ಮೈಸೂರು: ಅರೆಭಾಷೆ ಸಂಸ್ಕೃತಿ ಸಂಪ್ರದಾಯಗಳನ್ನು ಮುಂದಿನ ಪೀಳಿಗೆಗೆ ಪರಿಚಯಿಸಿ, ಅವರು ಅವುಗಳನ್ನು ಅನುಸರಿಸಿ ಮುನ್ನಡೆಯುವಂತೆ ಹಿರಿಯರು ಪ್ರೇರಣೆ ನೀಡಬೇಕೆಂದು ಕರ್ನಾಟಕ ಅರೆಭಾಷೆ ಸಂಸ್ಕೃತಿ ಮತ್ತು ಸಾಹಿತ್ಯ ಅಕಾಡೆಮಿಯ ಅಧ್ಯಕ್ಷರಾದ ಸದಾನಂದ ಮಾವಜಿ ಕರೆ ನೀಡಿದ್ದಾರೆ. ಅವರು ಮೈಸೂರಿನ ಕೊಡಗು ಗೌಡ ಸಮಾಜದಲ್ಲಿ ಏರ್ಪಡಿಸಿದ್ದ ಕೈಲ್ ಮುಹೂರ್ತ ಸಮಾರಂಭದಲ್ಲಿ
ಮುಖ್ಯ ಅತಿಥಿಯಾಗಿ ಮಾತನಾಡಿ, ಯುವ ಪೀಳಿಗೆ ನಮ್ಮ ಭಾಷೆ ಮತ್ತು ಸಂಸ್ಕೃತಿಯ ಬಗ್ಗೆ ಪ್ರೀತಿ ಬೆಳೆಸಿಕೊಂಡಾಗ ಮಾತ್ರ ಸಂಸ್ಕೃತಿ ಉಳಿಯಲು ಸಾಧ್ಯ ಎಂದು ಅಭಿಪ್ರಾಯಪಟ್ಟರು.

ಮೈಸೂರು ಕೊಡಗು ಗೌಡ ಸಮಾಜದ ಅಧ್ಯಕ್ಷ ಕೊಂಬಾರನ ಬಸಪ್ಪ ಅಧ್ಯಕ್ಷತೆ ವಹಿಸಿದ್ದರು. ಕೊಡಗು ಗೌಡ ಸಮಾಜಗಳ ಒಕ್ಕೂಟದ ಅಧ್ಯಕ್ಷ ಆನಂದ ಕರಂದ್ಲಾಜೆ, ಅರೆ ಭಾಷೆ ಅಕಾಡೆಮಿ ಸದಸ್ಯೆ ಚಂದ್ರಾವತಿ ಬಡ್ಡಡ್ಕ ಮಾತನಾಡಿದರು.ಸದಾನಂದ ಮಾವಜಿ ಹಾಗೂ ಆನಂದ ಕರಂದ್ಲಾಜೆ ಅವರನ್ನು ಸನ್ಮಾನಿಸಲಾಯಿತು.
ಮೈಸೂರು ಕೊಡಗು ಗೌಡ ಸಮಾಜದ ಕಾರ್ಯದರ್ಶಿ ಪೊನ್ನೆಟಿ ನಂದ ಸ್ವಾಗತಿಸಿ, ಮೈಸೂರಿನ ಕೊಡಗು ಮತ್ತು ದಕ್ಷಿಣ ಕನ್ನಡ ಮಹಿಳಾ ಒಕ್ಕೂಟದ ಅಧ್ಯಕ್ಷ ನಡುವಟ್ಟಿ ರ ಗೀತಾ ಲಕ್ಷ್ಮಣ ವಂದಿಸಿದರು. ಸಮಾಜದ ನಿರ್ದೇಶಕ ಪಟ್ಟಡ ಶಿವಕುಮಾರ್ ಕಾರ್ಯಕ್ರಮ ನಿರೂಪಿಸಿದರು.





