ಸುಳ್ಯ: ಫಲಾಪೇಕ್ಷೆಯಿಲ್ಲದೆ ಸೇವೆ ಮಾಡುವ ಜನಜಾಗೃತಿ ವೇದಿಕೆ , ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯ ಕಾರ್ಯ ಶ್ಲಾಘನೀಯ. ಡಾ.ವೀರೇಂದ್ರ ಹೆಗ್ಗಡೆ ಯವರ ಜನಪರ ಚಿಂತನೆಯಿಂದ ಸಾಮಾನ್ಯ ಬಡ ಜನರ ಸಬಲೀಕರಣವಾಗಿದೆ ಎಂದು ಸುಳ್ಯ ಶಾಸಕಿ ಭಾಗೀರಥಿ ಮುರುಳ್ಯ ಹೇಳಿದರು.
ಸುಳ್ಯ ಯೋಜನಾ ಕಚೇರಿಯಲ್ಲಿ ಶುಕ್ರವಾರ ನಡೆದ ಸುಳ್ಯ ತಾಲೂಕು ಜನಜಾಗೃತಿ ವೇದಿಕೆಯ ನೂತನ ಪದಾಧಿಕಾರಿಗಳ ಪದಗ್ರಹಣ ಸಮಾರಂಭ ಹಾಗೂ ಮಾದಕ ವಸ್ತು ವಿರೋಧಿ ದಿನಾಚರಣೆಯನ್ನು
ಉದ್ಘಾಟಿಸಿ ಮಾತನಾಡಿದರು. ಯೋಜನೆಯ ಜತೆ ಕೈ ಜೋಡಿಸಿಕೊಂಡು ಕ್ಷೇತ್ರದ ಅಭಿವೃದ್ಧಿಗೆ ಪಕ್ಷ ಬೇಧ ಮರೆತು ಸೇವೆ ಮಾಡುತ್ತೇನೆ ಎಂದು ಅವರು ಹೇಳಿದರು.
ಸಮಾರಂಭದ ಅಧ್ಯಕ್ಷತೆಯನ್ನು ಅಖಿಲ ಕರ್ನಾಟಕ ಜನಜಾಗೃತಿ ವೇದಿಕೆಯ ಜಿಲ್ಲಾಧ್ಯಕ್ಷ ಪದ್ಮನಾಭ ಶೆಟ್ಟಿ ವಹಿಸಿದ್ದರು. ಮುಖ್ಯ ಅತಿಥಿಗಳಾಗಿ ಯೋಜನೆಯ ಜಿಲ್ಲಾ ನಿರ್ದೇಶಕ ಪ್ರವೀಣ್ ಕುಮಾರ್, ಜನಜಾಗೃತಿ ವೇದಿಕೆಯ ನೂತನ ಅಧ್ಯಕ್ಷ ಲೋಕನಾಥ ಅಮೆಚೂರ್, ನಿಕಟ ಪೂರ್ವ ಅಧ್ಯಕ್ಷರಾದ ಪಿ.ಸಿ.ಜಯರಾಮ, ವಿಶ್ವನಾಥ ರೈ ಕಳಂಜ, ವಿಮಲಾ ರಂಗಯ್ಯ ಸುಬ್ರಹ್ಮಣ್ಯ, ಭವಾನಿ ಶಂಕರ ಅಡ್ತಲೆ, ತಾಲೂಕು ಪ್ರಗತಿ ಬಂಧು
ಸ್ವ ಸಹಾಯ ಒಕ್ಕೂಟದ ಅಧ್ಯಕ್ಷ ಸುರೇಶ್ ಕಣೆಮರಡ್ಕ, ಉಡುಪಿ ವಿಭಾಗದ ಜನಜಾಗೃತಿ ವೇದಿಕೆಯ ಪ್ರಾದೇಶಿಕ ಯೋಜನಾಧಿಕಾರಿ ಗಣೇಶ್ ಆಚಾರ್ಯ ವೇದಿಕೆಯಲ್ಲಿ ಉಪಸ್ಥಿತರಿದ್ದರು.
ಈ ಸಂದರ್ಭದಲ್ಲಿ ಅಖಿಲ ಕರ್ನಾಟಕ ಜನಜಾಗೃತಿ ವೇದಿಕೆಯ ಸುಳ್ಯ ತಾಲೂಕಿನ ನೂತನ ಅಧ್ಯಕ್ಷರಾಗಿ ಆಯ್ಕೆಗೊಂಡಿರುವ ಲೋಕನಾಥ ಅಮೆಚೂರ್ ತಂಡದ ಸದಸ್ಯರಿಗೆ ಜಿಲ್ಲಾ ಅಧ್ಯಕ್ಷರು ಪದ ಪ್ರಧಾನ ನೆರವೇರಿಸಿದರು. ಶಾಸಕಿ ಕು.ಭಾಗೀರಥಿ ಮುರುಳ್ಯ ರವರನ್ನು ಹಾಗೂ ಜನಜಾಗೃತಿ ವೇದಿಕೆಯ ನಿಕಟ ಪೂರ್ವ ಅಧ್ಯಕ್ಷ ವಿಶ್ವನಾಥ ರೈ ಕಳಂಜ ರವರನ್ನು ಯೋಜನೆಯ ವತಿಯಿಂದ ಸನ್ಮಾನಿಸಲಾಯಿತು.
ಸಂಪನ್ಮೂಲ ವ್ಯಕ್ತಿ ಗಣೇಶ್ ಆಚಾರ್ಯ ಮಾದಕ ವಸ್ತುಗಳನ್ನು ಬಳಸುವುದರಿಂದ ಸಮಾಜದಲ್ಲಿ ಉಂಟಾಗುತ್ತಿರುವ ದುಷ್ಪರಿಣಾಮಗಳ ಕುರಿತು ಜಾಗೃತಿ ಉಪನ್ಯಾಸ ನೀಡಿದರು. ಬಾಂಧವ್ಯ ಜ್ಞಾನ ವಿಕಾಸ ಕೇಂದ್ರದ ಸದಸ್ಯರು ಪ್ರಾರ್ಥಿಸಿದರು. ಸುಳ್ಯ ತಾಲೂಕು ಯೋಜನಾಧಿಕಾರಿ ನಾಗೇಶ್ ಪಿ ಸ್ವಾಗತಿಸಿದರು. ಜಿಲ್ಲಾ ನಿರ್ದೇಶಕ ಪ್ರವೀಣ್ ಕುಮಾರ್ ಪ್ರಾಸ್ತಾವಿಕ ಮಾತನಾಡಿದ್ದರು. ಯೋಜನೆಯ ಕೃಷಿ ಅಧಿಕಾರಿ ರಮೇಶ್ ವರದಿ ಮಂಡಿಸಿದರು. ಪಂಜ ವಲಯ ಮೇಲ್ವಿಚಾರಕಿ ಕಲಾವತಿ ವಂದಿಸಿದರು. ಅಜ್ಜಾವರ ವಲಯ ಮೇಲ್ವಿಚಾರಕಿ ವಿಶಾಲ ಕಾರ್ಯಕ್ರಮ ನಿರೂಪಿಸಿದರು.