಯಲ್ಲಿ ಈ ವರ್ಷ ಹೆಚ್ಚಾಗಿ ಬೆಳೆಯಲಾಗಿದೆ. ಅಕಾಲಿಕ ಮಳೆ ಈ ಕೃಷಿಗೆ ಸವಾಲು. ಮಳೆಯಾದರೆ ಕಲ್ಲಂಗಡಿ ಬೆಳವಣಿಗೆಯ ನಿಂತು ಕರಗಿ ಹೋಗುತ್ತದೆ.

ಕಡಿಮೆ ಅವಧಿಯಲ್ಲಿ ಕೊಯ್ಲು:
ಅತಿ ಕಡಿಮೆ ಸಮಯದಲ್ಲಿ ಕೊಯ್ಲು ಮಾಡಬಹುದು ಕಲ್ಲಂಗಡಿ ಕೃಷಿಯ ಪ್ರಯೋಜನ.ಬೆಳೆ ನಾಟಿ ಮಾಡಿ 65-70 ದಿನಗಳಲ್ಲಿ ಕೊಯ್ಲು ಮಾಡಬಹುದು. ಅಂದರೆ ಸೆಪ್ಟಂಬರ್ನಲ್ಲಿ ಕೃಷಿ ಮಾಡಿದರೆ ನವೆಂಬರ್ ಮಧ್ಯದ ವೇಳೆಗೆ ಫಸಲು ಬರುತ್ತದೆ. ಡಿಸೆಂಬರ್ ತಿಂಗಳಲ್ಲಿ ಇಲ್ಲಿ ಮತ್ತೆ ಕೃಷಿ ಮಾಡಬಹುದು ಮತ್ತು ಫೆಬ್ರವರಿ ತಿಂಗಳಲ್ಲಿ ಅದರ ಕೊಯ್ಲು ಬರುತ್ತದೆ. ಹೀಗಾಗಿ, ಕಲ್ಲಂಗಡಿ ಒಂದು ಋತುವಿನಲ್ಲಿ ಎರಡು ಬಾರಿ ಕೊಯ್ಲು ಮಾಡಬಹುದು. ಕೋಳಿ ಗೊಬ್ಬರ, ಸುಣ್ಣ, ಬೇವಿನ ಹಿಂಡಿ ಮತ್ತಿತರ ಗೊಬ್ಬರಗಳು.ಕೋಳಿ ಗೊಬ್ಬರದ ಬದಲಿಗೆ ಸಗಣಿ ಹುಡಿಯನ್ನು ಕೂಡ ಬಳಸಬಹುದು.ಗಿಡ ಬೆಳೆದ ನಂತರ ಪೋಷಕಾಂಶಗಳನ್ನೂ ನೀಡಬೇಕು. ಕಳೆಗಳು ಬೆಳೆದರೆ ಕಲ್ಲಂಗಡಿ ಕೃಷಿಗೆ ತೊಂದರೆಯಾಗುತ್ತದೆ. ಆದುದರಿಂ ಮಲ್ಚಿಂಗ್ ಶೀಟ್ಗಳನ್ನು ಬಳಸಿ ಕಳೆಗಳನ್ನು ದೂರವಿಡಬಹುದು. ಉತ್ಪಾದನೆಯೂ ಹೆಚ್ಚಲಿದೆ. ಮಣ್ಣಿನ ದಿಣ್ಣೆಗಳನ್ನು ಉದ್ದವಾಗಿ ತೆಗೆದುಕೊಂಡು ಅದರ ಮೇಲೆ ಶೀಟ್ಗಳನ್ನು ಹಾಸಿ ನಂತರ ರಂಧ್ರವನ್ನು ಮಾಡಿ ಸಸಿಗಳನ್ನು ನೆಡಬೇಕು. ಹನಿ ನೀರಾವರಿ ವ್ಯವಸ್ಥೆಯಿಂದ ನೀರು ನಿಲ್ಲುವುದನ್ನು ಕಡಿಮೆ ಮಾಡಬಹುದು. ಅದೇ ಪೈಪ್ ಮೂಲಕ ಪೋಷಕಾಂಶಗಳನ್ನು ಕೂಡ ಬಿಡಬಹುದು.

ಮಾರುಕಟ್ಟೆ ಸಮಸ್ಯೆ ಇಲ್ಲ:
ಉಷ್ಣಾಂಶ ಹಾಗು ಸೆಕೆ ಇರುವ ಬೇಸಿಗೆಯಲ್ಲಿ ಕಲ್ಲಂಗಡಿ ಕೃಷಿಯು ಹೆಚ್ಚಾಗಿ ಫಸಲು ನೀಡುತ್ತದೆ. ಹಾಗಾಗಿ ಈ ಅವಧಿಯಲ್ಲಿ ಭಾರೀ ಬೇಡಿಕೆ ಇರುತ್ತದೆ. ಆದುದರಿಂದ ಉತ್ತಮ ದರ ಮತ್ತು ಮಾರುಕಟ್ಟೆ ಲಭ್ಯವಿರುತ್ತದೆ. ಆದುದರಿಂದ ಮಾರುಕಟ್ಟೆ ಸಮಸ್ಯೆ ತಲೆದೋರುವುದಿಲ್ಲ ಎಂಬುದು ಕೃಷಿಕರ ಅಭಿಪ್ರಾಯ.ಇತರ ರಾಜ್ಯಗಳಿಂದ ಬರುವ ಕಲ್ಲಂಗಡಿಗಳಿಗಿಂತ ಸ್ಥಳೀಯವಾಗಿ ಬೆಳೆಯುವ ಕಲ್ಲಂಗಡಿಗೆ ಉತ್ತಮ ಬೇಡಿಕೆಯೂ ಇದೆ. ದರವೂ ದೊರೆಯುತ್ತದೆ.

ದ.ಕ.ದಲ್ಲಿಯೂ ಪ್ರಯೋಗ ಮಾಡಬಹುದು:
ಕಾಸರಗೋಡು ಜಿಲ್ಲೆಗೆ ಸಮಾನಾದ ಮಣ್ಣು ಮತ್ತು ಹವೆ ಇರುವ ಕಾರಣ ದಕ್ಷಿಣ ಕನ್ನಡ ಜಿಲ್ಲೆಯಲ್ಲಿಯೂ ಕಲ್ಲಂಗಡಿ ಕೃಷಿ ಪ್ರಯೋಗ ಮಾಡಬಹುದು. ಕೃಷಿಯಲ್ಲಿ ಹಲವಾರು ಪ್ರಯೋಗಗಳನ್ನು ಮಾಡಿರುವ ಇಲ್ಲಿನ ಕೃಷಿಕರಿಗೆ ಹೊಸತೊಂದು ಪ್ರಯೋಗ ಮಾಡಿ ನೋಡಬಹುದು.
