ಬೆಳ್ಳಾರೆ: ಕೇಂದ್ರ ಮತ್ತು ರಾಜ್ಯ ಸರಕಾರಗಳ ಹಲವು ಜನಪರ ಯೋಜನೆಗಳು ಬಡವರ ಮನೆ ಬಾಗಿಲಿಗೆ ನೇರವಾಗಿ ತಲುಪಬೇಕು. ಜನರ ಉದ್ದರದ ಉದ್ದೇಶದಿಂದಲೇ ಉತ್ತಮ ಯೋಜನೆಗಳ ಮೂಲಕ ಕೇಂದ್ರ ಮತ್ತು ರಾಜ್ಯದ ಡಬ್ಬಲ್ ಎಂಜಿನ್ ಸರಕಾರದಿಂದ ಬಡವರ ಕಣ್ಣೀರು ಒರೆಸುವ ಕೆಲಸ ಆಗಿದೆ ಎಂದು ಸಂಸದ ನಳಿನ್ ಕುಮಾರ್ ಕಟೀಲ್ ಹೇಳಿದರು. ಅವರು ಬೆಳ್ಳಾರೆಯ ಗೌರಿಪುರದಲ್ಲಿ 2.87 ಕೋಟಿ

ವೆಚ್ಚದಲ್ಲಿ ನಿರ್ಮಾಣ ವಾಗುತ್ತಿರುವ ಜಲಜೀವನ್ ಮಿಷನ್ ಯೋಜನೆಗೆ ಗುದ್ದಲಿಪೂಜೆ ನೆರವೇರಿಸಿ ಮಾತನಾಡಿದರು. ರಾಮರಾಜ್ಯದ ಕಲ್ಪನೆ ಸಾಕಾರವಾಗಬೇಕಾದರೆ ಗ್ರಾಮಗಳು ಪುನರ್‌ಸ್ಥಾನ ವಾಗವೇಕು ಎಂದು ಗಾಂಧಿಜೀಯ ಕನಸಾಗಿತ್ತು. ಗಾಂಧಿಜೀ ಕನಸು ಕಳೆದ 8 ವರ್ಷಗಳಿಂದ ಸಾಕಾರಗೊಳ್ಳುತ್ತಿದೆ. 4 ಕೋಟಿ ಮನೆಗಳನ್ನು ಕೇಂದ್ರ ಸರಕಾರ ನೀಡಿದೆ. 18 ಸಾವಿರ ಹಳ್ಳಿಗಳಿಗೆ ವಿದ್ಯುತ್ ಸಂಪರ್ಕ ನೀಡಲಾಗಿದೆ. 12 ಕೋಟಿ ಮನೆಗಳಿಗೆ ಶೌಚಾಲಯ ಭಾಗ್ಯವನ್ನು ನೀಡಲಾಗಿದೆ. ಕಳೆದ 8 ವರ್ಷದಲ್ಲಿ 600 ಕೋಟಿ ಅನುದಾನ ಜಿಲ್ಲೆಗೆ ಹರಿದು ಬರುವ ಮೂಲಕ ಅಭಿವೃದ್ದಿಗೆ ಕೇಂದ್ರ ಸರಕಾರ ಕೊಡುಗೆ ನೀಡಿದೆ ಎಂದರು.
ಬಂದರು ಮತ್ತು ಮೀನುಗಾರಿಕಾ ಸಚಿವ ಎಸ್. ಅಂಗಾರ ಮಾತನಾಡಿ ದೇಶದಲ್ಲಿ ಮತ್ತು ರಾಜ್ಯದಲ್ಲಿ ಉತ್ತಮ ಸಂಘಟನೆಯ ನಾಯಕತ್ವದಿಂದ ಅಭಿವೃದ್ದಿ ಸಾಧ್ಯವಾಗಿದೆ. ಅಭಿವೃದ್ದಿ ಸಹಿಸವರಿಂದ ಟೀಕೆಗಳು ಸಹಜ. ಟೀಕೆಗಳಿಗೆ ಕಿವಿ ಕೊಡದೇ ನಮ್ಮ ಕೆಲಸಗಳು ಸಾಗಬೇಕು. ಸರಕಾರದ ಉತ್ತಮ ಯೋಜನೆಗಳು ಬಡವರ ಮನೆ ಬಾಗಿಲಿಗೆ ತಲುಪಬೇಕು ಎನ್ನುವುದೇ ಸರಕಾರದ ಉದ್ದೇಶ ಎಂದು ಹೇಳಿದರು.
ಸಮಾರಂಭದ ಅಧ್ಯಕ್ಷತೆಯನ್ನು ಬೆಳ್ಳಾರೆ ಗ್ರಾ.ಪಂ. ಅದ್ಯಕ್ಷ ಚಂದ್ರಶೇಖರ್ ಪನ್ನೆ ವಹಿಸಿದ್ದರು. ವೇದಿಕೆಯಲ್ಲಿ ಮೀನುಗಾರಿಕಾ ಅಭಿವೃದ್ದಿ ನಿಗಮದ ಅಧ್ಯಕ್ಷ ಎ.ವಿ.ತೀರ್ಥರಾಮ, ಗ್ರಾ.ಪಂ. ಉಪಾಧ್ಯಕ್ಷೆ ಗೌರಿ, ರಾಜರಾಜೇಶ್ವರಿ ದೇವಸ್ಥಾನದ ವ್ಯವಸ್ಥಾಪನಾ ಸಮಿತಿ ಅದ್ಯಕ್ಷ ಚಂದ್ರಹಾಸ ಮಣಿಯಾಣಿ, ನೀರಾವರಿ ಇಲಾಖೆಯ ಇಂಜಿನಿಯರ್ ಮಣಿಕಂಠ ಉಪಸ್ಥಿತರಿದ್ದರು.
ತಾಲೂಕು ಪಂಚಾಯಿತಿ ಕಾರ್ಯನಿರ್ವಹಣಾಧಿಕಾರಿ ಭವಾನಿಶಂಕರ್.ಎನ್ ಪ್ರಾಸ್ತಾವಿಕವಾಗಿ ಮಾತನಾಡಿದರು. ಪಂಚಾಯಿತಿ ಅಭಿವೃದ್ದಿ ಅಧಿಕಾರಿ ಶ್ಯಾಮ್ ಪ್ರಸಾದ್ ಸ್ವಾಗತಿಸಿ, ಅಧ್ಯಕ್ಷ ಚಂದ್ರಶೇಖರ್ ಪನ್ನೆ ವಂದಿಸಿದರು. ಪ್ರದೀಪ್ ಕುಮಾರ್ ರೈ ಪನ್ನೇ ಕಾರ್ಯಕ್ರಮ ನಿರೂಪಿಸಿದರು.