ಸುಳ್ಯ: ದೀಪಗಳ ಹಬ್ಬ ದೀಪಾವಳಿಯ ಬಳಿಕ ಸುಳ್ಯಕ್ಕೆ 3 ದಿನದ ಕಬಡ್ಡಿ ಉತ್ಸವದ ದೀಪಾಳಿಗೆ ಸುಳ್ಯ ಸಜ್ಜುಗೊಳ್ಳುತಿದೆ. ಸುಳ್ಯದಲ್ಲಿ 3 ದಿನಗಳ ಕಾಲ ರಾತ್ರಿಯನ್ನು ಹಗಲಾಗಿಸಿ ಕಬಡ್ಡಿಯ ವೈಭವ ರಂಗು ತರಲಿದೆ. ಕಬಡ್ಡಿ ಹಬ್ಬಕ್ಕೆ ಅಲ್ಲಲ್ಲಿ ಸ್ವಾಗತ ದ್ವಾರಗಳನ್ನು ಅಳವಡಿಸಲಾಗಿದೆ. ನಗರಕ್ಕೆ ಕಳೆ ತಂದಿದೆ. ದೀಪಗಳಿಂದ ಅಲಂಕಾರಗೊಂಡಿರುವ ದ್ವಾರಗಳು ಕಬಡ್ಡಿ ಹಬ್ಬ ಆರಂಭಕ್ಕೆ ವಾರದ ಮುನ್ನವೇ ತಲೆ ಎತ್ತಿದೆ. ಸುಳ್ಯದ ಪ್ರವೇಶ ದ್ವಾರ ಜ್ಯೋತಿ ವೃತ್ತದಲ್ಲಿ ಕೆಲ ದಿನಗಳ ಹಿಂದೆಯೇ
ಬೃಹತ್ ಸ್ವಾಗತ ದಾರ ಸ್ಥಾಪಿಸಲಾಗಿದೆ. ರಾತ್ರಿ ವೇಳೆಯಲ್ಲಿ ದೀಪಾಲಂಕಾರದಿಂದ ದ್ವಾರ ಕಂಗೊಳೊಸುತ್ತಾ ಸ್ವಾಗತ ಕೋರುತಿದೆ. ಕಬಡ್ಡಿ ಪಂದ್ಯಾಟ ನಡೆಯುವ ಕ್ರೀಡಾಂಗಣದ ಸುತ್ತ ಹಾಗೂ ಕಬಡ್ಡಿ ಸಂಘಟನಾ ಕಚೇರಿಯೂ ವಿದ್ಯುತ್ ದೀಪಗಳಿಂದ ಅಲಂಕೃತಗೊಂಡಿದೆ. ಸುಳ್ಯದಲ್ಲಿ ಪ್ರಥಮ ಬಾರಿಗೆ ಪ್ರೊ ಮಾದರಿಯ ರಾಷ್ಟ್ರೀಯ ಮಟ್ಟದ ಕಬಡ್ಡಿ ಪಂದ್ಯಾಟಕ್ಕೆ ದಿನ ಗಣನೆ ಆರಂಭಗೊಂಡಿದೆ. ಧ್ವನಿ ಬೆಳಕು ಮತ್ತು ಶಾಮಿಯಾನ ಮಾಲಕರ ಸಂಘ ಸುಳ್ಯ ಹಾಗೂ ರಾಷ್ಟ್ರೀಯ ಎ ಗ್ರೇಡ್ ಮ್ಯಾಟ್ ಕಬಡ್ಡಿ ಪಂದ್ಯಾಟ ಸಂಘಟನಾ ಸಮಿತಿಯ ಆಶ್ರಯದಲ್ಲಿ ರಾಷ್ಟ್ರೀಯ ಅಮೆಚೂರ್ ಕಬಡ್ಡಿ ಫೆಡರೇಷನ್ ಮತ್ತು ಕರ್ನಾಟಕ ಅಮೆಚೂರ್ ಕಬಡ್ಡಿ ಅಸೋಸಿಯೇಷನ್ ಸಹಭಾಗಿತ್ವದಲ್ಲಿ ಪುರುಷರ ಮತ್ತು ಮಹಿಳೆಯರ ಪ್ರೊ ಮಾದರಿಯ
ರಾಷ್ಟ್ರೀಯ ಎ ಗ್ರೇಡ್ ಮ್ಯಾಟ್ ಕಬಡ್ಡಿ ಚಾಂಪಿಯನ್ಶಿಪ್ 2023 ನ.17ರಿಂದ 19ರ ತನಕ ಸುಳ್ಯದ ಚೆನ್ನಕೇಶವ ದೇವಸ್ಥಾನದ ಬಳಿಯ ಪ್ರಭು ಮೈದಾನದಲ್ಲಿ ನಡೆಯಲಿದೆ. ದೀಪಾವಳಿಯ ಬಳಿಕ ಮತ್ತೊಂದು ದೀಪಾವಳಿ ಹಬ್ಬಕ್ಕೆ ಸುಳ್ಯ ಸಜ್ಜಾಗಿದೆ.









