ನವದೆಹಲಿ: ಜಮ್ಮು ಮತ್ತು ಕಾಶ್ಮೀರಕ್ಕೆ ಸಂವಿಧಾನದ 370ನೇ ವಿಧಿಯಡಿ ನೀಡಲಾಗಿದ್ದ ವಿಶೇಷ ಸ್ಥಾನಮಾನ ರದ್ದುಪಡಿಸಿದ ಕೇಂದ್ರ ಸರ್ಕಾರದ ನಿರ್ಧಾರವನ್ನು ಸುಪ್ರೀಂ ಕೋರ್ಟ್ ಎತ್ತಿಹಿಡಿದಿದೆ.
ತೀರ್ಪು ಪ್ರಕಟಿಸುವ ವೇಳೆ, ‘ಸಂವಿಧಾನದ 370 ನೇ ವಿಧಿಯಡಿ ಇದ್ದ ವಿಶೇಷ ಸ್ಥಾನಮಾನವನ್ನು ರದ್ದುಗೊಳಿಸಲು ರಾಷ್ಟ್ರಪತಿಯವರು ಸಾಂವಿಧಾನಿಕ ಆದೇಶ ಹೊರಡಿಸುವ ಅಧಿಕಾರ ಹೊಂದಿದ್ದಾರೆ’ ಎಂದಿರುವ
ಮುಖ್ಯ ನ್ಯಾಯಮೂರ್ತಿ (ಸಿಜೆಐ) ಡಿ.ವೈ. ಚಂದ್ರಚೂಡ್ ನೇತೃತ್ವದ ಪೀಠ, ‘ಜಮ್ಮು ಮತ್ತು ಕಾಶ್ಮೀರದ ರಾಜ್ಯ ಸ್ಥಾನಮಾನವನ್ನು ಶೀಘ್ರವೇ ಮರುಸ್ಥಾಪಿಸುವಂತೆ ಕೇಂದ್ರಕ್ಕೆ ನಿರ್ದೇಶನ ನೀಡಲಾಗುವುದು’ ಎಂದು ಹೇಳಿದೆ. ಸಂವಿಧಾನದ 370ನೇ ವಿಧಿ ಕುರಿತಂತೆ ಕೇಂದ್ರ ಸರ್ಕಾರ ಕೈಗೊಂಡಿರುವ ನಿರ್ಧಾರ ಮಾನ್ಯವಾದದ್ದು 370ನೇ ವಿಧಿಯು ರಾಜ್ಯದಲ್ಲಿ ಜಾರಿಯಾದ ಮಧ್ಯಂತರ ವ್ಯವಸ್ಥೆ. ಅದು ತಾತ್ಕಾಲಿಕ ನಿಬಂಧನೆ ಎಂಬುದು ಒಕ್ಕಣೆಯಲ್ಲಿದೆ. 370 ನೇ ವಿಧಿಯು ಜಮ್ಮು ಮತ್ತು ಕಾಶ್ಮೀರವನ್ನು ಭಾರತದ ಒಕ್ಕೂಟದೊಂದಿಗೆ ಸಾಂವಿಧಾನಿಕವಾಗಿ ಒಗ್ಗೂಡಿಸುವ ಉದ್ದೇಶವನ್ನು ಹೊಂದಿದೆ. ಭಾರತಕ್ಕೆ ಸೇರ್ಪಡೆಯಾದ ಬಳಿಕ ಜಮ್ಮು ಮತ್ತು ಕಾಶ್ಮೀರದಲ್ಲಿ ಆಂತರಿಕ ಸಾರ್ವಭೌಮತ್ವ ಉಳಿಯುವುದಿಲ್ಲ. ಜಮ್ಮು ಮತ್ತು ಕಾಶ್ಮೀರವು ಭಾರತದ ಅವಿಭಾಜ್ಯ ಅಂಗವಾಗಿದೆ
ಜಮ್ಮು ಮತ್ತು ಕಾಶ್ಮೀರ ವಿಧಾನಸಭೆಗೆ 2024ರ ಸೆಪ್ಟೆಂಬರ್ 30ರ ಒಳಗೆ ಚುನಾವಣೆ ನಡೆಸಲು ಕ್ರಮ ಕೈಗೊಳ್ಳುವಂತೆ ಚುನಾವಣಾ ಆಯೋಗಕ್ಕೆ ಸೂಚಿಸಲಾಗುವುದು.ಜಮ್ಮು ಮತ್ತು ಕಾಶ್ಮೀರದ ರಾಜ್ಯ ಸ್ಥಾನಮಾನವನ್ನು ಶೀಘ್ರವೇ ಮರುಸ್ಥಾಪಿಸುವಂತೆ ಕೇಂದ್ರಕ್ಕೆ ನಿರ್ದೇಶನ ನೀಡಲಾಗುವುದು ಎಂದ ಸುಪ್ರೀಂ ಕೋರ್ಟ್ ಲಡಾಖ್ ಅನ್ನು ಕೇಂದ್ರಾಡಳಿತ ಪ್ರದೇಶವನ್ನಾಗಿ ಘೋಷಿಸುವ ನಿರ್ಧಾರವನ್ನು ಎತ್ತಿ ಹಿಡಿದಿದೆ.









