ಹಾಂಗ್ಝೌ: ಎದುರಾಳಿಗಳನ್ನು ನಿರಾಯಾಸದಿಂದ ಮಣಿಸಿದ ಭಾರತದ ಪುರುಷರ ಮತ್ತು ಮಹಿಳೆಯರ ತಂಡಗಳು ಏಷ್ಯನ್ ಕ್ರೀಡಾಕೂಟದ ಕಬಡ್ಡಿಯಲ್ಲಿ ಫೈನಲ್ ಪ್ರವೇಶಿಸಿದವು. ಶುಕ್ರವಾರ ನಡೆದ ಸೆಮಿಫೈನಲ್ ಪಂದ್ಯದಲ್ಲಿ ಪುರುಷರ ತಂಡ 61–14 ರಿಂದ ಪಾಕಿಸ್ತಾನ ವಿರುದ್ಧ ಗೆದ್ದರೆ, ಮಹಿಳೆಯರು 61–17 ರಿಂದ ನೇಪಾಳ ತಂಡವನ್ನು ಸೋಲಿಸಿದರು. ಆಕ್ರಮಣಕಾರಿ ಆಟವಾಡಿದ ಭಾರತ, ವಿರಾಮದ ವೇಳೆಗೆ 30–5 ರಿಂದ
ಮುನ್ನಡೆ ಸಾಧಿಸಿತ್ತು.ಪವನ್ ಸೆಹ್ರಾವತ್ ಪಂದ್ಯದುದ್ದಕ್ಕೂ ಗಮನ ಸೆಳೆದರು. ಭಾರತ ತಂಡ ಎದುರಾಳಿಗಳನ್ನು ಮೂರು ಸಲ ‘ಆಲೌಟ್’ ಮಾಡಿತು.ಏಷ್ಯನ್ ಗೇಮ್ಸ್ನಲ್ಲಿ ಏಳು ಸಲ ಚಿನ್ನ ಜಯಿಸಿರುವ ಭಾರತ ಪುರುಷರ ತಂಡ, 2018ರ ಜಕಾರ್ತಾ ಕೂಟದಲ್ಲಿ ಕಂಚಿನ ಪದಕ ಗೆಲ್ಲಲಷ್ಟೇ ಯಶಸ್ವಿಯಾಗಿತ್ತು. ಈ ಬಾರಿ ಫೈನಲ್ ಪ್ರವೇಶಿಸಿದ್ದು, ಚಿನ್ನ ಅಥವಾ ಬೆಳ್ಳಿ ಪದಕ ಖಚಿತಪಡಿಸಿಕೊಂಡಿದೆ.
ಶನಿವಾರ ನಡೆಯಲಿರುವ ಫೈನಲ್ನಲ್ಲಿ ಇರಾನ್ ವಿರುದ್ಧ ಪೈಪೋಟಿ ನಡೆಸಲಿದೆ.
ಮಹಿಳೆಯರ ವಿಭಾಗದಲ್ಲಿ ಕಳೆದ ಬಾರಿಯ ‘ರನ್ನರ್ ಅಪ್’ ಭಾರತ ತಂಡ ನೇಪಾಳ ತಂಡವನ್ನು ಐದು ಸಲ ‘ಆಲೌಟ್’ ಮಾಡಿ ಕ್ಷಿಪ್ರಗತಿಯಲ್ಲಿ ಪಾಯಿಂಟ್ಗಳನ್ನು ಪೇರಿಸಿತು. ಜಾರ್ಖಂಡ್ನ ಯುವ ಆಟಗಾರ್ತಿ ಅಕ್ಷಿಮಾ ಅವರು ರೇಡಿಂಗ್ನಲ್ಲಿ ಮಿಂಚಿದರು.
ಮಹಿಳೆಯರು ಚಿನ್ನದ ಪದಕಕ್ಕಾಗಿ ಚೀನಾ ತೈಪೆ ಜತೆ ಪೈಪೋಟಿ ನಡೆಸುವರು.