ರಾಂಚಿ: ಜಾರ್ಖಂಡ್ನ ನೂತನ ಮುಖ್ಯಮಂತ್ರಿಯಾಗಿ ಜಾರ್ಖಂಡ್ ಮುಕ್ತಿ ಮೋರ್ಚಾ ಪಕ್ಷದ (ಜೆಎಂಎಂ) ಚಂಪೈ ಸೊರೇನ್ ಅವರು ಶುಕ್ರವಾರ ಪ್ರಮಾಣವಚನ ಸ್ವೀಕರಿಸಿದರು.ಇಲ್ಲಿನ ರಾಜಭವನದಲ್ಲಿ ನಡೆದ ಸಮಾರಂಭದಲ್ಲಿ ರಾಜ್ಯಪಾಲ ಸಿ.ಪಿ. ರಾಧಾಕೃಷ್ಣನ್ ಅವರು ಪ್ರತಿಜ್ಞಾವಿಧಿ ಬೋಧಿಸಿದರು.ಚಂಪೈ ಅವರ ಜತೆ ಕಾಂಗ್ರೆಸ್ನ ಅಲಂಗಿರ್ ಆಲಂ ಹಾಗೂ
ಆರ್ಜೆಡಿಯಯ ಸತ್ಯಾನಂದ್ ಭೋಕ್ತ ಅವರು ಸಚಿವರಾಗಿ ಪ್ರಮಾಣ ವಚನ ಸ್ವೀಕರಿಸಿದರು.ರಾಜಭವನದ ದರ್ಬಾರ್ ಹಾಲ್ನಲ್ಲಿ ನಡೆದ ಸಮಾರಂಭದಲ್ಲಿ ಜೆಎಂಎಂ ನೇತೃತ್ವದ ಮೈತ್ರಿಕೂಟದ ಹಿರಿಯ ನಾಯಕರು ಹಾಜರಿದ್ದರು. ಬುಡಕಟ್ಟು ಜನಾಂಗಕ್ಕೆ ಸೇರಿದ 67 ವರ್ಷದ ಚಂಪೈ ಅವರು ರಾಜ್ಯದ 12ನೇ ಮುಖ್ಯಮಂತ್ರಿ ಎನಿಸಿಕೊಂಡರು.
ಹಣ ಅಕ್ರಮ ವರ್ಗಾವಣೆ ಸಂಬಂಧ ಇ.ಡಿ ತನಿಖೆ ಹಿನ್ನಲೆಯಲ್ಲಿ ಹೇಮಂತ್ ಸೊರೇನ್ ಅವರು ಮುಖ್ಯಮಂತ್ರಿ ಸ್ಥಾನಕ್ಕೆ ರಾಜೀನಾಮೆ ನೀಡಿದ ಬಳಿಕ, ಚಂಪೈ ಸೊರೇನ್ ಅವರನ್ನು ಶಾಸಕಾಂಗ ಪಕ್ಷದ ನಾಯಕನನ್ನಾಗಿ ಆಯ್ಕೆ ಮಾಡಲಾಗಿತ್ತು.









