ವಾಷಿಂಗ್ಟನ್: ಪಶ್ಚಿಮ ಏಷ್ಯಾ ಸಂಘರ್ಷವನ್ನು ಶಮನಗೊಳಿಸುವ ನಿಟ್ಟಿನಲ್ಲಿ ಮಹತ್ವದ ಬೆಳವಣಿಗೆಯಾಗಿ, ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಇರಾನ್ ಮೇಲಿನ ಸೈನಿಕ ದಾಳಿಯನ್ನು ತಾತ್ಕಾಲಿಕವಾಗಿ ಸ್ಥಗಿತಗೊಳಿಸುವ ನಿರ್ಧಾರ ಪ್ರಕಟಿಸಿದ್ದಾರೆ.ಈ ಕುರಿತು ಸಾಮಾಜಿಕ ಜಾಲತಾಣದಲ್ಲಿ ಪ್ರಕಟಣೆ ನೀಡಿರುವ ಟ್ರಂಪ್, ಇರಾನ್ನ ವಿದ್ಯುತ್ ಸ್ಥಾವರಗಳು ಹಾಗೂ
ಇಂಧನ ಮೂಲಸೌಕರ್ಯಗಳ ಮೇಲೆ ನಡೆಸಲು ಉದ್ದೇಶಿಸಿದ್ದ ದಾಳಿಯನ್ನು ಐದು ದಿನಗಳ ಕಾಲ ಮುಂದೂಡಲಾಗಿದೆ ಎಂದು ತಿಳಿಸಿದ್ದಾರೆ.ಈ ನಿರ್ಧಾರದ ಹಿಂದೆ ಪ್ರಮುಖ ಕಾರಣವೆಂದರೆ ಅಮೆರಿಕ ಮತ್ತು ಇರಾನ್ ನಡುವೆ ನಡೆಯುತ್ತಿರುವ ರಾಜತಾಂತ್ರಿಕ ಮಾತುಕತೆಗಳು ಕಳೆದ ಎರಡು ದಿನಗಳಿಂದ ಸಕಾರಾತ್ಮಕವಾಗಿದ್ದು, ಈ ಪ್ರಕ್ರಿಯೆಗೆ ಮತ್ತಷ್ಟು ಅವಕಾಶ ನೀಡಲು ದಾಳಿಯನ್ನು ಮುಂದೂಡಲಾಗಿದೆ ಎಂದು ಟ್ರಂಪ್ ಹೇಳಿದ್ದಾರೆ.
ಈ ಅವಧಿಯಲ್ಲಿ ಯಾವುದೇ ರೀತಿಯ ಸೈನಿಕ ದಾಳಿಗಳನ್ನು ನಡೆಸದಂತೆ ನಿರ್ದೇಶನ ನೀಡಲಾಗಿದೆ.ಇತ್ತೀಚೆಗೆ ಅಮೆರಿಕವು ಇರಾನ್ನ ಪ್ರಮುಖ ವಿದ್ಯುತ್ ಸ್ಥಾವರಗಳನ್ನು ಗುರಿಯಾಗಿಸಿಕೊಂಡು ದಾಳಿ ನಡೆಸುವುದಾಗಿ ಹೇಳಿತ್ತು. ಇದರಿಂದ ಮಧ್ಯಪ್ರಾಚ್ಯದಲ್ಲಿ ಯುದ್ಧ ಭೀತಿ ಮತ್ತಷ್ಟು ಗಾಢವಾಗಿತ್ತು. ಆದರೆ, ಈಗ ದಾಳಿ ತಾತ್ಕಾಲಿಕವಾಗಿ ನಿಲ್ಲಿಸಿರುವುದರಿಂದ ಯುದ್ಧದ ತೀವ್ರತೆ ಕಡಿಮೆಯಾಗುವ ಸಾಧ್ಯತೆ ಇದ್ದು, ಜಾಗತಿಕ ಮಟ್ಟದಲ್ಲಿ ಒತ್ತಡ ತಗ್ಗುವ ನಿರೀಕ್ಷೆ ಇದೆ.














