ಮೈಸೂರು: ಮೈಸೂರು ವಿಶ್ವವಿದ್ಯಾನಿಲಯದ ಪ್ರಸಾರಾಂಗ ವಿಭಾಗ ಮತ್ತು ಅರಿವು ಶೈಕ್ಷಣಿಕ ಮತ್ತು ಸಾಂಸ್ಕೃತಿಕ ಟ್ರಸ್ಟ್ ವತಿಯಿಂದ ಜಾನಪದ ಸಂಶೋಧಕ, ಲೇಖಕ ಡಾ.ಸುಂದರ ಕೇನಾಜೆ ಸಹಯೋಗದಲ್ಲಿ ರಚಿಸಿದ ಕೃತಿಗಳ ಬಿಡುಗಡೆ ಕಾರ್ಯಕ್ರಮ ಮೈಸೂರು ವಿಶ್ವವಿದ್ಯಾನಿಲಯದ ಕುವೆಂಪು ಸಭಾಂಗಣದಲ್ಲಿ ನ.18 ರಂದು ನಡೆಯಿತು.ಡಾ.ಕೇನಾಜೆ ಹಾಗೂ
ಇತರ ಏಳು ಲೇಖಕರನ್ನೊಳಗೊಂಡ ಬೃಹತ್ ಗ್ರಂಥ “ನಾವು ಕೂಗುವ ಕೂಗು” ಅಲ್ಲದೇ ಇತರ ಲೇಖಕರ “ಧರೆಗೆ ದೊಡ್ಡವರ ಕಾವ್ಯಗಳ ಏಳು ಪಠ್ಯಗಳು” ಎಂಬ ಕೃತಿ ಹಾಗೂ ಮೈಸೂರ್ ಗುರುರಾಜ್ ಮತ್ತು ತಂಡದವರು ಇಪ್ಪತ್ತು ಗಂಟೆಗಳ ಕಾಲ ಹಾಡಿದ ಮಂಟೇಸ್ವಾಮಿಯ ದೃಶ್ಯ ಶ್ರಾವ್ಯ ಸರಣಿ ಬಿಡುಗಡೆ ಕಾರ್ಯಕ್ರಮ ನಡೆಯಿತು. ಇವುಗಳ ಸಂಪಾದನೆಯನ್ನು ಹಿರಿಯ ಜಾನಪದ ವಿದ್ವಾಂಸ ಡಾ.ಕೃಷ್ಣ ಮೂರ್ತಿ ಹನೂರು ಮಾಡಿದ್ದರು.ಕಾರ್ಯಕ್ರಮದ ಉದ್ಘಾಟನೆಯನ್ನು ಕಪ್ಪಡಿ ಕ್ಷೇತ್ರದ ಪೀಠಾಧಿಪತಿ ಎಂ.ಎಲ್ ವರ್ಚಸ್ವಿ ಶ್ರೀಕಂಠ ಸಿದ್ದಲಿಂಗರಾಜೇ ಅರಸುರವರು ನಡೆಸಿ ಮಾತನಾಡಿದರು.
ಕೃತಿಗಳ ಬಿಡುಗಡೆಯನ್ನು ಕನ್ನಡ ಅಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ಡಾ.ಪುರುಷೋತ್ತಮ ಬಿಳಿಮಲೆ ನಡೆಸಿದರು. ಸಮಾರಂಭದ ಅಧ್ಯಕ್ಷತೆ ಹಾಗೂ ದೃಶ್ಯ ಶ್ರವ್ಯ ಸರಣಿಯ ಬಿಡುಗಡೆಯನ್ನು ಮೈಸೂರು ವಿಶ್ವವಿದ್ಯಾನಿಲಯದ ಕುಲಪತಿಗಳಾದ ಪ್ರೊ.ಎನ್.ಕೆ ಲೋಕನಾಥ್ ವಹಿಸಿದ್ದರು. ಪ್ರಸಾರಾಂಗದ ನಿರ್ದೇಶಕ ಪ್ರೊ.ಎನ್ ನಂಜಯ್ಯ ಹೊಂಗನೂರು, ಕೃತಿ ಸಂಪಾದಕರಾದ ಡಾ.ಕೃಷ್ಣ ಮೂರ್ತಿ ಹನೂರು, ಅರಿವು ಟ್ರಸ್ಟ್ ನ ಮೇನೆಜಿಂಗ್ ಟ್ರಸ್ಟ್ ಡಾ.ಎಂ.ಸಿ ಮನೋಹರ ಮಾತನಾಡಿದರು.
ಕೃತಿಗಳ ಲೇಖಕರು, ಗಾಯಕ ಮೈಸೂರು ಗುರುರಾಜ್ ಹಾಗೂ ದೃಶ್ಯ ಶ್ರಾವ್ಯ ಸರಣಿಯ ಛಾಯಾಚಿತ್ರ ಹಾಗೂ ಸಂಕಲನ ನಡೆಸಿದ ಕನ್ನಡಿ ಕ್ರಿಯೇಷನ್ ನ ರಂಜಿತ್ ಸೇತು ಉಪಸ್ಥಿತರಿದ್ದರು.













