ಸುಳ್ಯ:ಧ್ವನಿ ಬೆಳಕು ಮತ್ತು ಶಾಮಿಯಾನ ಮಾಲಕರ ಸಂಘ ಸುಳ್ಯ ಹಾಗೂ ರಾಷ್ಟ್ರೀಯ ಎ ಗ್ರೇಡ್ ಮ್ಯಾಟ್ ಕಬಡ್ಡಿ ಪಂದ್ಯಾಟ ಸಂಘಟನಾ ಸಮಿತಿಯ ಆಶ್ರಯದಲ್ಲಿ ರಾಷ್ಟ್ರೀಯ ಅಮೆಚೂರ್ ಕಬಡ್ಡಿ ಫೆಡರೇಷನ್ ಮತ್ತು ಕರ್ನಾಟಕ ಅಮೆಚೂರ್ ಕಬಡ್ಡಿ ಅಸೋಸಿಯೇಷನ್ ಸಹಭಾಗಿತ್ವದಲ್ಲಿ ಪುರುಷರ ಮತ್ತು ಮಹಿಳೆಯರ ಪ್ರೊ ಮಾದರಿಯ ರಾಷ್ಟ್ರೀಯ ಎ ಗ್ರೇಡ್ ಮ್ಯಾಟ್ ಕಬಡ್ಡಿ ಚಾಂಪಿಯನ್ಶಿಪ್ 2023 ನ.17ರಿಂದ 19ರ ತನಕ ಸುಳ್ಯದ ಚೆನ್ನಕೇಶವ ದೇವಸ್ಥಾನದ ಬಳಿಯ ಪ್ರಭು ಮೈದಾನದಲ್ಲಿ ನಡೆಯಲಿದೆ. ಕಬಡ್ಡಿ ಪಂದ್ಯಾಟಕ್ಕೆ ಸುಸಜ್ಜಿತ

ಇಂಡೋರ್ ಸ್ಟೇಡಿಯಂ ಸಿದ್ಧಗೊಳ್ಳುತಿದೆ. ಮಳೆ ಬರುವ ಸಾಧ್ಯತೆ ಇರುವುದರಿಂದ ಗ್ಯಾಲರಿ ಸೇರಿದಂತೆ ಪೂರ್ಣ ಪ್ರಮಾಣದಲ್ಲಿ ಇಂಡೋರ್ ಮಾದರಿಯಲ್ಲಿ ಕ್ರೀಡಾಂಗಣ ತಯಾರಿಸಲಾಗುತಿದೆ. 15 ಸಾವಿರ ಚದರ ಅಡಿ ವಿಸ್ತೀರ್ಣದಲ್ಲಿ ಕ್ರೀಡಾಂಗಣ ಸಜ್ಜುಗೊಳ್ಳುತಿದೆ. ಮ್ಯಾಟ್ ಕಬಡ್ಡಿ ಅಂಕಣ, ಒಂದು ಸಾವಿರ ಮಂದಿ ಕುಳಿತು ಕೊಳ್ಳಬಹುದಾದ ವಿಐಪಿ ಆಸನಗಳು, 4 ಸಾವಿರ ಮಂದಿ ಕುಳಿತುಕೊಳ್ಳಬಹುದಾದ ಗ್ಯಾಲರಿ ಸಿದ್ಧವಾಗುತಿದೆ. ಕ್ರೀಡಾಂಗಣ ಸುತ್ತ ಲೈಟಿಂಗ್ಸ್ ವ್ಯವಸ್ಥೆ, ಡಿಸ್ಪ್ಲೇ ಅಳವಡಿಸಲಾಗುವುದು. ಪೂರ್ಣ ಪ್ರಮಾಣದಲ್ಲಿ

ಪ್ರೊ ಮಾದರಿಯಲ್ಲಿ ಆಧುನಿಕ ತಂತ್ರಜ್ಞಾನದ ಬಳಕೆಯೊಂದಿಗೆ ಪಂದ್ಯಾಟ ನಡೆಯಲಿದೆ.
ಕ್ರೀಡಾಂಗಣ ನಿರ್ಮಾಣ ಕಾರ್ಯ ಭರದಿಂದ ಸಾಗಿದೆ. ಸುಮಾರು ಐದು ಸಾವಿರ ಮಂದಿ ಕುಳಿತು ಪಂದ್ಯಾಟ ವೀಕ್ಷಿಸಬಹುದಾದ ಒಳಾಂಗಣ ಕ್ರೀಡಾಂಗಣ ಸಿದ್ಧವಾಗುತಿದೆ ಎಂದು ರಾಷ್ಟ್ರೀಯ ಎ ಗ್ರೇಡ್ ಮ್ಯಾಟ್ ಕಬಡ್ಡಿ ಪಂದ್ಯಾಟ ಸಂಘಟನಾ ಸಮಿತಿಯ ಅಧ್ಯಕ್ಷ ಸಂಶುದ್ದೀನ್ ಜಿ.ಪಿ. ಭಾರತ್ ಶಾಮಿಯಾನ ಹಾಗೂ ಕಾರ್ಯದರ್ಶಿ ಗುರುದತ್ ನಾಯಕ್ ಮಾಹಿತಿ ನೀಡಿದ್ದಾರೆ.









