ಸುಳ್ಯ: ರಾಷ್ಟ್ರೀಯ ಹೆದ್ದಾರಿಯ ಬದಿಯಲ್ಲಿಯೇ ಇದ್ದರೂ, ಗ್ರಾಮ ಪಂಚಾಯತ್ ಕಚೇರಿಯ ಹತ್ತಿರವೇ ಇದ್ದರೂ ಕಲ್ಲಮುರ ನಿವಾಸಿಗಳಿಗೆ ತಾವು ವಾಸಿಸುವ ಭೂಮಿಗೆ ಹಕ್ಕು ಪತ್ರ, ಮೂಲಭೂತ ಸೌಕರ್ಯಗಳು ಮರೀಚಿಕೆಯಾಗಿಯೇ ಉಳಿದಿದೆ. ಹಲವಾರು ದಶಕಗಳಿಂದ ಇಲ್ಲಿ ವಾಸವಾಗಿದ್ದರೂ ತಮಗೆ ಹಕ್ಕು ಪತ್ರ ಲಭಿಸಿಲ್ಲಾ ಎಂದು ಈ ಪ್ರದೇಶದ ಜನರು ಇದೀಗ ಮತದಾನ ಬಹಿಷ್ಕಾರಕ್ಕೆ ಮುಂದಾಗಿದ್ದಾರೆ. ರಾಷ್ಟ್ರೀಯ
ಹೆದ್ದಾರಿ ಬದಿಯಲ್ಲಿ ಮತದಾನ ಬಹಿಷ್ಕಾರದ ಬ್ಯಾನರ್ ಅಳವಡಿಸಿದ್ದಾರೆ. ಗ್ರಾಮ ಪಂಚಾಯತ್ ವಾಸ್ತವ್ಯ ಸೇರಿ ಹಲವು ಕಾರ್ಯಕ್ರಮಗಳಲ್ಲಿ
ಭೂಮಿಗೆ ಹಕ್ಕುಪತ್ರ ನೀಡುವಂತೆ ಮನವಿ ನೀಡಿದ್ದರೂ ಪರಿಶಿಷ್ಟ ಜಾತಿಗೆ ಸೇರಿದ ಕಲ್ಲಮುರ ನಿವಾಸಿಗಳಿಗೆ ಸ್ಥಳದ ದಾಖಲೆಗಳು ಇಲ್ಲದಿರುವುದರಿಂದ ಮತ್ತು ಸೌಲಭ್ಯ ವಂಚಿತರಾಗಿರುವುದರಿಂದ ಕಲ್ಲಮುರ ನಿವಾಸಿಗಳ ಬೇಡಿಕೆಯನ್ನು ಸರಿಪಡಿಸಿಕೊಡದ ಕಾರಣ ಮತದಾನ ಬಹಿಷ್ಠಾರ ಮಾಡುತ್ತಿದ್ದೇವೆ ಎಂದು ಬ್ಯಾನರ್ನಲ್ಲಿ ಬರೆಯಲಾಗಿದೆ. ಪ್ರದೇಶದಲ್ಲಿ ಸುಮಾರು 13ಕ್ಕೂ ಹೆಚ್ಚು ಮನೆಗಳಿದ್ದು ಹಕ್ಕುಪತ್ರ ಸಿಕ್ಕಿಲ್ಲಾ ಎಂದು ಸ್ಥಳೀಯರು ಹೇಳುತ್ತಾರೆ.
ಕುಡಿಯುವ ನೀರಿಗೆ ತತ್ವಾರ:
ಕಡು ವೇಸಿಗೆಯಲ್ಲಿ ಕಲ್ಲಮುರ ಪ್ರದೇಶದ ಜನರು ಕುಡಿಯುವ ನೀರು ಪಡೆಯುವ ಬಾವಿ ಬತ್ತಿ ಹೋಗಿದೆ. ಆದುದರಿಂದ ಈ ಪ್ರದೇಶದ ಜನರು ಕುಡಿಯಲು ದೂರದ ಪ್ರದೇಶದಿಂದ ನೀರನ್ನು ಹೊತ್ತು ತರುವ ಸ್ಥಿತಿ ನಿರ್ಮಾಣವಾಗಿದೆ. ಕೊಳವೆ ಬಾವಿಯ ನೀರು ಸರಬರಾಜು ಇದ್ದರೂ ಅದು ಕುಡಿಯಲು ಸಾಧ್ಯವಾಗುವುದಿಲ್ಲ. ಕುಡಿಯಲು ಬಾವಿಯ ನೀರು ಬಳಸುತ್ತಿದ್ದೆವು. ಈಗ ಬಾವಿ ಬತ್ತಿ ಹೋಗಿರುವ ಕಾರಣ ಕುಡಿಯಲು ನೀರು ಹೊತ್ತು ತರಬೇಕಾಗಿದೆ ಎನ್ನುತ್ತಾರೆ ಈ ಪ್ರದೇಶದ ನಾಗರಿಕರು.