ಸುಳ್ಯ:ಅರಂತೋಡಿನ ಉಕ್ರಾಜೆ ಬೈಲು ಕಾಡಿನೊಳಗೆ ಕಡವೆ ಮೃತದೇಹ ಪತ್ತೆಯಾಗಿದ್ದು, ಕಡವೆಯ ಮೃತದೇಹದ ಮರಣೋತ್ತರ ಪರೀಕ್ಷೆ ನಡೆಸಿದಾಗ ಗುಂಡೇಟಿನಿಂದ ಕಡವೆ ಸಾವಿಗೀಡಾಗಿದೆ ಎಂದು ದೃಢಪಟ್ಟಿದೆ. ಅರಂತೋಡಿನ ಉಕ್ರಾಜೆ ಬೈಲು ಕಾಡಿನೊಳಗೆ ಕಡವೆ ಮೃತದೇಹ ಪತ್ತೆಯಾಗಿತ್ತು. ಇದರ ಮರೋತ್ತರ ಪರೀಕ್ಷೆ ಇಂದು ನಡೆಯಿತು. ಸುಳ್ಯ
ಉಪ ಅರಣ್ಯ ಸಂರಕ್ಷಣಾಧಿಕಾರಿ ಪ್ರವೀಣ್ ಶೆಟ್ಟಿ, ಸುಳ್ಯ ವಲಯ ಅರಣ್ಯಾಧಿಕಾರಿ ಎನ್.ಮಂಜುನಾಥ್ ಮತ್ತು ಸಿಬ್ಬಂದಿ, ಪಶುವೈದ್ಯಾಧಿಕಾರಿ ಡಾ.ನಿತಿನ್ ಪ್ರಭು ಹಾಗೂ ಸಿಬ್ಬಂದಿ ಅವರ ನೇತೃತ್ವದಲ್ಲಿ ಉಕ್ರಾಜೆಬೈಲಿನಲ್ಲಿ ಕಡವೆಯ ಮೃತದೇಜದ ಪೋಸ್ಟ್ ಮಾರ್ಟಂ ನಡೆಸಲಾಯಿತು.
ಸುಮಾರು ಆರು ವರ್ಷದ ಹೆಣ್ಣು ಕಡವೆಯ ಹೊಟ್ಟೆಯ ಭಾಗದಿಂದ ಗುಂಡು ದೇಹದೊಳಗೆ ಸೇರಿರುವ ಗಾಯವಿದೆ. ದೇಹದೊಳಗೆ ಗುಂಡಿನ ಚಿಲ್ಲ್ ಕೂಡ ಪತ್ತೆಯಾಗಿದೆ. ಗುಂಡು ತಗುಲಿ ಕಡವೆ ಸಾವಿಗೀಡಾಗಿರುವುದು ಖಚಿತವಾದ ಹಿನ್ನಲೆಯಲ್ಲಿ ವನ್ಯಜೀವಿ ಹತ್ಯೆ
ಪ್ರಕರಣ ದಾಖಲಿಸಿಕೊಂಡು ತನಿಖೆ ಆರಂಭಿಸಲಾಗಿದೆ ಎಂದು ವಲಯ ಅರಣ್ಯಾಧಿಕಾರಿ ಎನ್.ಮಂಜುನಾಥ್ ತಿಳಿಸಿದ್ದಾರೆ.