ಆಲಂಕಾರು: ಮಾದ್ಯಮ ಜಗತ್ತು ತನ್ನದೇ ಆದ ಇತಿಹಾಸವನ್ನು ಹೊಂದಿದ್ದು, ಕಾಲಕ್ಕೆ ತಕ್ಕಂತೆ ಬದಲಾಗುತ್ತಾ ಸಾಮಾಜಿಕ ಬದಲಾವಣೆಯಲ್ಲಿ ಮಹತ್ತರವಾದ ಪಾತ್ರ ವಹಿಸುತ್ತಾ ಬಂದಿದೆ ಎಂದು ಪುತ್ತೂರು ಸಹಾಯ ಆಯುಕ್ತ ಜುಬಿನ್ ಮೊಹಾಪಾತ್ರ ಅಭಿಪ್ರಾಯಪಟ್ಟರು.ಅವರು ಸೋಮವಾರ ಆಲಂಕಾರು ಶ್ರೀ ದುರ್ಗಾಂಬಾ ಪದವಿ ಪೂರ್ವ ಕಾಲೇಜಿನಲ್ಲಿ ಕರ್ನಾಟಕ ಕಾರ್ಯನಿರತ ಪತ್ರಕರ್ತರ ಸಂಘ ಕಡಬ ತಾಲೂಕು ಘಟಕದ ವತಿಯಿಂದ ನಡೆದ ಪತ್ರಿಕಾ ದಿನಾಚರಣೆ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು.ಮಾಧ್ಯಮ ಜಗತ್ತು ಹಲವು ಬದಲಾವಣೆಗೊಂದಿಗೆ ವೇಗವಾಗಿಯೂ ಜನರನ್ನು
ತಲುಪುತ್ತಿದೆ. ಅದೆಷ್ಟೋ ಕ್ರಾಂತಿಕಾರಿ ವಿದ್ಯಮಾನಗಳು ಮಾಧ್ಯಮಗಳಿಂದ ನಡೆದ ಇತಿಹಾಸ ಇದೆ, ನಾವು ಮಾಧ್ಯಮವನ್ನು ಯಾವ ರೀತಿಯಲ್ಲಿ ಬಳಕೆ ಮಾಡಿಕೊಳ್ಳುತ್ತೇವೆ ಅದರಂತೆ ಅದರ ಪರಿಣಾಮ ಕಾಣಬಹುದಾಗುದೆ. ನಾವು ಧನಾತ್ಮಕವಾಗಿ ಬಳಕೆಮಾಡಿಕೊಂಡು ಸಾಮಾಜಿಕ ಬದಲಾವಣೆಗೆ ಕಾರಣಕರ್ತರಾಗಬೇಕುಎಂದು ಹೇಳಿದರು. ಸಾರ್ವಜನಿಕರು ಸಾಮಾಜಿಕ ಜಾಲತಾಣಗಳಲ್ಲಿ ಬರುವ ಮಾಹಿತಿಗಳ ಬಗ್ಗೆ ಸತ್ಯಾಸತ್ಯತೆಯನ್ನು ತಿಳಿಯುವುದು ಮಾಡಬೇಕು ಎಂದರು. ಸೈಬರ್ ಕ್ರೈಂ ಬಗ್ಗೆ ಎಚ್ಚರಿಕೆ ವಹಿಸುವಂತೆ ತಿಳಿಸಿದ ಅವರು ಸಾಮಾಜಿಕ ಜಾಲತಾಣಗಳನ್ನು ದುರುಪಯೋಗ ಮಾಡಿಕೊಳ್ಳಬಾರದು ಅದರಲ್ಲಿರುವ ಅದೆಷ್ಟೋ ಪ್ರಯೋಜನಗಳನ್ನು ಪಡೆಯಲು ಪ್ರಯತ್ನಿಸಬೇಕು, ಪತ್ರಿಕೆಗಳನ್ನು ಓದುವ ಹವ್ಯಾಸವನ್ನು ವಿದ್ಯಾರ್ಥಿಗಳು ಬೆಳೆಸಿಕೊಳ್ಳುವುದು ಸ್ಪರ್ಧಾತ್ಮಕ ಪರೀಕ್ಷೆಗಳ ತಯಾರಿಗೆ ಪ್ರಯೋಜನ ಆಗಲಿದೆ ಎಂದರು. ಬಳಿಕ ಸಹಾಯಕ ಆಯುಕ್ತರು ವಿದ್ಯಾರ್ಥಿಗಳೊಂದಿಗೆ ಸಂವಾದ ಕಾರ್ಯಕ್ರಮ ನಡೆಸಿದರು.
ಹಿರಿಯ ಪತ್ರಕರ್ತ ಸುಧಾಕರ ಸುವರ್ಣ ತಿಂಗಳಾಡಿ ಉಪನ್ಯಾಸ ನೀಡಿ ವೃತ್ತಿಯಲ್ಲಿ ಪ್ರಾಮಾಣಿಕತೆ, ನೈತಿಕತೆ ಮತ್ತು ಪಾರದರ್ಶಕತೆ ಹೊಂದಿರುವ ಪತ್ರಕರ್ತ ಯಶಸ್ವಿ ಪತ್ರಕರ್ತನಾಗಿ ಮೂಡಿ ಬರಲು ಸಾಧ್ಯ. ಯಾರಿಗೂ ಹೆದರದ ಮತ್ತು ಯಾರ ಕಡೆಗೂ ಒಲವು ಹೊಂದಿರದ ಧೋರಣೆಯನ್ನು ಪತ್ರಕರ್ತ ತನ್ನ ವೃತ್ತಿಯುದ್ದಕ್ಕೂ ಪಾಲನೆ ಮಾಡಿಕೊಂಡು ಹೋಗಬೇಕು, ಪತ್ರಕರ್ತರು ಪ್ರತಿಪಕ್ಷದಂತೆ ಕೆಲಸ ಮಾಡಬೇಕು. ವ್ಯವಸ್ಥೆಯ ಜತೆಯಲ್ಲಿ ಪತ್ರಕರ್ತ ಸಾಗಿದರೆ ವ್ಯವಸ್ಥೆ ಕುಲಗೆಡುವ ಅಪಾಯವಿದೆ. ಅದರ ಬದಲು ವ್ಯವಸ್ಥೆಯ ಲೋಪವನ್ನು ಹುಡುಕುವ ಕೆಲಸ ನಿರಂತರ ಮಾಡಬೇಕು. ಹಾಗೆ ಮಾಡುವುದರಿಂದ ಪ್ರಜಾಪ್ರಭುತ್ವದ ಆಶಯ ಜೀವಂತವಾಗಿರುತ್ತದೆ ಎಂದರು. ಪತ್ರಿಕೋದ್ಯಮದತ್ತ ಆಸಕ್ತಿ ತೋರುವ ವಿದ್ಯಾರ್ಥಿಗಳಿಗೆ ವಿಪುಲ ಉದ್ಯೋಗವಕಾಶವಿದೆ ಎಂದರು.
ಮುಖ್ಯ ಅತಿಥಿಯಾಗಿ ಕಾರ್ಯನಿರತ ಪತ್ರಕರ್ತರ ಸಂಘದ ದಕ್ಷಿಣ ಕನ್ನಡ ಜಿಲ್ಲಾಧ್ಯಕ್ಷ ಶ್ರೀನಿವಾಸ ನಾಯಕ್ ಇಂದಾಜೆ,ಆಲಂಕಾರು ಶ್ರೀ ದುರ್ಗಾಂಬಾ ಪದವಿ ಪೂರ್ವ ಕಾಲೇಜಿನ ಸಂಚಾಲಕ ದಯಾನಂದ ರೈ ಮನವಳಿಕೆ ಶುಭ ಹಾರೈಸಿದರು.
ಕರ್ನಾಟಕ ಕಾರ್ಯನಿರತ ಪತ್ರಕರ್ತರ ಸಂಘದ ಕಡಬ ತಾಲೂಕು ಅಧ್ಯಕ್ಷ ನಾಗರಾಜ್ ಎನ್.ಕೆ. ಅಧ್ಯಕ್ಷತೆ ವಹಿಸಿ ಕಾರ್ಯಕ್ರಮ ನಿರೂಪಿಸಿದರು. ಕಾಲೇಜಿನ ಆಡಳಿತಾಧಿಕಾರಿ ಶ್ರೀಪತಿ ರಾವ್, ಸಂಘದ ಪ್ರಧಾನ ಕಾರ್ಯದರ್ಶಿ ವಿಜಯ ಕುಮಾರ್ ಪೆರ್ಲ ವೇದಿಕೆಯಲ್ಲಿ ಉಪಸ್ಥಿತರಿದ್ದರು. ಈ ಸಂದರ್ಭದಲ್ಲಿ ಹಿರಿಯ ಪತ್ರಿಕಾ ವಿತರಕಿ ನಾರಾಯಣಿ ಭಟ್ ಆಲಂಕಾರು ಅವರನ್ನು ಸನ್ಮಾನಿಸಲಾಯಿತು. ಸಂಘದ ಸ್ಥಾಪಕಾಧ್ಯಕ್ಷ ಕೆ.ಎಸ್. ಬಾಲಕೃಷ್ಣ ಕೊಯಿಲ ಸ್ವಾಗತಿಸಿದರು. ಸದಸ್ಯರಾದ ಹರೀಶ್ ಬಾರಿಂಜ ಸನ್ಮಾನ ಪತ್ರ ವಾಚಿಸಿದರು. ತಸ್ಲಿಂ ಮರ್ದಾಳ ಅತಿಥಿಗಳನ್ನು ವೇದಿಕೆಗೆ ಆಹ್ವಾನಿಸಿದರು. ಕಾಲೇಜಿನ ಪ್ರಾಂಶುಪಾಲೆ ರೂಪಾ ಎಂ.ಟಿ ವಂದಿಸಿದರು.