*ಗಂಗಾಧರ ಕಲ್ಲಪಳ್ಳಿ.
ಸುಳ್ಯ:ಹಳದಿ ಎಲೆ ರೋಗ, ಎಲೆಚುಕ್ಕಿ ರೋಗ ಬಾದಿಸಿ ಅಡಿಕೆ ಕೃಷಿ ನಾಶವಾಗಿ ಕೈಗೆ ಬಂದ ತುತ್ತು ಬಾಯಿಗಿಲ್ಲ ಎಂಬ ಸ್ಥಿತಿ ನಿರ್ಮಾಣವಾದಾಗ ಪರ್ಯಾಯ ಕೃಷಿ ಹುಡುಕುವುದು ಕೃಷಿಕರಿಗೆ ಅನಿವಾರ್ಯವಾಗಿದೆ. ಇದೀಗ ಅಡಿಕೆ ಕೃಷಿಗೆ ಹಳದಿ ರೋಗ, ಎಲೆ ಚುಕ್ಕಿ ರೋಗದಿಂದ ಇಳುವರಿ ಕಡಿಮೆಯಾಗಿ ನಷ್ಟದ ಹಾದಿ ಹಿಡಿದಾಗ ಪರ್ಯಾಯವಾಗಿ ಜಾಯಿಕಾಯಿ ಬೆಳೆಸುವ ಮೂಲಕ ಕೃಷಿಯಲ್ಲಿ ನೂತನ ಪ್ರಯೋಗ ನಡೆಸುತ್ತಿದ್ದಾರೆ ಪ್ರಗತಿಪರ ಕೃಷಿಕರಾದ ಸುಳ್ಯ ಅರಂಬೂರಿನ ಭಾಸ್ಕರನ್ ನಾಯರ್ ಮಧುವನ. ತನ್ನ ಅಡಿಕೆ, ತೆಂಗಿನ ತೋಟದ ಮಧ್ಯೆ ಮಿಶ್ರ ಬೆಳೆಯಾಗಿ
ನೂರಕ್ಕೂ ಅಧಿಕ ಜಾಯಿಕಾಯಿ ಗಿಡ ಬೆಳೆಸಿದ್ದಾರೆ.ಉತ್ತಮ ಬೇಡಿಕೆ ಇರುವುದು ಹಾಗೂ ಉತ್ತಮ ದರ ಲಭಿಸುತ್ತಿರುವುದು ಜಾಯಿ ಕಾಯಿ ಕೃಷಿ ನಿರೀಕ್ಷೆ ಹುಟ್ಟಿಸಿದೆ ಎನ್ನುತ್ತಾರೆ ಭಾಸ್ಕರನ್ ನಾಯರ್. ಗಿಡ ನೆಟ್ಟು ಮೂರು ವರ್ಷದಲ್ಲಿ ಫಸಲು ಬರಲು ಆರಂಭಿಸಿರುವ ಜಾಯಿಕಾಯಿ ಗಿಡದಲ್ಲಿ ಈ ನಾಲ್ಕನೇ ವರ್ಷದಲ್ಲಿ ಉತ್ತಮ ಹೂವು ಮತ್ತು ಕಾಯಿ ಕಂಡು ಬಂದಿದೆ. ಕಡಿಮೆ ಖರ್ಚು ಮತ್ತು ಕಡಿಮೆ ನಿರ್ವಹಣೆಯಲ್ಲಿ ಉತ್ತಮ ಆದಾಯ ಬರುವುದರಿಂದ ಜಾಯಿಕಾಯಿ ನಿರೀಕ್ಷೆ ಹೆಚ್ಚಿಸಿದೆ. ಸಾಂಬಾರ ಬೆಳೆಯಾದ ಜಾಯಿಕಾಯಿಗೆ ಎಲ್ಲೆಡೆ ಉತ್ತಮ ಬೇಡಿಕೆ ಮತ್ತು ಮಾರುಕಟ್ಟೆ ಇದೆ. ಸುಳ್ಯದಲ್ಲಿಯೂ ಉತ್ತಮ ಮಾರುಕಟ್ಟೆ ಲಭ್ಯವಿದೆ.
ಈ ಬಾರಿ ಜಾಯಿಕಾಯಿ ಮಾರಾಟ ಮಾಡಿದ ಸಂದರ್ಭದಲ್ಲಿ ಸುಳ್ಯದಲ್ಲಿ ಜಾಯಿಕಾಯಿ ಕೆಜಿಗೆ 250 ಮತ್ತು ಜಾಯಿಪತ್ರೆಗೆ ಕೆಜಿಗೆ 1500 ರೂ ದರ ಲಭಿಸಿದೆ ಎನ್ನುತ್ತಾರೆ ಭಾಸ್ಕರನ್ ನಾಯರ್.
ಭಾಸ್ಕರನ್ ನಾಯರ್ ತನ್ನ ತೋಟದ ಜಾಯಿಕಾಯಿ ಗಿಡದ ಆರೈಕೆಯಲ್ಲಿ
ಕೋಟಯಂನ ನರ್ಸರಿಯಿಂದ ಉತ್ತಮ ಗುಣಮಟ್ಟದ ಜಾಯಿಕಾಯಿ ಗಿಡಗಳನ್ನು ತಂದು ಇವರು ಜಾಯಿಕಾಯಿ ಕೃಷಿ ಆರಂಭಿಸಿದರು. ಗಿಡ ನೆಟ್ಟು ಚೆನ್ನಾಗಿ ನಿರ್ವಹಣೆ ಮಾಡಿದ ಪರಿಣಾಮ ಪಸಂದಾಗಿ ಬೆಳೆದ ಜಾಯಿಕಾಯಿ ಗಿಡ ಮೂರು ವರ್ಷದಲ್ಲಿ ಫಸಲು ನೀಡಲು ಆರಂಭಿಸಿದೆ.
ಗಿಡ ನೆಡುವುದು-ನಿರ್ವಹಣೆ ಹೇಗೆ.?
ನಿರ್ದಿಷ್ಟ ಅಂತರದಲ್ಲಿ ಅಡಿಕೆಗೆ ಹೊಂಡ ತೆಗೆಯುವಂತೆ ಎರಡೂವರೆ ಅಡಿ ಆಳದಲ್ಲಿ ಹೊಂಡ ತೆಗೆದು ಅದನ್ನು ಬೇವಿನ ಹಿಂಡಿ, ಮತ್ತಿತರ ಸಾವಯವ ಗೊಬ್ಬರ ಹಾಕಿ ಮಿಕ್ಸ್ ಮಾಡಿ ಅದರಲ್ಲಿ ಗಿಡ ನೆಡಬೇಕು. ಉತ್ತಮ ನೀರು ಮತ್ತು ನೆರಳು ಬೇಕಾಗಿದೆ. ಕಾನಕಜೆ ಗಿಡಕ್ಕೆ ಜಾಯಿಕಾಯಿ ಗಿಡ ಕಸಿ ಕಟ್ಟುವ ಮೂಲಕ ಉತ್ತಮ ಗುಣಮಟ್ಟದ ಜಾಯಿಕಾಯಿ ಗಿಡಗಳನ್ನು ತಯಾರು ಮಾಡಲಾಗುತ್ತದೆ. ಇದು ವರುಷ ಹೋದಂತೆ ಮರವಾಗಿ ಬೆಳೆಯುತ್ತದೆ. ಒಂದು ಜಾಯಿಕಾಯಿ ಮರ ಸುಮಾರು 100 ವರ್ಷಕ್ಕಿಂತಲೂ ಹೆಚ್ಚು ಕಾಲ ಬಾಳ್ವಿಕೆ ಬರುತ್ತದೆ ಎನ್ನುತ್ತಾರೆ ಭಾಸ್ಕರನ್ ನಾಯರ್. ಸಾಮಾನ್ಯವಾಗಿ ನವಂಬರ್ ತಿಂಗಳ ವೇಳೆಗೆ ಹೂಬಿಟ್ಟು
ಮಿಡಿಯಾಗಲು ಆರಂಭಿಸುವ ಜಾಯಿಕಾಯಿ ಬೆಳೆಯಲು ಸುಮಾರು 8-9 ತಿಂಗಳ ಕಾಲ ಬೇಕು. ಮೇ-ಆಗಸ್ಟ್ ಅವಧಿಯಲ್ಲಿ ಫಸಲು ಕೊಯ್ಲಿಗೆ ಬರುತ್ತದೆ. ಆಗಸ್ಟ್ ವೇಳೆಗೆ ಹೆಚ್ಚು ಫಸಲು ಲಭ್ಯವಾಗುತ್ತದೆ. ಜಾಯಿಕಾಯಿ ಗಿಡಗಳನ್ನು ತಯಾರಿಸಿ ಅಗತ್ಯ ಇದ್ದವರಿಗೆ ಭಾಸ್ಕರನ್ ನಾಯರ್ ಸರಬರಾಜು ಮಾಡುತ್ತಾರೆ.
ಶೇಖರಣೆ ಮಾಡಬಹುದು:
ಜಾಯಿಕಾಯಿ ಕೊಯ್ದು ಜಾಯಿಕಾಯಿ, ಜಾಯಿಪತ್ರೆ ಬೇರ್ಪಡಿಸಿ ಡ್ರೈಯರ್ನಲ್ಲಿ ಅಥವಾ ಬಿಸಿಲಿನಲ್ಲಿ ಹಾಕಿ ಒಣಗಿಸಬಹುದು. ಒಣಗಿಸಿ ಅದನ್ನು ಶೇಖರಿಸಿ ಇಡಬಹುದು.ಉತ್ತಮ ದರ ದೊರೆಯುವ ಸಂದರ್ಭದಲ್ಲಿ ಮಾರಾಟ ಮಾಡುವ ಅವಕಾಶ ಇದೆ.160 ಜಾಯಿಕಾಯಿ ಒಂದು ಕೆಜಿ ತೂಗುತ್ತದೆ. 400 ಪತ್ರೆ ಒಂದು ಕೆಜಿ ಬರುತ್ತದೆ ಎಂದು ಅವರು ಹೇಳುತ್ತಾರೆ.
ಮಿಶ್ರ ಬೆಳೆಯ ಸಮಗ್ರ ಕೃಷಿ:
ಭಾಸ್ಕರನ್ ನಾಯರ್ ತನ್ನ ಐದು ಎಕ್ರೆ ಕೃಷಿ ಭೂಮಿಯಲ್ಲಿ ಅಡಿಕೆ, ತೆಂಗು, ರಬ್ಬರ್, ಕರಿಮೆಣಸು, ಬಾಳೆ, ಕೊಕ್ಕೊ, ಜಾಯಿಕಾಯಿ, ವೆನಿಲ್ಲಾ ಹೀಗೆ ಎಲ್ಲಾ ರೀತಿಯ ಬೆಳೆಗಳನ್ನೂ ಬೆಳೆಯುತ್ತಾರೆ. ಜಾಯಿ ಕಾಯಿಯಂತಹಾ ಕೃಷಿಯನ್ನು ಪ್ರಾಯೋಗಿಕವಾಗಿ ಮಾಡುತ್ತಾರೆ. ಜಾಯಿ ಕಾಯಿಗೆ ಮಂಗ, ಆನೆ ಮತ್ತಿತರ ಕಾಡುಪ್ರಾಣಿಗಳ ಹಾವಳಿಯೂ ಕಡಿಮೆ ಎನ್ನುತ್ತಾರೆ ಅವರು.
ಜಾಯಿಕಾಯಿ ಕೃಷಿಯ ಬಗ್ಗೆ:
ಜಾಯಿಕಾಯಿ ಬಹು ವಾರ್ಷಿಕ ದೀರ್ಘಕಾಲಿಕ ಬೆಳೆ. ಒಂದೇ ಮರದಲ್ಲಿ ಜಾಯಿಕಾಯಿ ಮತ್ತು ಜಾಯಿ ಪತ್ರೆ ಎಂಬ ಎರಡು ಪ್ರಮುಖ ಸಂಬಾರ ಪದಾರ್ಥಗಳಿರುವುದು ಇದರ ವಿಶೇಷ. ಇವುಗಳಿಗೆ ವರ್ಷದ ಎಲ್ಲ ಸಮಯದಲ್ಲೂ ಬಹುಬೇಡಿಕೆ ಇರುತ್ತವೆ. ಭಾರತದ ಜಾಯಿಕಾಯಿ ಉತ್ಪಾದನೆಯ ಅತೀ ಹೆಚ್ಚು ಭಾಗವನ್ನು ಕೇರಳದಲ್ಲಿ ಉತ್ಪಾದನೆ ಮಾಡಲಾಗುತ್ತದೆ. ಕರ್ನಾಟಕದಲ್ಲಿಯೂ ಕೆಲ ಭಾಗದಲ್ಲಿ ಸಣ್ಣ ಪ್ರಮಾಣದಲ್ಲಿ ಜಾಯಿಕಾಯಿ ಉತ್ಪಾದಿಸಲಾಗುತ್ತದೆ.
ಜಾಯಿಕಾಯಿಯ ತಿರುಳು ಮತ್ತು ಪತ್ರೆಯನ್ನು ಅಡುಗೆಗಳಲ್ಲಿ ಸಂಬಾರ ಪದಾರ್ಥವಾಗಿ, ಸಿಹಿ ತಿಂಡಿ, ಪಾನೀಯಗಳಲ್ಲಿ ಸುವಾಸನೆಯ ವೃದ್ಧಿಗಾಗಿ, ಔಷಧ, ಸುಗಂಧ ದ್ರವ್ಯ, ಶ್ಯಾಂಪೂ, ಸೋಪು, ಕೀಟನಾಶಕಗಳ ತಯಾರಿಯಲ್ಲೂ ಬಳಸಲಾಗುತ್ತದೆ. ಜಾಯಿಕಾಯಿ ಹಣ್ಣಿನ ಹೊರಭಾಗದ ಹೊಂಬಣ್ಣದ ಸಿಪ್ಪೆಯನ್ನು ಬಳಸಿ ಜ್ಯಾಮ್, ಉಪ್ಪಿನ ಕಾಯಿ, ಇತ್ಯಾದಿಗಳನ್ನು ಮಾಡುತ್ತಾರೆ. ಜಾಯಿಕಾಯಿ ಮರ ಏಕಲಿಂಗದ ಹೂ ಬಿಡುವ ಸಸ್ಯ ವರ್ಗಕ್ಕೆ ಸೇರಿದ್ದು, ಇದರಲ್ಲಿ ಗಂಡು ಮತ್ತು ಹೆಣ್ಣು ಎಂಬ ಪ್ರತ್ಯೇಕ ಗಿಡಗಳಿವೆ. ಇದಕ್ಕೆ ಖರ್ಚು ಕಡಿಮೆ, ಆದಾಯ ಅಧಿಕ.ಹವಾಮಾನ, ಮಣ್ಣು
ಜಾಯಿಕಾಯಿ ಮೂಲತಃ ಉಷ್ಣ ವಲಯದಲ್ಲಿ ಬೆಳೆಯುವ ಸಸ್ಯ. ನೆರಳಿದ್ದರೆ ಉತ್ತಮ. ಸದಾ ತೇವಾಂಶವಿರುವ ಕೆಂಪು, ಕಪ್ಪು ಮಣ್ಣುಗಳಲ್ಲಿ ಇದನ್ನು ನಾಟಿ ಮಾಡಬಹುದು. ಜಾಯಿಕಾಯಿ ಸಸಿ ನೆಡಲು ಜೂನ್- ಜುಲೈ ತಿಂಗಳುಗಳು ಸೂಕ್ತ ಕಾಲ. ಕಸಿ ಕಟ್ಟುವುದಾದರೆ
ಆಗಸ್ಟ್- ಸೆಪ್ಟಂಬರ್ ಅವಧಿ ಉತ್ತಮ. ಕಸಿ ಕಟ್ಟಿದ ಗಿಡವನ್ನು ಮುಂದಿನ ವರ್ಷ ನಾಟಿ ಮಾಡುವ ವರೆಗೆ ಕಸಿ ಕಟ್ಟಿದ ಜಾಗದವರೆಗೆ ಮಣ್ಣಿನಿಂದ ಮುಚ್ಚಿ ನೆಡಬೇಕು.
ಜಾಯಿಕಾಯಿಗೆ ಗೊಬ್ಬರವಾಗಿ ಆಡಿನ ಹಿಕ್ಕೆ, ಹಟ್ಟಿಗೊಬ್ಬರ, ನೆಲಗಡಲೆ ಹಿಂಡಿ, ಕಹಿಬೇವಿನ ಹಿಂಡಿ, ಸುಡುಮಣ್ಣು, ಬೂದಿ, ಎರೆಹುಳ ಗೊಬ್ಬರ ಇತ್ಯಾದಿಗಳನ್ನು ಬಳಸಬಹುದು.
ನಾಟಿ ಮಾಡುವಾಗ ಒಂದೂವರೆ ಅಡಿಗಿಂತ ಹೆಚ್ಚು ಎತ್ತರ ಬೆಳೆದಿರುವ ಗಿಡಗಳನ್ನು ಆಯ್ಕೆ ಮಾಡಿಕೊಳ್ಳಬೇಕು. ಎರಡು ಅಡಿ ಉದ್ದ , ಅಗಲ ಮತ್ತು ಆಳದ ಗುಂಡಿ ತೋಡಿ ಅದಕ್ಕೆ ಸ್ವಲ್ಪ ಸುಡು ಮಣ್ಣು, ಕಹಿ ಬೇವಿನ ಹಿಂಡಿ ಹಾಕಿ ಗಿಡ ನೆಟ್ಟು ಬುಡಕ್ಕೆ ಸ್ವಲ್ಪ ಹಟ್ಟಿಗೊಬ್ಬರ ಹಾಕಬೇಕು.
ಮಳೆ ಸರಿಯಾಗಿ ಬರದಿದ್ದರೆ ಎರಡು ದಿನಗಳಿಗೊಮ್ಮೆ ನೀರುಣಿಸಬೇಕು. ವರ್ಷಕ್ಕೆ ಎರಡು ಬಾರಿ ಗೊಬ್ಬರ ನೀಡಿದರೆ ಗಿಡ ಬೇಗನೆ ಫಸಲು ಸಿಗುವುದು. ಗಂಡು ಗಿಡಗಳ ಹಾವಳಿ ತಡೆಯಲು ಕಸಿ ಕಟ್ಟಿಯೂ
ಹೊಸಗಿಡಗಳನ್ನು ಬೆಳೆಸುತ್ತಾರೆ. (ಗಂಡು ಗಿಡದಲ್ಲಿ ಹೂವು, ಕಾಯಿ ಬರುವುದಿಲ್ಲ) ಕಸಿ ಗಿಡ ಮೂರಿಂದ ನಾಲ್ಕು ವರ್ಷಗಳಲ್ಲಿ ಫಲ ನೀಡಿದರೆ, ಬೀಜದಿಂದ ಹುಟ್ಟಿದ ಸಸಿಗಳು 5ರಿಂದ 6 ವರ್ಷಗಳಲ್ಲಿ ಫಸಲು ನೀಡುತ್ತವೆ. ಹಣ್ಣಿನೊಳಗೆ ಸುಂದರವಾದ ಕೆಂಪು ಬಣ್ಣದ ಪತ್ರೆಯನ್ನು ಕಾಣಬಹುದು.ಮರದಲ್ಲಿ ಹಣ್ಣಾಗಿ ಬಿರಿದ ಕಾಯಿಗಳು ತನ್ನಷ್ಟಕ್ಕೇ ಕೆಳಕ್ಕೆ ಬೀಳುತ್ತವೆ. ಇವುಗಳನ್ನು ಹೆಕ್ಕಿ ಪತ್ರೆ ಹಾಗೂ ಕಾಯಿ ಬೇರ್ಪಡಿಸಿ, ಒಣಗಿಸಿ ಬಳಿಕ ಮಾರಾಟ ಮಾಡಲಾಗುತ್ತದೆ. ಮಳೆಗಾಲದಲ್ಲಿ ಬೀಳುವಾಗ ಪತ್ರೆ ಹಾಳಾಗುವುದರಿಂದ ಪ್ರತಿ 2-3 ದಿನಗಳಿಗೊಮ್ಮೆ ಕೊಯ್ಲು ಮಾಡಬೇಕಾಗುತ್ತದೆ.