ಸುಳ್ಯ: ಜಿಲ್ಲಾ ಉಸ್ತುವಾರಿ ಸಚಿವ ದಿನೇಶ್ ಗುಂಡೂರಾವ್ ಅವರ ನೇತೃತ್ವದಲ್ಲಿ ಮಂಗಳವಾರ ಸುಳ್ಯದಲ್ಲಿ ಜಿಲ್ಲಾ ಮಟ್ಟದ ಜನತಾದರ್ಶನ ಕಾರ್ಯಕ್ರಮ ನಡೆಯಿತು. ಸುಳ್ಯ ಕೆವಿಜಿ ಪುರಭವನದಲ್ಲಿ ನಡೆದ ಜನತಾ ದರ್ಶನ ಕಾರ್ಯಕ್ರಮದಲ್ಲಿ ಜಿಲ್ಲೆಯ ವಿವಿಧ ಭಾಗಗಳಿಂದ ನೂರಾರು ಸಾರ್ವಜನಿಕರು ಕುಂದುಕೊರತೆ, ಅಹವಾಲುಗಳನ್ನು ಉಸ್ತುವಾರಿ ಸಚಿವರ ಮುಂದೆ ಮಂಡಿಸಿದರು. ಅಹವಾಲು ಸ್ವೀಕರಿಸಿದ ಸಚಿವರು ಪರಿಹಾರ ಒದಗಿಸಲು ಸೂಚಿಸಿದರು. 300ಕ್ಕೂ ಅಧಿಕ ಅರ್ಜಿಗಳನ್ನು ಸಲ್ಲಿಸಲಾಯಿತು.ಸುಳ್ಯ ತಾಲೂಕಿನ ಆಲೆಟ್ಟಿ ಬಡ್ಡಡ್ಕ ಭಾಗ ಸೇರಿದಂತೆ
ವಿವಿಧ ಭಾಗಗಳಿಗೆ ಕೆಎಸ್ಆರ್ಟಿಸಿ ಬಸ್ ವ್ಯವಸ್ಥೆ ಮಾಡಬೇಕು, ಸುಳ್ಯದಿಂದ ಮಂಗಳೂರಿಗೆ ಹೆಚ್ಚುವರಿ ಬಸ್ ವ್ಯವಸ್ಥೆ ಮಾಡಬೇಕು, ನಗರದಲ್ಲಿ ಶುದ್ಧ ಕುಡಿಯುವ ನೀರಿನ ವ್ಯವಸ್ಥೆ ಮಾಡಬೇಕು,
ವಿದ್ಯುತ್ ಅವಘಡದಲ್ಲಿ ಮೃತಪಟ್ಟವರಿಗೆ ಪರಹಾರ, ಸುಳ್ಯ ಕ್ರೀಡಂಗಣಕ್ಕೆ 2 ಕೋಟಿ ಅನುದಾನ ಒದಗಿಸಬೇಕು,
ಕಾಲು ಸಂಕ, ತಡೆಗೋಡೆ, ರಸ್ತೆ ಕಾಂಕ್ರಿಟೀಕರಣಕ್ಕೆ ಅನುದಾನ ಕೋರಿ ಹಲವು ಮನವಿ ಸಲ್ಲಿಸಲಾಯಿತು. ಪಂಜ ಆರೋಗ್ಯ ಕೇಂದ್ರ ಸಮುದಾಯ ಆರೋಗ್ಯ ಸಮುದಾಯ ಆರೋಗ್ಯ ಕೇಂದ್ರವಾಗಿ ಮೇಲ್ದರ್ಜೆಗೇರಿಸಲು, ತೊಡಿಕಾನ ಉಪಕೇಂದ್ರ ಕಟ್ಟಡ ನಿರ್ಮಾಣ ಮಾಡಿ ಸಿಬ್ಬಂದಿ ನೇಮಕಕ್ಕೆ ಮನವಿ ಸಲ್ಲಿಸಲಾಯಿತು. ಸುಳ್ಯ ನಗರದಲ್ಲಿ ಫಾರಂ ನಂ.3 ಸಮಸ್ಯೆ ಸರಿಪಡಿಸಬೇಕು, ಕಟ್ ಕನ್ವರ್ಷನ್ ಆಗದೇ ಇರುವ ಸಮಸ್ಯೆ

ಪರಿಹರಿಸಬೇಕು, ಸೂಡಾ ನಿಯಮ ಸರಳೀಕರಣ ಮಾಡಬೇಕು, ಸುಳ್ಯ ನಗರದಲ್ಲಿ ನಿವೇಶನಕ್ಕೆ ಅರ್ಜಿ ಸಲ್ಲಿಸಿದ 450 ಮಂದಿಗೆ ನಿವೇಶನ ನೀಡಬೇಕು, ಅರಣ್ಯ ಸಮಸ್ಯೆ ಸಲ್ಲಿಸಲಾಯಿತು. ತಿರಸ್ಕರಿಸಬಾರದು ಸರ್ವೆ ನಡೆಸಿ ಅರ್ಹರಿಗೆ ನೀಡಬೇಕು ಇತ್ಯಾದಿ ಮನವಿಗಳನ್ನು ಸಲ್ಲಿಸಲಾಯಿತು.ಎಪಿಎಲ್ ಕಾರ್ಡ್ದಾರರಿಗೆ 10 ಕೆಜಿ ನೀಡುವ ವ್ಯವಸ್ಥೆ ಇದ್ದರೂ ಅದು ದೊರಕುತ್ತಿಲ್ಲ. ಅದರ ವಿತರಣೆಗೆ ಕ್ರಮ ಕೈಗೊಳ್ಳಬೇಕು.ಜಟ್ಟಿಪಳ್ಳ-ಕೊಡಿಯಾಲಬೈಲು-ದುಗ್ಗಲಡ್ಕ ರಸ್ತೆ ಅಭಿವೃದ್ಧಿಗೆ ಅನುದಾನ ಒದಗಿಸಬೇಕು,ಕಡಬ ತಾಲೂಕಿನಲ್ಲಿ ವಿವಿಧ ಕಚೇರಿಗಳ ಕಾರ್ಯಾರಂಭಕ್ಕೆ ಕ್ರಮ ಕೈಗೊಳ್ಳಬೇಕು ಎಂದು ಮನವಿ ಸಲ್ಲಿಸಲಾಯಿತು.
ಕಲ್ಚರ್ಪೆಯಲ್ಲಿ ಕುಡಿಯುವ ನೀರಿಗೆ ವಿದ್ಯುತ್ ಸಂಪರ್ಕ, ತಡೆಗೋಡೆ ನಿರ್ಮಾಣಕ್ಕೆ ಮನವಿ ಸಲ್ಲಿಸಲಾಯಿತು. ಸುಳ್ಯ ಹಾಗೂ ಕಡಬ ತಾಲೂಕಿನ ಆನೆ ಹಾವಳಿಗೆ ಪರಿಹಾರ ಒದಗಿಸಬೇಕು, ವಿವಿಧ ಇಲಾಖೆಗಳಲ್ಲಿ ಅಧಿಕಾರಿಗಳ, ಸಿಬ್ಬಂದಿಗಳ ಕೊರತೆ ನೀಗಿಸಬೇಕು, ಜಿಲ್ಲಾ ಪಂಚಾಯತ್ ಇಂಜಿನಿಯರಿಂಗ್ ವಿಭಾಗದಲ್ಲಿ ಇಂಜಿನಿಯರ್ಗಳ ಕೊರತೆ ನೀಗಿಸಬೇಕು, ಪ್ಲಾಟಿಂಗ್ ಸಮಸ್ಯೆ ಪರಿಹರಿಸಬೇಕು ಮತ್ತಿತರ ಸೇರಿ ಹಲವು ಅರ್ಜಿಗಳನ್ನು ಸಲ್ಲಿಸಲಾಯಿತು

ಅರ್ಜಿದಾರರ ಅಹವಾಲನ್ನು ಆಲಿಸಿದ ಸಚಿವರು ಪರಿಹಾರಕ್ಕೆ ಸೂಚಿಸಿದರು. ಜನತಾ ದರ್ಶನ ಕಾರ್ಯಕ್ರಮದಲ್ಲಿ ಸಾರ್ವಜನಿಕರ ಅಹವಾಲುಗಳನ್ನು ಸ್ವೀಕರಿಸಲು ಜಿಲ್ಲಾಡಳಿತ ಹಾಗೂ ಜಿಲ್ಲಾ ಪಂಚಾಯತ್ನಿಂದ ವ್ಯವಸ್ಥಿತವಾದ ಸಿದ್ದತೆಗಳನ್ನು ಮಾಡಿಕೊಳ್ಳಲಾಗಿತ್ತು. ಇಲಾಖಾವಾರು ಕೌಂಟರ್ಗಳನ್ನು ಸಿದ್ಧಗೊಳಿಸಿ ಒಟ್ಟು 11ಕೌಂಟರ್ಗಳನ್ನು ತೆರೆದು ಅರ್ಜಿ ಸ್ವೀಕರಿಸಿದರು. ಜನತಾದರ್ಶನ ಕಾರ್ಯಕ್ರಮದಲ್ಲಿ ಎಲ್ಲಾ ಇಲಾಖೆಗಳ ಜಿಲ್ಲಾ ಮಟ್ಟದ ಅಧಿಕಾರಿಗಳು ಭಾಗವಹಿಸಿದ್ದರು. ಸಾರ್ವಜನಿಕರು ನೀಡಿದ ಅರ್ಜಿಯನ್ನು ಪಡೆಯಲು ವಿವಿಧ ಇಲಾಖೆಗಳಿಗಾಗಿ ಸ್ಥಳದಲ್ಲಿಯೇ ಕಳುಹಿಸಲಾಯಿತು. ನಂತರ ಸಾರ್ವಜನಿಕರು ತಮ್ಮ ಸಮಸ್ಯೆ,ಅಹವಾಲುಗಳನ್ನು ಜಿಲ್ಲಾ ಉಸ್ತುವಾರಿ ಸಚಿವರಿಗೆ ಸಲ್ಲಿಸಿ ಅವರಿಗೆ ಮೌಖಿಕವಾಗಿ ತಿಳಿಸಲು ವ್ಯವಸ್ಥೆ ಮಾಡಲಾಗಿತ್ತು. ಸಾರ್ವಜನಿಕರ ಸಮಸ್ಯೆಗಳನ್ನು ನಿಗದಿತ ಸಮಯದೊಳಗೆ ಇತ್ಯರ್ಥಪಡಿಸಿ, ಅಧಿಕಾರಿಗಳು ವರದಿ ಸಲ್ಲಿಸಲು ಸಚಿವರು ಸೂಚಿಸಿದರು.

ಶಾಸಕಿ ಭಾಗೀರಥಿ ಮುರುಳ್ಯ, ಪುತ್ತೂರು ಶಾಸಕರಾದ ಅಶೋಕ್ ಕುಮಾರ್ ರೈ,
ವಿಧಾನ ಪರಿಷತ್ ಸದಸ್ಯ ಮಂಜುನಾಥ ಭಂಡಾರಿ, ಜಿಲ್ಲಾಧಿಕಾರಿ ಮುಲ್ಲೈ ಮುಗಿಲನ್, ಜಿ.ಪಂ. ಕಾರ್ಯನಿರ್ವಹಣಾಧಿಕಾರಿ ಡಾ.ಆನಂದ್, ಹೆಚ್ಚುವರಿ ಜಿಲ್ಲಾಧಿಕಾರಿ ಡಾ.ಸಂತೋಷ್ ಕುಮಾರ್, ಡಿಎಫ್ಒ ಅಂಥೋನಿ ಮರಿಯಪ್ಪ, ಪುತ್ತೂರು ಉಪವಿಭಾಗದ ಸಹಾಯಕ ಕಮೀಷನರ್ ಜುಬಿನ್ ಮಹಾಪಾತ್ರ, ತಹಶೀಲ್ದಾರ್ ಜಿ.ಮಂಜುನಾಥ್, ವಿವಿಧ ಇಲಾಖೆಗಳ ಮತ್ತಿತರರು ಉಪಸ್ಥಿತರಿದ್ದರು.












