ವಯನಾಡ್:ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಮತ್ತೆ ಸ್ಪರ್ಧಿಸುತ್ತಿರುವ ಹಿನ್ನೆಲೆಯಲ್ಲಿ ರಾಷ್ಟ್ರಮಟ್ಟದಲ್ಲಿ ಗಮನ ಸೆಳೆದಿರುವ ವಯನಾಡಿನಲ್ಲಿ ಬಿಜೆಪಿ ಕೇರಳ ರಾಜ್ಯಾಧ್ಯಕ್ಷ ಕೆ.ಸುರೇಂದ್ರನ್ ಎನ್ ಡಿಎ ಅಭ್ಯರ್ಥಿಯಾಗಲಿದ್ದಾರೆ. ಈ ಬಾರಿ ಅಭ್ಯರ್ಥಿಯಾಗುವುದಿಲ್ಲ ಎಂದು ಹೇಳಿದ್ದ ರಾಜ್ಯಾಧ್ಯಕ್ಷರನ್ನೇ ಕಣಕ್ಕಿಳಿಸುವ ಮೂಲಕ ಸ್ಪರ್ಧೆಯನ್ನು ತೀವ್ರಗೊಳಿಸಲು
ಬಿಜೆಪಿ ಕೇಂದ್ರ ನಾಯಕತ್ವ ನಿರ್ಧರಿಸಿದೆ. ಇದರೊಂದಿಗೆ ವಯನಾಡಿನ
ಚುನಾವಣಾ ಕಣ ರಾಷ್ಟ್ರಮಟ್ಟದಲ್ಲಿ ಗಮನ ಸೆಳೆಯಲಿದೆ. ಎರ್ನಾಕುಲಂನಿಂದ ಕೆಎಸ್ ರಾಧಾಕೃಷ್ಣನ್, ಕೊಲ್ಲಂನಿಂದ ಚಿತ್ರನಟ ಜಿ.ಕೃಷ್ಣಕುಮಾರ್ ಮತ್ತು ಆಲತ್ತೂರಿನಿಂದ ಟಿ.ಎನ್ ಸರಸು ಅವರನ್ನೂ ಎನ್ಡಿಎ ಅಭ್ಯರ್ಥಿಗಳಾಗಿ ಘೋಷಿಸಲಾಗಿದೆ. ಇದರೊಂದಿಗೆ ಕೇರಳದ ಎಲ್ಲಾ 20 ಕ್ಷೇತ್ರಗಳಲ್ಲಿ ಎನ್ಡಿಎ ಅಭ್ಯರ್ಥಿಗಳಾಗಿದೆ. ಎಲ್ಲಾ ಪಕ್ಷಗಳು ಅಭ್ಯರ್ಥಿ ಘೋಷಣೆ ಪೂರ್ತಿಗೊಳಿಸಿದ ಕಾರಣ ರಾಜ್ಯದಲ್ಲಿ ಚುನಾವಣಾ ಪ್ರಚಾರ ಕಾವೇರಲಿದೆ. ರಾಷ್ಟ್ರ ರಾಜಕಾರಣದ ಪ್ರಮುಖ ನಾಯಕರಾದ ರಾಹುಲ್ ಗಾಂಧಿ ಮತ್ತು ಆನಿರಾಜ ಸ್ಪರ್ಧೆ ಮಾಡುವ ವಯನಾಡಿನಲ್ಲಿ ಸುರೇಂದ್ರನ್ ಅಭ್ಯರ್ಥಿಯಾಗುವುದರೊಂದಿಗೆ ಚುನಾವಣಾ ಕಣ ರಂಗೇರಲಿದೆ.
ಕಾಸರಗೋಡು ಲೋಕಸಭಾ ಕ್ಷೇತ್ರದಿಂದ ಎರಡು ಬಾರಿ ಲೋಕಸಭೆಗೆ ಹಾಗೂ ಮಂಜೇಶ್ವರದಿಂದ ಎರಡು ಬಾರಿ ವಿಧಾನಸಭೆಗೆ ಸ್ಪರ್ಧಿಸಿದ್ದ ಸುರೇಂದ್ರನ್ ಮಂಜೇಶ್ವರದಲ್ಲಿ ಕೇವಲ 89 ಮತಗಳಿಂದ ಸೋತಿದ್ದರು. 2019ರ ಲೋಕಸಭೆ ಚುನಾವಣೆಯಲ್ಲಿ ಕೆ.ಸುರೇಂದ್ರನ್ ಅವರು ಪತ್ತನಂತಿಟ್ಟ ಕ್ಷೇತ್ರದಲ್ಲಿ ಸ್ಪರ್ಧಿಸಿ ಸುಮಾರು ಮೂರು ಲಕ್ಷ ಮತಗಳನ್ನು ಗಳಿಸುವ ಮೂಲಕ ಎಡ ಮತ್ತು ಬಲ ರಂಗಗಳಿಗೆ ಆಘಾತ ನೀಡಿದ್ದರು. ವಿಧಾನಸಭಾ ಉಪಚುನಾವಣೆಯಲ್ಲಿ ಕೋನ್ನಿ ಕ್ಷೇತ್ರದಲ್ಲಿ ಸ್ಪರ್ಧಿಸಿ ಸುಮಾರು 40 ಸಾವಿರ ಮತಗಳನ್ನು ಗಳಿಸಿ ತಮ್ಮ ಶಕ್ತಿ ಪ್ರದರ್ಶಿಸಿದ್ದರು. 2021 ರ ವಿಧಾನಸಭಾ ಚುನಾವಣೆಯಲ್ಲಿ, ಸುರೇಂದ್ರನ್ ಮಂಜೇಶ್ವರಂ ಮತ್ತು ಕೊನ್ನಿ ಕ್ಷೇತ್ರಗಳಲ್ಲಿ ಸ್ಪರ್ಧಿಸಿದರು ಮತ್ತು ಮಂಜೇಶ್ವರಂನಲ್ಲಿ ಸುಮಾರು 67,000 ಮತಗಳನ್ನು ಗಳಿಸಿದರು.ಎರ್ನಾಕುಲಂ ಅಭ್ಯರ್ಥಿ ಕೆ.ಎಸ್. ರಾಧಾಕೃಷ್ಣನ್ ಅವರು 2019ರ ಲೋಕಸಭೆ ಚುನಾವಣೆಯಲ್ಲಿ ಆಲಪ್ಪುಳದಲ್ಲಿ ಎನ್ ಡಿಎ ಅಭ್ಯರ್ಥಿಯಾಗಿ ಸ್ಪರ್ಧಿಸಿದ್ದರು. ನಟರೂ ಆಗಿರುವ ಕೊಲ್ಲಂನ ಅಭ್ಯರ್ಥಿ ಕೃಷ್ಣಕುಮಾರ್ ಅವರು 2021 ರ ವಿಧಾನಸಭಾ ಚುನಾವಣೆಯಲ್ಲಿ ತಿರುವನಂತಪುರಂ ವಿಧಾನಸಭಾ ಕ್ಷೇತ್ರದ ಅಭ್ಯರ್ಥಿಯಾಗಿದ್ದರು. ಆಲತ್ತೂರಿನ ಅಭ್ಯರ್ಥಿ ಟಿ.ಎನ್.ಸರಸು ಅವರು ಸರ್ಕಾರಿ ವಿಕ್ಟೋರಿಯಾ ಕಾಲೇಜಿನ ಮಾಜಿ ಪ್ರಾಂಶುಪಾಲರು.









