ನವದೆಹಲಿ: ಇಂಡಿಯನ್ ಪ್ರೀಮಿಯರ್ ಲೀಗ್ ಕ್ರಿಕೆಟ್ನ ಎರಡನೇ ಹಂತದ ವೇಳಾಪಟ್ಟಿಯನ್ನು ಭಾರತೀಯ ಕ್ರಿಕೆಟ್ ನಿಯಂತ್ರಣ ಮಂಡಳಿಯು (ಬಿಸಿಸಿಐ) ಪ್ರಕಟಿಸಿದೆ. ಮೊದಲ ಹಂತದ ಪಟ್ಟಿ ಈ ಹಿಂದೆ ಬಿಡುಗಡೆ ಮಾಡಿತ್ತು. ಎರಡನೇ ಪಟ್ಟಿ ಪ್ರಕಾರ ಲೀಗ್ ಹಂತದ ಪಂದ್ಯಗಳು ಮೇ 24ರಂದು ಕೊನೆಗೊಳ್ಳಲಿವೆ. ಟೂರ್ನಿಯ ಫೈನಲ್ ಪಂದ್ಯವು
ಬೆಂಗಳೂರಿನಲ್ಲಿ ಮೇ 31ರಂದು ನಡೆಯಲಿದೆ.
ಹೋದ ವಾರ ಬಿಡುಗಡೆ ಮಾಡಿದ್ದ ಮೊದಲ ಹಂತದ ವೇಳಾಪಟ್ಟಿಯಲ್ಲಿ ಮೊದಲ ಹಂತದಲ್ಲಿ ಮಾರ್ಚ್ 28ರಿಂದ ಏಪ್ರಿಲ್ 12ರವರೆಗಿನ ಪಂದ್ಯಗಳ ಮಾಹಿತಿ ನೀಡಲಾಗಿತ್ತು. ಮೊದಲ ಪಂದ್ಯವು ಬೆಂಗಳೂರಿನಲ್ಲಿ ‘ಹಾಲಿ ಚಾಂಪಿಯನ್’ ರಾಯಲ್ ಚಾಲೆಂಜರ್ಸ್ ಬೆಂಗಳೂರು ಮತ್ತು ಸನ್ರೈಸರ್ಸ್ ಹೈದರಾಬಾದ್ ನಡುವೆ ಮಾ.28ರಂದು ನಡೆಯಲಿದೆ. ಏಪ್ರಿಲ್ 13 ರಿಂದ ಮೇ 24ರವರೆಗಿನ ಪಂದ್ಯಗಳ ಎರಡನೇ ಹಂತದ ವೇಳಾಪಟ್ಟಿಯನ್ನು ಈಗ ಬಿಡುಗಡೆ ಮಾಡಲಾಗಿದೆ. ಭಾರತದ 12 ತಾಣಗಳಲ್ಲಿ ಪಂದ್ಯಗಳು ನಡೆಯಲವೆ. ಬೆಂಗಳೂರು, ಮುಂಬೈ, ಚೆನ್ನೈ, ಕೋಲ್ಕತ್ತ, ದೆಹಲಿ, ಅಹಮದಾಬಾದ್, ಹೈದರಾಬಾದ್, ಲಖನೌ, ಜೈಪುರ, ಧರ್ಮಶಾಲಾ, ರಾಯಪುರ ಮತ್ತು ನವಚಂಡೀಗಡದಲ್ಲಿ ಪಂದ್ಯಗಳು ನಡೆಯಲಿವೆ.
ಎರಡನೇ ಹಂತದ ವೇಳಾಪಟ್ಟಿಯಲ್ಲಿ ಎಂಟು ಡಬಲ್ ಹೆಡರ್ ಪಂದ್ಯಗಳಿವೆ. ಪಂಜಾಬ್ ಕಿಂಗ್ಸ್ ತಂಡವು ತನ್ನ ತವರಿನ ಪಂದ್ಯಗಳನ್ನು ನವಚಂಡೀಗಡ ಮತ್ತು ಧರ್ಮಶಾಲಾದಲ್ಲಿ ಆಡಲಿದೆ. ರಾಜಸ್ಥಾನ ರಾಯಲ್ಸ್ ತಂಡವು ತನ್ನ ತವರಿನ ನಾಲ್ಕು ಪಂದ್ಯಗಳನ್ನು ಜೈಪುರದಲ್ಲಿ ಆಡಲಿದೆ. ಆರ್ಸಿಬಿ ತಂಡವು ಬೆಂಗಳೂರಿನಲ್ಲಿ ಮೂರು ಮತ್ತು ರಾಯಪುರದಲ್ಲಿ ಎರಡು ಪಂದ್ಯಗಳನ್ನು ಆಡಲಿದೆ. ಪ್ಲೇಆಫ್ ಪಂದ್ಯಗಳ ದಿನಾಂಕಗಳನ್ನು ಇನ್ನೂ ಮುಂದಿನ ಹಂತದಲ್ಲಿ ಪ್ರಕಟಿಸಲಾಗುವುದು. ಎರಡನೇ ಹಂತದಲ್ಲಿ ಪ್ಲೇ-ಆಫ್ ಹಂತಕ್ಕಾಗಿ ಸ್ಥಾನ ಖಚಿಸಲು ಹೆಚ್ಚು ಜಿದ್ದಾಜಿದ್ದಿನಿಂದ ತಂಡಗಳು ಹೋರಾಡಲಿವೆ. ಏಪ್ರಿಲ್ 13ರಂದು ಹೈದರಾಬಾದ್ನಲ್ಲಿ ಸನ್ರೈಸರ್ಸ್ ಹೈದರಾಬಾದ್ ಹಾಗೂ ರಾಜಸ್ಥಾನ ರಾಯಲ್ಸ್ ನಡುವಣ ಪಂದ್ಯದೊಂದಿಗೆ ಎರಡನೇ ಹಂತ ಆರಂಭವಾಗಲಿದೆ.
ಎರಡನೇ ಹಂತದಲ್ಲಿ ಎಂಟು ಡಬಲ್ ಹೆಡರ್ (ದಿನಕ್ಕೆ 2 ಪಂದ್ಯ) ಪಂದ್ಯಗಳು ನಿಗದಿಯಾಗಿವೆ. ಸಂಜೆಯ ಪಂದ್ಯಗಳು 3.30ಕ್ಕೆ ಹಾಗೂ ರಾತ್ರಿಯ ಪಂದ್ಯಗಳು 7.30ಕ್ಕೆ ಸರಿಯಾಗಿ ಆರಂಭವಾಗಲಿವೆ.










