ಐವರ್ನಾಡು:ಐವರ್ನಾಡು ಪ್ರಾಥಮಿಕ ಕೃಷಿ ಪತ್ತಿನ ಸಹಕಾರಿ ಸಂಘದ ಚುನಾವಣೆಯಲ್ಲಿ ಎಸ್.ಎನ್.ಮನ್ಮಥರ ನೇತೃತ್ವದ ತಂಡ ಭರ್ಜರಿ ಜಯಭೇರಿ ಗಳಿಸಿದ ಹಿನ್ನಲೆಯಲ್ಲಿ ಕಾರ್ಯಕರ್ತರು ಸಂಭ್ರಮಾಚರಣೆ ನಡೆಸಿದರು. ಕಾರ್ಯಕರ್ತರು ಪಟಾಕಿ ಸಿಡಿಸಿ ವಿಜಯೋತ್ಸವ ಆಚರಿಸಿದರು.ವಿಜೇತ ಅಭ್ಯರ್ಥಿಗಳ ಪರ
ಘೋಷಣೆ ಹಾಕಿ ಸಂಭ್ರಮಿಸಿದರು.ವಿಜಯಿ ಅಭ್ಯರ್ಥಿಗಳಿಗೆ ಹಾರ ಹಾಕಿ, ಹೂಗುಚ್ಛ ನೀಡಿ ಅಭಿನಂದಿಸಿದರು. ಈ ಸಂದರ್ಭದಲ್ಲಿ ಮಾತನಾಡಿದ ಎಸ್.ಎನ್.ಮನ್ಮಥ ಅವರು ಭರ್ಜರಿ ಗೆಲುವು ನೀಡಿದ ಸಹಕಾರಿ ಸಂಘದ ಎಲ್ಲಾ ಮತದಾರರಿಗೆ, ಐವರ್ನಾಡು ಗ್ರಾಮಸ್ಥರಿಗೆ ಕೃತಜ್ಞತೆ ಸಲ್ಲಿಸಿದರು. ಚುನಾವಣೆಗೆ ಹಗಲಿರುಳು ದುಡಿದ ಎಲ್ಲಾ ಕಾರ್ಯಕರ್ತರಿಗೆ ಅಭಿನಂದನೆ ಸಲ್ಲಿಸಿದರು. ಕಳೆದ 10 ವರ್ಷದಲ್ಲಿ ಸಹಕಾರಿ ಸಂಘವನ್ನು ಅಭಿವೃದ್ಧಿ ಹಾದಿಯಲ್ಲಿ ಮುನ್ನಡೆಸಲು ಸಾಧ್ಯವಾಗಿದೆ. ಸಂಘವು ಜಿಲ್ಲೆಯಲ್ಲಿಯೇ ಪ್ರತಿಷ್ಠಿತ ಸಹಕಾರಿ ಸಂಘವಾಗಿ ಬೆಳಸಲು ಸಾಧ್ಯವಾಗಿದೆ. ಮುಂದೆಯೂ ಜನರ ನಿರೀಕ್ಷೆಗೆ ತಕ್ಕಂತೆ ಸಂಗವನ್ನು ಅಭಿವೃದ್ಧಿ ಪಥದಲ್ಲಿ ಮುನ್ನಡೆಸಲು ನಮ್ಮ ತಂಡ ಬದ್ಧವಾಗಿದೆ ಎಂದು ಎಸ್.ಎನ್.ಮನ್ಮಥ ಹೇಳಿದರು.