ಸುಳ್ಯ:ಸುಳ್ಯ ತಾಲೂಕಿನಲ್ಲಿ ವಿವಿಧ ಗ್ರಾಮ ಪಂಚಾಯತ್ ವ್ಯಾಪ್ತಿಯಲ್ಲಿ ಜಲಜೀವನ್ ಮಿಷನ್ ಯೋಜನೆಯಲ್ಲಿ ನಡೆಯುತ್ತಿರುವ ಕಾಮಗಾರಿಯ ಪ್ರಗತಿ ಪರಿಶೀಲನಾ ಸಭೆ ಶಾಸಕಿ ಭಾಗೀರಥಿ ಮುರುಳ್ಯ ಅಧ್ಯಕ್ಷತೆಯಲ್ಲಿ ತಾಲೂಕು ಪಂಚಾಯತ್ ಸಭಾಂಗಣದಲ್ಲಿ ನಡೆಯಿತು. ಗ್ರಾ.ಪಂ.ವ್ಯಾಪ್ತಿಯಲ್ಲಿ ನಡೆಯುತ್ತಿರುವ ಕಾಮಗಾರಿ ಸಮರ್ಪಕವಾಗಿಲ್ಲ ಎಂದು ಸಭೆಯಲ್ಲಿ ಗ್ರಾ.ಪಂ. ಅಧ್ಯಕ್ಷರು ಹಾಗೂ ಉಪಾಧ್ಯಕ್ಷರು ಕಾಮಗಾರಿ ಬಗ್ಗೆ ಆಕ್ಷೇಪ ವ್ಯಕ್ತಪಡಿಸಿದರು. ಈ ಹಿನ್ನಲೆಯಲ್ಲಿ ಒಂದು ತಿಂಗಳೊಳಗೆ
ಗ್ರಾ.ಪಂ.ಗೆ ಭೇಟಿ ನೀಡಿ ಪಂಚಾಯತ್ ಸದಸ್ಯರಿದ್ದು ಸಭೆ ನಡೆಸಿ ಕಾಮಗಾರಿ ಕುರಿತು ವರದಿ ನೀಡುವಂತೆ ಶಾಸಕರು ಅಧಿಕಾರಿಗಳಿಗೆ ಸೂಚನೆ ನೀಡಿದರು. ಯೋಜನೆಯ ಪೈಪ್ ಲೈನ್ ಕಾಮಗಾರಿ ಅಸಮರ್ಪಕವಾಗಿ, ವಿದ್ಯುತ್ ಸಂಪರ್ಕ ಆಗಿಲ್ಲ ಎಂದು ಬಾಳಿಲ, ಐವರ್ನಾಡು, ಮಂಡೆಕೋಲು ಮತ್ತಿತರ ಗ್ರಾ.ಪಂ ಅಧ್ಯಕ್ಷರು ಹೇಳಿದರು. ಕಲ್ಮಡ್ಕ ಗ್ರಾಮ ಪಂಚಾಯತ್ ಅಧ್ಯಕ್ಷ ಮಹೇಶ್ ಭಟ್ ಕರಿಕ್ಕಳ ಮತನಾಡಿ ನಮ್ಮಲ್ಲಿ ಎರಡು ಕಾಮಗಾರಿ ಮಾತ್ರ ಹಸ್ತಾಂತರ ಆಗಿದೆ. ಈ ಕಾಮಗಾರಿಗಳು ಸಮರ್ಪಕ ಎಂದು ಅನಿಸುವುದಿಲ್ಲ.ಇದರ ಬಗ್ಗೆ ಥರ್ಡ್ ಪಾರ್ಟಿ ಇನ್ಸ್ಪೆಕ್ಷನ್ ಮಾಡುವುದು ಉತ್ತಮ ಹೇಳಿದರು.ಅವರ ಮಾತಿಗೆ
ದೇವಚಳ್ಳ ಗ್ರಾ.ಪಂ. ಅಧ್ಯಕ್ಷ ಶೈಲೇಶ್ ಅಂಬೆಕಲ್ಲು, ಕೊಲ್ಲಮೊಗ್ರ ಗ್ರಾ.ಪಂ. ಸದಸ್ಯ ಮಾಧವ ಚಾಂತಾಳ, ಐವರ್ನಾಡು ಗ್ರಾ.ಪಂ.ಉಪಾಧ್ಯಕ್ಷ ಬಾಲಕೃಷ್ಣ ಕೀಲಾಡಿ ಮೊದಲಾದವರು ಧ್ವನಿಗೂಡಿಸಿದರು. ಅರಂತೋಡು ಗ್ರಾ.ಪಂ.ವ್ಯಾಪ್ತಿಯಲ್ಲಿ 12 ಲಕ್ಷದ ಹೆಚ್ಚುವರಿ ಕೆಲಸ ಆಗಿದೆ. ಆ ಅನುದಾನವನ್ನು ಹೇಗೆ ಬರಿಸುವುದು ಹೇಗೆ ಎಂದು ಅರಂತೋಡು ಗ್ರಾ.ಪಂ.ಅಧ್ಯಕ್ಷ ಕೇಶವ ಅಡ್ತಲೆ ಪ್ರಶ್ನಿಸಿದರು. ಬೇಡಿಕೆ ಹೆಚ್ಚುವರಿ ಬಂದ ಕಾರಣ ಕೆಲಸ ಹೆಚ್ಚು ಆಗಿದೆ ಎಂದು ಇಂಜಿನಿಯರ್ ಮಣಿಕಂಟ ತಿಳಿಸಿದರು. ಹೆಚ್ಚುವರಿ ಆದ ಖರ್ಚನ್ನು ಜೆಜೆಎಂ ಮುಂದಿನ ಯೋಜನೆಯಲ್ಲಿ ಸೇರಿಸಿ ಎಂದು ಇ.ಒ. ರಾಜಣ್ಣ ಇಂಜಿನಿಯರ್ರಿಗೆ ಸಲಹೆ ನೀಡಿದರು.
ಗ್ರಾ.ಪಂ. ಅಧ್ಯಕ್ಷರಗಳು ಕಾಮಗಾರಿ ಕುರಿತು ಸಮಸ್ಯೆ ಹೇಳಿರುವುದರಿಂದ ಒಂದು ತಿಂಗಳಲ್ಲಿ ತಾಲೂಕಿನ ಪ್ರತೀ ಗ್ರಾ.ಪಂ. ಗಳಲ್ಲಿ ಸಭೆ ಮಾಡಿ ವರದಿ ನೀಡಬೇಕು. ಈಗ ಸಭೆಯಲ್ಲಿ ಸಮಸ್ಯೆ ಹೇಳಿಕೊಂಡ ಪಂಚಾಯತ್ಗಳಿಗೆ ಆದ್ಯತೆಯಲ್ಲಿ ಮೊದಲು ಹೋಗಿ ಸಭೆ ನಡೆಸಿ.ಇಂಜಿನಿಯರ್ಗಳು, ಕಾಮಗಾರಿ ನಡೆಸಿದ ಗುತ್ತಿಗೆದಾರರು ಜತೆಯಲ್ಲಿ ಇರಬೇಕು. ಸದಸ್ಯರು ಹೇಳಿದ ಸಮಸ್ಯೆಯನ್ನು ಆಲಿಸಿ ಪರಿಹಾರಕ್ಕೆ ವ್ಯವಸ್ಥೆ ಕಲ್ಪಿಸಬೇಕು ಎಂದು ಶಾಸಕರು ಸೂಚನೆ ನೀಡಿದರು.ಕುಡಿಯುವ ನೀರು ನೈರ್ಮಲ್ಯ ಇಲಾಖೆಯ ಎ.ಇ.ಇ. ರುಕ್ಕು ಕಾಮಗಾರಿ ಕುರಿತು ಮಾಹಿತಿ ನೀಡಿ ಮೂರು ಹಂತದಲ್ಲಿ ಅನುದಾನಗಳು ಮಂಜೂರುಗೊಂಡಿದ್ದು, ಮೊದಲ ಹಂತದಲ್ಲಿ 10 ಗ್ರಾ.ಪಂಗಳನ್ನು ಆಯ್ದುಕೊಂಡಿದ್ದೆವು. ಕೆಲವು ಕಡೆ ಪಂಚಾಯತ್ಗಳಿಗೆ ಹಸ್ತಾಂತರ ಆಗಿದೆ. ಇನ್ನೂ ಕೆಲವು ಕಡೆ ಕಾಮಗಾರಿ ಪ್ರಗತಿಯಲ್ಲಿದೆ ಎಂದು ಹೇಳಿದರು.
ತಾಲೂಕಿನ ವಿವಿಧ ಗ್ರಾಮ ಪಂಚಾಯತ್ಗಳ ಅಧ್ಯಕ್ಷರು, ಉಪಾಧ್ಯಕ್ಷರು, ಸದಸ್ಯರು ಹಾಗೂ ಪಿಡಿಒಗಳು ಸಭೆಯಲ್ಲಿ ಭಾಗವಹಿಸಿದ್ದರು. ತಹಶೀಲ್ದಾರ್ ಮಂಜುನಾಥ್, ಇ.ಒ. ರಾಜಣ್ಣ, ಗ್ರೇಡ್ 2 ತಹಶೀಲ್ದಾರ್ ಮಂಜುನಾಥ್, ಕುಡಿಯುವ ನೀರು ನೈರ್ಮಲ್ಯ ಇಲಾಖೆಯ ಎ.ಇ.ಇ. ರುಕ್ಕು ವೇದಿಕೆಯಲ್ಲಿದ್ದರು.