ಸುಳ್ಯ:ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಕಾಫಿ ಕೃಷಿ ಉತ್ತೇಜಿಸಲು ರೈತರಿಗೆ ಮಾರ್ಗದರ್ಶನ ನೀಡುವ ನಿಟ್ಟಿನಲ್ಲಿ ದ.ಕ.ಸಂಸದ ಕ್ಯಾಪ್ಟನ್ ಬ್ರಿಜೇಶ್ ಚೌಟ ಅವರ ನೇತೃತ್ವದಲ್ಲಿ ಕಾರ್ಯಾಗಾರ ‘ಕಾಫಿಕೊ’ ಆ.25ರಂದು ಸುಳ್ಯ ಸಿಎ ಬ್ಯಾಂಕ್ನ ಸಭಾಂಗಣದಲ್ಲಿ ನಡೆಯಲಿದೆ ಎಂದು ಬಿಜೆಪಿ ಮಂಡಲ ಸಮಿತಿ ಅಧ್ಯಕ್ಷ ವೆಂಕಟ್ ವಳಲಂಬೆ ಹೇಳಿದ್ದಾರೆ. ಸುಳ್ಯ ಪ್ರೆಸ್ ಕ್ಲಬ್ನಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು ಹಳದಿ ರೋಗದಿಂದ ಕಂಗೆಟ್ಟ ಅಡಿಕೆ ಬೆಳೆಗಾರರ ನೆರವಿಗೆ ನಿಲ್ಲುವ ಮಹತ್ತರ ಯೋಜನೆಯಾಗಿ ಕಾಫಿ ಬೆಳೆಯನ್ನು ಪ್ರೋತ್ಸಾಹಿಸಲು
ಯೋಜನೆ ರೂಪಿಸಲಾಗಿದೆ. ಲೋಕಸಭಾ ಚುನಾವಣಾ ಪೂರ್ವದಲ್ಲಿ ಅಡಿಕೆ ಬೆಳೆಗಾರರ ಸಮಸ್ಯೆಗಳ ಬಗ್ಗೆ ಅರಿತಿದ್ದ ಕ್ಯಾಪ್ಟನ್ ಚೌಟ ಅವರು ಸಂಸದರಾದ ಬಳಿಕ ಇದಕ್ಕೆ ಪರ್ಯಾಯವಾಗಿ ಕಾಫಿ ಬೆಳೆಸುವ ನಿಟ್ಟಿನಲ್ಲಿ ನಿರಂತರ ಪ್ರಯತ್ನ ನಡೆಸುತ್ತಾ ಬಂದಿದ್ದಾರೆ. ಇದೀಗ ಅಡಿಕೆ ತೋಟದಲ್ಲಿ ಉಪಬೆಳೆಯಾಗಿ ಕಾಫಿ ಬೆಳೆಯುವ ನಿಟ್ಟಿನಲ್ಲಿ ಸಲಹೆ ಮಾರ್ಗದರ್ಶನ ನೀಡಲು ಕಾರ್ಯಾಗಾರವನ್ನು ಏರ್ಪಡಿಸಲಾಗಿದೆ. ಕೃಷಿಕರು ಇದರ ಸದುಪಯೋಗ ಪಡಿಸಿಕೊಳ್ಳಬೇಕು ಎಂದು ಹೇಳಿದರು. ಸುಳ್ಯ ತಾಲೂಕಿನ ಕೆಲವು ಗ್ರಾಮಗಳಲ್ಲಿ ಈಗಾಗಲೇ ರೈತರು ಯಶಸ್ವಿಯಾಗಿ ಕಾಫಿ ಬೆಳೆಯನ್ನು ಬೆಳೆಸುತ್ತಿದ್ದಾರೆ ಎಂದು ವೆಂಕಟ್ ವಳಲಂವೆ ಹೇಳಿದರು.

‘ಕಾಪಿಕೊ’ ಕಾರ್ಯಾಗಾರದ ಸಂಚಾಲಕ ಸಂತೋಷ್ ಕುತ್ತಮೊಟ್ಟೆ ಮಾತನಾಡಿ ‘ಸುಳ್ಯ ತಾಲೂಕಿನಲ್ಲಿಯೂ ಕಾಫಿ ಬೆಳೆಗೆ ಸೂಕ್ತ ವಾತಾವರಣ ಇದೆ. ಇಲ್ಲಿಯೂ ಕಾಫಿ ಕೃಷಿ ಚೆನ್ನಾಗಿ ಬೆಳೆಯಬಲ್ಲುದು. ಈ ನಿಟ್ಟಿನಲ್ಲಿ
ಹಳದಿರೋಗದಿಂದ ಕೃಷಿ ನಾಶವಾದ ಕೃಷಿಕರಿಗೆ ಪರ್ಯಾಯವಾಗಿ ಕಾಫಿ ಬೆಳೆಸುವಲ್ಲಿ ರೈತರಿಗೆ ಆತ್ಮವಿಶ್ವಾಸ ಮೂಡಿಸಲು ಕಾರ್ಯಾಗಾರವನ್ನು ಏರ್ಪಡಿಸಲಾಗಿದೆ ಎಂದು ಹೇಳಿದರು. ಸಂಸದ ಕ್ಯಾಪ್ಟನ್ ಬ್ರಿಜೇಶ್ ಚೌಟ ಕಾರ್ಯಾಗಾರವನ್ನು ಉದ್ಘಾಟಿಸಲಿದ್ದಾರೆ.
ಮುಖ್ಯ ಅತಿಥಿಗಳಾಗಿ ಶಾಸಕಿ ಭಾಗೀರಥಿ ಮುರುಳ್ಯ, ಕಾಫಿ ಬೋರ್ಡ್ ಚೆಯರ್ಮೆನ್ ದಿನೇಶ್ ಎಂ.ಜೆ, ನಬಾರ್ಡ್ ಡಿಡಿಎಂ ಸಂಗೀತ ಕರ್ತ, ತೋಟಗಾರಿಕಾ ಇಲಾಖೆಯ ಉಪನಿರ್ದೇಶಕರಾದ ಮಂಜುನಾಥ್, ಕಾಫಿ ಬೋರ್ಡ್ ಆಫ್ ಇಂಡಿಯಾ ಉಪ ನಿರ್ದೇಶಕ ಡಾ.ವಿ.ಚಂದ್ರಶೇಖರ್ ಅತಿಥಿಗಳಾಗಿ ಭಾಗವಹಿಸಲಿದ್ದಾರೆ. ಸಂಪನ್ಮೂಲ ವ್ಯಕ್ತಿಯಾಗಿ ಸಕಲೇಶಪುರ 7 ಬೀನ್ ಟೀಂ ಚೆಯರ್ಮೆನ್ ಡಾ.ಧರ್ಮರಾಜ್ ಭಾಗವಹಿಸಲಿದ್ದಾರೆ ಎಂದು ಸಂತೋಷ್ ಕುತ್ತಮೊಟ್ಟೆ ವಿವರಿಸಿದರು.
ಸುದ್ದಿ ಗೋಷ್ಠಿಯಲ್ಲಿ ಕಾಪಿಕೊ ಕಾರ್ಯಾಗಾರದ ಸಹ ಸಂಚಾಲಕರಾದ ರಾಮಕೃಷ್ಣ ಭಟ್ ಕುರುಂಬುಡೇಲು, ಸುಳ್ಯ ತಾಲೂಕು ಕೃಷಿಕ ಸಮಾಜದ ಅಧ್ಯಕ್ಷ ಎ.ಟಿ.ಕುಸುಮಾಧರ, ಸಿಎ ಬ್ಯಾಂಕ್ ಅಧ್ಯಕ್ಷ ವಿಕ್ರಮ್.ಎ.ವಿ, ಮಾಜಿ ಅಧ್ಯಕ್ಷ ಸುಬೋದ್ ಶೆಟ್ಟಿ ಮೇನಾಲ,
ನಗರ ಪಂಚಾಯತ್ ಅಧ್ಯಕ್ಷೆ ಶಶಿಕಲಾ ನೀರಬಿದಿರೆ, ಜಯಪ್ರಕಾಶ್ ಮೊಗ್ರ, ಮೋಹನ್ ರಾಮ್ ಸುಳ್ಳಿ, ಸುಧಾಕರ ಕಾಮತ್, ಜಯರಾಮ ರೈ ಜಾಲ್ಸೂರು, ನಾರಾಯಣ ಶಾಂತಿನಗರ, ಶಿವಪ್ರಸಾದ್ ನಡುತೋಟ, ಸುದರ್ಶನ ಪಾತಿಕಲ್ಲು ಉಪಸ್ಥಿತರಿದ್ದರು.












